ಡಾ| ಡಿ.ಜಿ.ಶೆಟ್ಟಿ ಎಜ್ಯುಕೇಷನಲ್ ಸೊಸೈಟಿಯ ಪದವಿ ಕಾಲೇಜುಗಳ 24 ನೇ ವಾರ್ಷಿಕೋತ್ಸವ.
ಧಾರವಾಡ 17 : ಡಾ| ಡಿ.ಜಿ.ಶೆಟ್ಟಿ ಎಜ್ಯುಕೇಷನಲ್ ಸೊಸೈಟಿಯ ಪದವಿ ಕಾಲೇಜುಗಳ 24 ನೇ ವಾರ್ಷಿಕೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯಅತಿಥಿಗಳು ಹಾಗೂ ಉದ್ಘಾಟಕರಾಗಿ ಆಗಮಿಸಿದ್ದ ಎಮ್. ವಿಜಯಕುಮಾರ ಜನರಲ್ ಮ್ಯಾನೇಜರ್, ಕೆನರಾ ಬ್ಯಾಂಕ್ ಇವರು ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಪದವಿ ನಂತರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆದುಕೊಳ್ಳಲು ಪ್ರಯತ್ನಿಸಬೇಕು.ಬ್ಯಾಂಕ್ ಇತ್ತೀಚಿನ ದಿನಗಳಲ್ಲಿ ಪ್ರತಿ ವ್ಯಕ್ತಿಯ ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿದೆ. ಬ್ಯಾಂಕಿನಲ್ಲಿ ಖಾತೆ ಹೊಂದುವುದು ಅನಿವಾರ್ಯವಾಗಿದೆ. ಬ್ಯಾಂಕ್ ನೀಡುತ್ತಿರುವ ಅನೇಕ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ವಿವರಿಸಿ, ಉಳಿತಾಯದ ಬಗ್ಗೆ ಅರಿವು ಮೂಡಿಸಿದರು.
ಡಾ.ಡಿ.ಜಿ.ಶೆಟ್ಟಿ ಏಜ್ಯುಕೇಷನಲ್ ಸೊಸೈಟಿಯು ಪ್ರತಿ ವರ್ಷ ಕೊಡಲ್ಪಡುವ ವೈದ್ಯಶ್ರೀ ಪ್ರಶಸ್ತಿ-2025 ಯನ್ನು ಬಸವರಾಜ ಯ.ಹೊಂಗಲ ವೈದ್ಯರು,ಆರೋಗ್ಯ ಇಲಾಖೆ, ಯು.ಎ.ಇ. ದುಬೈ ಹಾಗೂ ವಿದ್ಯಾವಿಕಾಸ ಪ್ರಶಸ್ತಿ-2025 ಯನ್ನು ಮಹಾದೇವ ಅಣ್ಣಪ್ಪ ಹುಲಗೆಜ್ಜೆ, ಪ್ರಾಚಾರ್ಯರು, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಧಾರವಾಡ ಮತ್ತು ವಿದ್ಯಾಪೋಷಕ ಪ್ರಶಸ್ತಿ-2025 ಯನ್ನು ಬಾಪುಗೌಡ ಎಸ್.ಪಾಟೀಲ, ಹಿರಿಯ ಸಹಕಾರಿ ಧುರೀಣರು, ಧಾರವಾಡ ಇವರಿಗೆ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಯಿತು.
ಗೌರವ ಅತಿಥಿಗಳಾದ ಸುಗ್ಗಿ ಸುಧಾಕರ ಶೆಟ್ಟಿ, ಉದ್ದಿಮೆದಾರರು ಹಾಗೂ ಮಾಜಿ ಅಧ್ಯಕ್ಷರು ಬಂಟರ ಸಂಘ, ಹುಬ್ಬಳ್ಳಿ ಇವರು ಪ್ರತಿಭಾ ಸ್ಫೂರ್ತಿ-2025 ಸ್ಮರಣಿಕೆಯನ್ನು ಬಿಡುಗಡೆ ಮಾಡಿ, ಮಾತನಾಡಿ ವಿದ್ಯಾಸಂಸ್ಥೆಯು ಜ್ಞಾನಾರ್ಜನೆಯ ದೇವಾಲಯವಿದ್ದಂತೆ ಈ ದೇವಾಲಯದಲ್ಲಿ ಎಲ್ಲ ಪಂಗಡದವರು ಜಾತಿಭೇಧವಿಲ್ಲದೆ ವಿದ್ಯೆಯನ್ನು ಪಡೆಯಲು ಬರುತ್ತಾರೆ. ಜೀವನದಲ್ಲಿ ವಿದ್ಯೆಯೇ ಒಂದು ದೊಡ್ಡ ಶಕ್ತಿ, ಈ ಶಕ್ತಿಯನ್ನು ಪಡೆಯಲು ವಿದ್ಯಾರ್ಥಿಗಳು ಶ್ರ‍್ರಮವಹಿಸಿದಲ್ಲಿ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿ ಜೀವನವೂ ಅಮುಲ್ಯವಾದುದು ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಡಾ. ಬಸವರಾಜ ಯ.ಹೊಂಗಲ ಮಾತನಾಡಿ, ಇಂದಿನ ದಿನಗಳಲ್ಲಿ ಆರೋಗ್ಯವೇ ಭಾಗ್ಯ ಎಂಬ ಗಾದೆಯಂತೆ ಆರೋಗ್ಯವಂತ ವ್ಯಕ್ತಿ ದೇಶದ ಸಂಪತ್ತಾಗಿರುತ್ತಾನೆ. ಕೇವಲ ಆರೋಗ್ಯವಂತ ವ್ಯಕ್ತಿ ಮಾತ್ರ ಸಮಾಜದ ಒಳಿತಿಗಾಗಿ ಶ್ರಮಿಸಬಲ್ಲ ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಒಳ್ಳೆಯ ಆರೋಗ್ಯವನ್ನು ಹೊಂದಿ, ಒಳ್ಳೆಯ ಕೆಲಸಗಳಲ್ಲಿ ತೊಡಗಿಸಿಕೊಂಡು, ತಾವು ಕಲಿತ ವಿದ್ಯಾ ಸಂಸ್ಥೆ, ಪಾಲಕರಿಗೆ ಹಾಗೂ ಸಮಾಜಕ್ಕೆ ಒಳಿತನ್ನು ಮಾಡಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬಾಪುಗೌಡ ಎಸ್. ಪಾಟೀಲ ಇವರು ಮಾತನಾಡಿ ವಿದ್ಯಾರ್ಥಿಗಳಿಗೆ ಸಹಕಾರದ ಮಹತ್ವವನ್ನು ತಿಳಿಸಿದರು ಹಾಗೂ ಸಂಸ್ಥೆಯ ೨೪ ವರ್ಷಗಳ ಸುಧೀರ್ಘ ಪಯಣವನ್ನು ಶ್ಲಾಘನೆ ಮಾಡಿ ಶುಭ ಹಾರೈಸಿದರು. ಹಾಗೂ ಮಹಾದೇವ ಅಣ್ಣಪ್ಪ ಹುಲಗೆಜ್ಜೆ ಇವರು ಮಾತನಾಡುತ್ತಾ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿ ಸಂಸ್ಥೆಗೆ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ.ಜಿ.ಶೆಟ್ಟಿಯವರು ವಹಿಸಿ, ಸಂಸ್ಥೆಯು ಕಳೆದ 24 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ವಿದ್ಯಾವಂತ ಯುವಕರು ಒಂದು ಒಳ್ಳೆಯ ಸಮಾಜ ನಿರ್ಮಾಣ ಮಾಡಬಲ್ಲರು ಎಂಬುದನ್ನು ಮನಗಂಡು ಸಂಸ್ಥೆಯು ವಿದ್ಯೆಗೆ ಪ್ರಾಮುಖ್ಯತೆ ನೀಡುತ್ತಿದೆ ಎಂದು ಹೇಳಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು. . ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಡಾ.ಎಸ್.ಎಮ್ ಸಾಲಿಮಠ, ಸುವರ್ಣಲತಾ ಉಪ್ಪಿನ, ಸುನೀಲ ಮೆಣಸಿನಕಾಯಿ, ಲತಾ ಹಿರೇಮಠ, ಶರಣೇಶ ವಾಲಿ ಮತ್ತು ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಪ್ರೊ. ರಶ್ಮಿ ಎಮ್ ಶೆಟ್ಟಿ ಹಾಗೂ ಪ್ರೊ. ಎಸ್ ಎನ್ ಗುಡಿಯವರು ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರೊ.ಗಂಗಾ ಯಲಿಗಾರ ನಡೆಸಿಕೊಟ್ಟರು. ಪ್ರೊ. ಅನಿತಾ ಕೋರೆ ಸ್ವಾಗತಿಸಿದರು ಹಾಗೂ ಪ್ರೊ. ಸೀಮಾ ಕೊಳಗಿ ಇವರು ವಂದನಾರ್ಪಣೆಯನ್ನು ಮಾಡಿದರು.