ಕಟ್ಟಡ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೇ ಹೋಗಿ ಆರೋಗ್ಯ ತಪಾಸಣೆ, ಚಿಕಿತ್ಸೆ ಒದಗಿಸುವ ಸಂಚಾರಿ ಆರೋಗ್ಯ ಘಟಕಗಳಿಗೆ ಚಾಲನೆ ನೀಡಿದ ಸಿಎಂ*

*ಕಟ್ಟಡ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೇ ಹೋಗಿ ಆರೋಗ್ಯ ತಪಾಸಣೆ, ಚಿಕಿತ್ಸೆ ಒದಗಿಸುವ ಸಂಚಾರಿ ಆರೋಗ್ಯ ಘಟಕಗಳಿಗೆ ಚಾಲನೆ ನೀಡಿದ ಸಿಎಂ* 
*ಬಸವಣ್ಣನವರ ಕಾಯಕ-ದಾಸೋಹ ಪರಿಕಲ್ಪನೆಯಲ್ಲಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ: ಸಿ.ಎಂ.ಸಿದ್ದರಾಮಯ್ಯ*  
=====================
*ಕಾರ್ಮಿಕರು ಶ್ರದ್ಧೆಯಿಂದ ಕೆಲಸ ಮಾಡಲು ಆರೋಗ್ಯವಾಗಿರಬೇಕು: ಮುಖ್ಯಮಂತ್ರಿ* 

*ಸಂಚಾರಿ ಆರೋಗ್ಯ ಘಟಕ ಸೇವೆ ಇತರ ರಾಜ್ಯಗಳಿಗೂ ಮಾದರಿಯಾಗಿದೆ: ಸಚಿವ ಸಂತೋಷ್‌ ಲಾಡ್‌* 
ಬೆಂಗಳೂರು ಮಾರ್ಚ್‌ 10: ಇಡೀ ದೇಶ ಕಾರ್ಮಿಕರ ಶ್ರಮ, ಅವರ ದುಡಿಮೆಯನ್ನು ಅವಲಂಬಿಸಿದೆ‌. ಸಮಾಜದಲ್ಲಿ ಒಂದೇ ವರ್ಗದವರು ದುಡಿಯುತ್ತಿರಬಾರದು, ಎಲ್ಲಾ ವರ್ಗದವರೂ ದುಡಿಯಬೇಕು. ಆಗ ಮಾತ್ರ ಬುದ್ದ, ಬಸವ, ಅಂಬೇಡ್ಕರ್ ಆಶಯದ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. 

ವಿಧಾನಸೌಧದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಕೆಲಸದ ಸ್ಥಳಗಳಲ್ಲೇ ಆರೋಗ್ಯ ಸೇವೆ ಒದಗಿಸುವ 135 "ಸಂಚಾರಿ ಆರೋಗ್ಯ ಘಟಕ" ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. 

ಬಸವಣ್ಣನವರ ಕಾಯಕ-ದಾಸೋಹ ಪರಿಕಲ್ಪನೆಯಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ‌. ಸಮಾಜದಲ್ಲಿ ದುಡಿಯುವ ವರ್ಗ ಒಂದು ಕಡೆ ಇದ್ದರೆ, ದುಡಿಸಿಕೊಳ್ಳುವ ವರ್ಗ ಮತ್ತೊಂದು ಕಡೆ ಇರುತ್ತದೆ. ಯಾರು ಉತ್ಪಾದನಾ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೋ ಅವರೇ ದೇಶದ ನಿರ್ಮಾತೃಗಳು ಎಂದರು. 

ನಾಡಿನ ಹಿತದೃಷ್ಟಿಯಿಂದ ಕಾರ್ಮಿಕರು ಕೆಲಸ ಮಾಡುತ್ತಾರೆ. ಅವರು ಶ್ರದ್ಧೆಯಿಂದ ಕೆಲಸ ಮಾಡಬೇಕಾದರೆ ಆರೋಗ್ಯವಾಗಿರಬೇಕು, ಅವರು ಆರೋಗ್ಯವಾಗಿ ಇರಲು ಇಂತಹ ಸೌಲಭ್ಯಗಳು ಬೇಕು. ಇದರನ್ನು ಕಾರ್ಮಿಕ ಇಲಾಖೆ ಸಮರ್ಥವಾಗಿ ನೋಡಿಕೊಳ್ಳುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. 
ಇಡೀ ದೇಶದಲ್ಲಿ ಎಲ್ಲೂ ಕೂಡ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರಿಗೆ ಅವರ ಆರೋಗ್ಯ ಕಾಪಾಡಲು ಇಂತಹ ಯೋಜನೆಗಳಿಲ್ಲ. ಮೊದಲ ಬಾರಿಗೆ ರಾಜ್ಯದಲ್ಲಿ ವಿನೂತನ ಕಾರ್ಯಕ್ರಮ ನಾವು ಮಾಡಿದ್ದೇವೆ. ಕಾರ್ಮಿಕರು ಎಲ್ಲಿ ಕೆಲಸ ಮಾಡುತ್ತಾರೋ ಅಲ್ಲೇ ಹೋಗಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡುವುದು ಅದರಲ್ಲೂ ಉಚಿತವಾಗಿ ಮಾಡುವುದು ಒಳ್ಳೆಯ ಯೋಜನೆ ಎಂದರು. 

ಸಚಿವ ಸಂತೋಷ್ ಲಾಡ್ ಅವರ ಕಾಳಜಿ ಮತ್ತು ಕರ್ತವ್ಯಪ್ರಜ್ಞೆಯಿಂದಾಗಿ ಉಚಿತ ಸಂಚಾರಿ ಆಸ್ಪತ್ರೆಗಳನ್ನು ಜಾರಿಗೊಳಿಸಲಾಗಿದೆ. ಕಾರ್ಮಿಕರ ಸೆಸ್ ಹಣದಿಂದ ಕಾರ್ಮಿಕ ಕಲ್ಯಾಣ ಮಂಡಳಿ ಸುಸಜ್ಜಿತ ಸಂಚಾರಿ ಆಸ್ಪತ್ರೆಗಳನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದರು.

ಕಟ್ಟಡ ಮತ್ತು ಇತರೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣದಿಂದ ಸರ್ಕಾರ ಕಾರ್ಮಿಕರ ಮಕ್ಕಳಿಗಾಗಿ ಉಚಿತ ಊಟ ಮತ್ತು ವಸತಿ ಶಾಲೆಗಳನ್ನು ತೆರೆಯಲಿದೆ. ಇವೆಲ್ಲಾ ಸವಲತ್ತುಗಳನ್ನು ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಾಸಕರಾದ ರಿಜ್ವಾನ್‌ ಅರ್ಷದ್‌ ಅವರು ಮಾತನಾಡಿ, ಇದೊಂದು ಕ್ರಾಂತಿಕಾರಿ ಕಾರ್ಯಕ್ರಮ.  ಸಚಿವ ಸಂತೋಷ್‌ ಲಾಡ್‌ ಅವರ ನೇತೃತ್ವದಲ್ಲಿ ಇದು ಯಶಸ್ವಿಯಾಗಿ ನಡೆಯುತ್ತಿದೆ. ಇಲಾಖೆ ಹಾಗು ಸಚಿವರಿಗೆ ಅಭಿನಂದನೆಗಳು ಎಂದರು. 

ಬಾಕ್ಸ್‌
=============
*ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ: ಸಂತೋಷ್‌ ಲಾಡ್‌* 

ಕಾರ್ಮಿಕರ ಕೆಲಸದ ಸ್ಥಳಗಳಲ್ಲೇ ಅವರ ಆರೋಗ್ಯ ತಪಾಸಣೆ ಮಾಡುವುದು ಇದೊಂದು ವಿನೂತನ ಕಾರ್ಯಕ್ರಮ. ತೆಲಂಗಾಣ ಮತ್ತು ಒಡಿಶಾ ರಾಜ್ಯದ ಕಾರ್ಮಿಕ ಇಲಾಖೆ ಅಧಿಕಾರಿಗಳು ನಮ್ಮ ಸಂಚಾರಿ ಆರೋಗ್ಯ ಘಟಕಗಳ ಸೇವೆಯ ಬಗ್ಗೆ ಅಧ್ಯಯನ ಮಾಡಿದ್ದಾರೆ. ಅವರ ರಾಜ್ಯದಲ್ಲೂ ಅಳವಡಿಕೆ ಮಾಡಲು ಮುಂದಾಗಿದ್ದಾರೆ. ಇದೇ ನಮ್ಮ ಕಾರ್ಯಕ್ರಮದ ವಿಶೇಷತೆ ಎಂದರು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಹೇಳಿದರು.  

ಸುಳ್ಳು ದಾಖಲೆ ನೀಡಿ ಮಂಡಳಿಯಲ್ಲಿ ನೋಂದಾಯಿಸಿ ಸೌಲಭ್ಯ ಪಡೆಯುತ್ತಿದ್ದ ಸುಮಾರು ಇಪ್ಪತ್ತೇಳು ಸಾವಿರ ನಕಲಿ ಕಾರ್ಮಿಕರನ್ನು ಪತ್ತೆ ಹಚ್ಚಿ ಅವರಿಂದ ಕಾರ್ಮಿಕ ಕಾರ್ಡ್‌ ಗಳನ್ನು ಮರಳಿ ಪಡೆದಿದ್ದೇವೆ. ಈ ನಕಲಿ ಕಾರ್ಮಿಕರ ಪತ್ತೆ ಪ್ರಕ್ರಿಯೆ ಮುಂದೆಯೂ ನಡೆಯಲಿದೆ. ಅರ್ಹ ಕಾರ್ಮಿಕರಿಗೆ ಮಾತ್ರವೇ ಸರ್ಕಾರದ ಸೌಲಭ್ಯಗಳು ಸಿಗುವಂತಾಗಬೇಕು ಎಂಬುದೇ ನಮ್ಮ ಉದ್ದೇಶ ಎಂದು ವಿವರಿಸಿದರು. 

ಬಾಕ್ಸ್‌
--------------------
*ಡಿಸಿಎಂಗೆ ಸಂಚಾರಿ ಆರೋಗ್ಯ ಘಟಕದ ಕಾರ್ಯವೈಖರಿ ವಿವರಿಸಿದ ಲಾಡ್‌*
 ಕಾರ್ಯಕ್ರಮಕ್ಕೆ ಆಗಮಿಸಿದ್ದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರನ್ನು ಸಂಚಾರಿ ಆರೋಗ್ಯ ಘಟಕದ ವಾಹನದ ಒಳಗೆ ಕರೆದೊಯ್ದ ಸಚಿವ ಸಂತೋಷ್‌ ಲಾಡ್‌ ಅವರು, ವಾಹನಗಳ ಕಾರ್ಯವೈಖರಿಯನ್ನು ವಿವರವಾಗಿ ವಿವರಿಸಿದರು. ಯಾವ ರೀತಿ ತಪಾಸಣೆ ಮಾಡಲಾಗುತ್ತದೆ. ಎಷ್ಟು ಕಾರ್ಮಿಕರಿಗೆ ತಪಾಸಣೆ ನಡೆಸಲಾಗಿದೆ ಎಂಬುದನ್ನು ಒಂದೇ ಕಡೆಯಿಂದ ಟ್ರ್ಯಾಕ್‌ ಮಾಡಬಹುದು ಎಂಬ ಬಗ್ಗೆ ಹೇಳಿದರು. 

 ===================
ಕಾರ್ಯಕ್ರಮದಲ್ಲಿ ಶಾಸಕರಾದ ಸಲೀಂ ಅಹಮದ್‌, ಕಾರ್ಮಿಕ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎನ್‌ ವಿ ಪ್ರಸಾದ್‌, ಕಾರ್ಮಿಕ ಆಯುಕ್ತರಾದ ಡಾ. ಎಚ್‌ ಎನ್‌ ಗೋಪಾಲ ಕೃಷ್ಣ, ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ಭಾರತಿ ಡಿ, ಜಂಟಿ ಕಾರ್ಯದರ್ಶಿಗಳಾದ ಶ್ರೀ ಸಂಗಪ್ಪ ಉಪಾಸೆ ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು
ನವೀನ ಹಳೆಯದು

نموذج الاتصال