ಪಂಚ ಗ್ಯಾರಂಟಿ -- ಗುತ್ತಿಗೆದಾರರ ಹಣವನ್ನು ಕಾಂಗ್ರೆಸ್‌ನವರು ಡೈವರ್ಟ್ - ಸಂಘದ ಅಧ್ಯಕ್ಷ ಸುಭಾಷ ಪಾಟೀಲ್ ಆಕ್ರೋಶ.
ಧಾರವಾಡ :-- ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಬಿಜೆಪಿ ಶೇ . 40 ಕಮಿಷನ್ ಪಡೆಯುತ್ತಿದೆ ಎಂಬ ಆರೋಪ ಮಾಡಿದ್ದ ಗುತ್ತಿಗೆದಾರರು ಇದೀಗ ತಮ್ಮ ಬಾಕಿ ಬಿಲ್ ಪಡೆದುಕೊಳ್ಳಲು ಪರದಾಡುತ್ತಿದ್ದಾರೆ . ಈ ಕುರಿತು ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ್ ತಮ್ಮ ಅಳಲು ತೋಡಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಗುತ್ತಿಗೆದಾರರ 25 ರಿಂದ 30 ಸಾವಿರ ಕೋಟಿ ಬಿಲ್‌ನ್ನು ಸರ್ಕಾರ ಬಾಕಿ ಇರಿಸಿಕೊಂಡಿದೆ . ಮೂರು ವರ್ಷಗಳಿಂದ ಸರ್ಕಾರ ಸರಿಯಾಗಿ ಬಾಕಿ ಬಿಲ್ ಕೊಡುತ್ತಿಲ್ಲ . 25 ಸಾವಿರ ಕೋಟಿ ರೆಗ್ಯುಲರ್ ಪೇಮೆಂಟ್ ಬಾಕಿ ಇದೆ . ಬೃಹತ್ ನೀರಾವರಿ ಇಲಾಖೆಯ 10 ಸಾವಿರ ಕೋಟಿ , ಸಣ್ಣ ನೀರಾವರಿ ಇಲಾಖೆಯ 3 ಸಾವಿರ ಕೋಟಿ ಹಾಗೂ ಲೋಕೋಪಯೋಗಿ ಇಲಾಖೆಯ 4 ಸಾವಿರ ಕೋಟಿ ಬಿಲ್ ಬಾಕಿ ಇದೆ . ಇದರ ಜೊತೆಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಬಿಲ್ ಕೂಡ ಬಾಕಿ ಇದೆ ಎಂದರು.
ಎರಡು ತಿಂಗಳಿಗೊಮ್ಮೆ ಸ್ವಲ್ಪ ಸ್ವಲ್ಪ ಪೇಮೆಂಟ್ ಮಾಡುತ್ತಿದ್ದಾರೆ . ಆಮೇಲೆ ಬಾಕಿ ಬಿಲ್ ಹಾಗೆಯೇ ಉಳಿಯುತ್ತಿದೆ . ಒಮ್ಮೆಲೆ ಎಲ್ಲವನ್ನೂ ಕ್ಲಿಯರ್ ಮಾಡಿದರೆ ತೊಂದರೆ ಇಲ್ಲ . ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪೇಮೆಂಟ್ ಕ್ಲಿಯರ್ ಮಾಡುವ ಭರವಸೆ ನೀಡಿತ್ತು . ಪಂಚ ಗ್ಯಾರಂಟಿ ಬಂದ ಮೇಲೆ ಆ ಹಣವನ್ನು ಅದಕ್ಕೆ ಈ ಕಾಂಗ್ರೆಸ್‌ನವರು ಡೈವರ್ಟ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಣ್ಣ ನೀರಾವರಿ ಇಲಾಖೆಯದ್ದು 4 ತಿಂಗಳಿನಿಂದ ದುಡ್ಡು ಬಂದಿಲ್ಲ . ಬೃಹತ್ ನೀರಾವರಿ ಇಲಾಖೆಯದ್ದು 6 ತಿಂಗಳಿನಿಂದ ದುಡ್ಡು ಬಂದಿಲ್ಲ . ರಾಜಕಾರಣಿಗಳು ಇಂತವರಿಗೇ ಗುತ್ತಿಗೆ ಕೊಡಬೇಕು ಎಂದು ಒತ್ತಡ ಹಾಕುತ್ತಾರೆ . ಇದರಿಂದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ . ಶಾಸಕರು , ಸಚಿವರು ಈ ವಿಷಯದಲ್ಲಿ ತಲೆ ಹಾಕಬಾರದು . ಜನವರಿ 15 ರ ಒಳಗೆ ಹಣ ಕೊಡುವ ಮಾತನ್ನು ಅಧಿವೇಶನದಲ್ಲಿ ಹೇಳಿದ್ದರು . ಅದನ್ನು ನೋಡಿಕೊಂಡು ನಾವು ಧರಣಿ ಮಾಡುತ್ತೇವೆ . ಟೆಂಡರ್ ನಡುವೆ ಬಂದು ತೊಂದರೆ ಕೊಡುವ ರಾಜಕಾರಣಿಗಳ ಮನೆ ಎದುರೇ ಧರಣಿ ಮಾಡುತ್ತೇವೆ ಎಂದರು.
ಬೀದರ್‌ನಲ್ಲಿ ಓರ್ವ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಅವರು ಸಿವಿಲ್ ಗುತ್ತಿಗೆ ಕೆಲಸ ಮಾಡುತ್ತಿದ್ದರು . ಈಗ ವಾತಾವರಣ ಕೆಟ್ಟು ಹೋಗಿದೆ . ಒತ್ತಡಕ್ಕೆ ಒಳಗಾಗಿ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಆಗಿದೆ . ಅದಕ್ಕೆ ಮಧ್ಯವರ್ತಿಗಳು ಬರದಂತೆ ನೋಡಿಕೊಳ್ಳಬೇಕು . ಪ್ರಿಯಾಂಕ್ ಖರ್ಗೆ ಬೆಂಬಲಿಗರ ಒತ್ತಡಕ್ಕೆ ಈ ಆತ್ಮಹತ್ಯೆ ನಡೆದಿದೆ . ಇದರಿಂದ ಸಚಿವರ ಹೆಸರೇ ಹಾಳಾಗುತ್ತದೆ . ಯಾರೇ ಸಚಿವರು ಇರಲಿ , ಶಾಸಕರು ಇರಲಿ , ಬೆಂಬಲಿಗರು ಇರಲಿ ಸಚಿವರ ಮೇಲೆ ಆರೋಪ ಬಂದಾಗ ಅದಕ್ಕೆ ಸಚಿವರೇ ಹೊಣೆಗಾರರಾಬೇಕಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರವೀಂದ್ರ ಮಾನೆ ,ದೂಡ್ಡಬಸವನಗೌಡಾ,ನಾಗಪ್ಪ ಅಷ್ಟಗಿ, ಬಿ ವಿ ಹಿರೇಮಠ ಉಪಸ್ಥಿತರಿದ್ದರು.