ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಾಹಿತ್ಯವನ್ನು ಕಡ್ಡಾಯವಾಗಿ ಓದಬೇಕು -ಚನ್ನು ಮೂಲಿಮನಿ.
ಧಾರವಾಡ :
ಬದಲಾಗುತ್ತಿರುವ ಪತ್ರಿಕೋದ್ಯಮಕ್ಕೆ ತಂತ್ರಜ್ಞಾನ ಸೇರಿದಂತೆ ಭಾಷಾ ಪ್ರಭುತ್ವ, ಅನುವಾದ ಕಲೆಯ ಕೌಶಲಗಳನ್ನು ಅಳವಡಿಸಿಕೊಂಡು ಸಿದ್ದರಾಗಬೇಕಾದೆ ಎಂದು ಪತ್ರಕರ್ತ ಚನ್ನು ಮೂಲಿಮನಿ ಹೇಳಿದರು.
ಅವರು ಕರ್ನಾಟಕ ಕಲಾ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಕಾಲೇಜಿನ ವಾಣಿಜ್ಯ ಸಭಾಂಗಣದಲ್ಲಿ 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ಕಾರ್ಯಾರಂಭ ಮತ್ತು ಪತ್ರಿಕೋದ್ಯಮ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಪತ್ರಿಕೋದ್ಯಮ ಕ್ಷೇತ್ರ ಬದಲಾಗುತ್ತಿದೆ, ಪ್ರಸ್ತುತ ಡಿಜಿಟಲ್ ಮಾಧ್ಯಮ ಮುನ್ನೆಲೆಗೆ ಬರುತ್ತಿದ್ದರು ಪತ್ರಿಕೆಗಳು ತಮ್ಮದೇ ಆದ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುವ ವಿದ್ಯಾರ್ಥಿ ಭಾಷಾ ಕೌಶಲ್ಯ, ಸೃಜನಶೀಲತೆ ಬೆಳೆಸಿಕೊಳ್ಳಬೇಕು, ಬಹು ಕೌಶಲ್ಯದ ಜೊತೆಗೆ ಮಾಧ್ಯಮದಲ್ಲಿ ಬಳಸುವ ತಂತ್ರಜ್ಞಾನವನ್ನು ಕಲಿಯಬೇಕು, ಹೊಸದನ್ನು ಕಲಿಯಬೇಕು ಎಂಬ ತುಡಿತ ಪತ್ರಿಕೋದ್ಯಮ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಇರಬೇಕು. ಇಂದಿನ ಪತ್ರಿಕೋದ್ಯಮಕ್ಕೆ ವೇಗ, ತಂತ್ರಜ್ಞಾನ,ಭಾಷೆಯ ಮೇಲೆ ಪ್ರಭುತ್ವವನ್ನು ಹೊಂದಿದಾಗ ಮಾತ್ರ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಸಾಧ್ಯವಿದೆ ಎಂದರು.
ಪ್ರಸ್ತುತ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಮಾನವ ಸಂಪನ್ಮೂಲಕ್ಕೆ ಹೆಚ್ಚು ಮನ್ನಣೆ ಇದೆ. ಪತ್ರಿಕೋದ್ಯಮ ವೇಗವಾಗಿ ತನ್ನ ಗತಿಯನ್ನು ಬದಲಿಸಿಕೊಳ್ಖುತ್ತಿದೆ ಹಾಗಾಗಿ ಎಲ್ಲಾ ರೀತಿಯಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸಿದ್ದರಾಗಿ ಬನ್ನಿ ಎಂದ ಅವರು ಇಂದು ಪತ್ರಿಕೋದ್ಯಮ ಸೇರಿದಂತೆ ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ ಪತ್ರಿಕೋದ್ಯಮ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ. ಪ್ರಸ್ತುತ ಅನುವಾದ ಕ್ಷೇತ್ರವು ಅಗಾಧವಾಗಿ ಬೆಳೆದಿದೆ ಹಾಗಾಗಿ ಇಂದಿನ ವಿದ್ಯಾರ್ಥಿಗಳು ಅನುವಾದದ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಜೊತೆಗೆ ಕನಿಷ್ಠ ಮೂರು ಭಾಷೆಯಲ್ಲಿ ಪ್ರಾವೀಣ್ಯತೆ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕರ್ನಾಟಕ ಕಲಾ ಕಾಲೇಜಿನ ಜಿಮಖಾನದ ಉಪಾಧ್ಯಕ್ಷ ರಾದ ಡಾ.ಆಯ್.ಸಿ.ಮುಳಗುಂದ ಮಾತನಾಡಿ ಪ್ರಸ್ತುತ ಮಾಧ್ಯಮ ಕ್ಷೇತ್ರ ತಂತ್ರಜ್ಞಾನದ ಪ್ರಭಾವದಿಂದಾಗಿ ಬದಲಾವಣೆ ಹೊಂದುತ್ತಿದೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಕೇಂದ್ರೀಕೃತವಾಗಿ ಅಧ್ಯಯನ ಶೀಲರಾಗಬೇಕು, ಕನ್ನಡ ಪತ್ರಿಕೋದ್ಯಮ ತನ್ನದೇ ಆದ ಪರಂಪರೆಯನ್ನು ಹೊಂದಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಇರುವವರು ಕಾಲಕ್ಕೆ ತಕ್ಕಂತೆ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದ ಅವರು ತಂತ್ರಜ್ಞಾನದ ಪ್ರಭಾವದಿಂದಾಗಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಪುಲವಾದ ಅವಕಾಶಗಳು ಇವೆ. ವಿದ್ಯಾರ್ಥಿಗಳಿಗೆ ವೃತ್ತಿಪರ ಜ್ಞಾನ ಹೆಚ್ಚಿಸಲು ಪ್ರಯೋಗಾತ್ಮಕವಾಗಿ ವಿದ್ಯಾರ್ಥಿಗಳು ಹೆಚ್ಚು ಕಲಿಯಲು ಮುಂದಿನ ದಿನಗಳಲ್ಲಿ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಮತ್ತು ಸ್ಟುಡಿಯೋ ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದರು.
ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ. ಡಿ.ಬಿ.ಕರಡೋಣಿ ಮಾತನಾಡಿ ಪ್ರಸ್ತುತ ಸನ್ನಿವೇಶದಲ್ಲಿ ವೃತ್ತಿಪರ ವಿಷಯಗಳಿಗೆ ಹೆಚ್ಚು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಾಹಿತ್ಯವನ್ನು ಕಡ್ಡಾಯವಾಗಿ ಓದಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗುವದು ಎಂದರು.
ಇದೇ ಸಂದರ್ಭದಲ್ಲಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಡೈರಿ ಮತ್ತು ಪೆನ್ನು ನೀಡುವುದರ ಮೂಲಕ ಹಿರಿಯ ವಿದ್ಯಾರ್ಥಿಗಳು ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡಾ.ಪ್ರಭಾಕರ ಕಾಂಬಳೆ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ಡೀನ್ ಡಾ.ಮುಕುಂದ ಲಮಾಣಿ, ಡಾ.ರವೀಂದ್ರ ಜಲರಡ್ಡಿ, ವಿದ್ಯಾರ್ಥಿಗಳಾದ ಅಕ್ಷತಾ, ರಮ್ಯಾ, ಪೂಜಾ, ಆರ್ಯನ್, ನಹೀಮ್, ಭೂಮಿಕಾ, ಕಿರಣ್ ಸೇರಿದಂತೆ ವಿವಿಧ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.
ಕರ್ನಾಟಕ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಆಯೋಜಿಸಿದ ಕಾರ್ಯಕ್ರಮವನ್ನು ಪತ್ರಕರ್ತ ಚನ್ನು ಮೂಲಿಮನಿ ಉದ್ಘಾಟಿಸಿದರು. ಚಿತ್ರದಲ್ಲಿ ಡಾ.ಪ್ರಭಾಕರ ಕಾಂಬಳೆ, ಡಾ.ಆಯ್.ಸಿ.ಮುಳಗುಂದ, ಡಾ.ಮುಕುಂದ ಲಮಾಣಿ, ಡಾ.ರವೀಂದ್ರ ಜಲರಡ್ಡಿ ಇದ್ದಾರೆ.