DHARWAD:26 ಕ್ಕೆ ಗಂಗಾವತರಣ ನಾಟಕ

26 ಕ್ಕೆ ಗಂಗಾವತರಣ ನಾಟಕ 
ಧಾರವಾಡ  : 
ಕನ್ನಡದ ವರಕವಿ ದ.ರಾ. ಬೇಂದ್ರೆಯವರು ಧಾರವಾಡದ ನೆಲದ ಸತ್ವವನ್ನು ಹೀರಿದ ಜನಮಾನಸ ಕವಿ. ಸಂಸಾರಿಕ ಜಂಜಾಟ ಹಾಗೂ ಬದುಕಿನ ಹೊಯ್ದಾಟದಲ್ಲಿ ಬೆಂದು ಪಕ್ವವಾದ ಬೇಂದ್ರೆಯವರು ದಿನನಿತ್ಯದ ಆಡುಮಾತಿನಲ್ಲಿಯೇ ಜೀವನದ ಒಳನೋಟಗಳನ್ನು ನೀಡುವ ಸಾವಿರಾರು ಕವಿತೆಗಳನ್ನು ಬರೆದು ಹಳ್ಳಿಯ ಮುಗ್ಧ ಮನಸುಗಳು ಹಾಗೂ ಪ್ರಜ್ಞಾವಂತ ನಾಗರಿಕರ ಮನೆ ಮನಗಳಲ್ಲಿ ನೆಲೆಸಿದ್ದಾರೆ. ಅವರ ಕವಿತೆಗಳು ಜಾನಪದ ಸೊಗಡು ಹಾಗೂ ಭಾವಗೀತೆಗಳ ಗೇಯತೆಯಿಂದ ಸದಾ ಕಾಲ ಕನ್ನಡಿಗರ ಹೃದಯದಲ್ಲಿ ಇಂದಿಗೂ ಅನುಕರಣಿಸುತ್ತಿವೆ.
“ಗಂಗಾವತರಣ" ವರಕವಿ ಬೇಂದ್ರೆಯವರ ಬದುಕು ಬರಹಗಳನ್ನು ಆಧರಿಸಿ ಬರೆದ ನಾಟಕ. ಬೇಂದ್ರೆ ಅವರ ಬದುಕಿನ ಹಲವಾರು ತುಣುಕುಗಳನ್ನು ಬಿಂಬಿಸುತ್ತ, ಬೇಂದ್ರೆ ಮಾಸ್ತರರ ಸಂಶೋಧನೆಗಳ ಆಳವನ್ನು ಅಗೆಯುತ್ತ, ಜೀವನದ ತದಾತ್ಮವನ್ನು ತೋರುವ ಅವರ ಜೀವನ ಗಾಥೆಯ ಹಿರಿಮೆ ಗರಿಮೆಯನ್ನು ನಾಟಕಕಾರ ನಿರ್ದೇಶಕ  ರಾಜೇಂದ್ರ ಕಾರಂತರು ಬೇಂದ್ರೆಯವರ 
ಗೀತೆಗಳು ಹಾಗೂ ಅದಕ್ಕನುಗುಣವಾದ ವರ್ಣ ರಂಜಿತ ನೃತ್ಯ ರೂಪಕಗಳ ಮೂಲಕ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಈ ನಾಟಕವು ಬೇಂದ್ರೆಯವರ ಬದುಕಿನ ಪುಟಗಳನ್ನು ರಂಗದ ಮೇಲೆ ಜೀವಂತಗೊಳಿಸುವುದರೊಂದಿಗೆ ಬದುಕಿನ ಸಾಧ್ಯತೆಗಳ ಬಗ್ಗೆ ಹಲವಾರು ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ. ಕಳೆದ 15 ವರ್ಷಗಳಿಂದ ದೇಶಾದ್ಯಂತ ಪ್ರದರ್ಶನಗೊಂಡಿರುವ ಈ ನಾಟಕವು ಕನ್ನಡ ರಂಗಭೂಮಿಯಲ್ಲಿ ಮಹತ್ವದ ಮೈಲಿಗಲ್ಲು ಎನಿಸಿದೆ.
ರಂಗಸೌರಭ, ಬೆಂಗಳೂರು ತಂಡವು ಪ್ರಸ್ತುತಪಡಿಸುತ್ತಿರುವ "ಗಂಗಾವತರಣ" ಇದೀಗ ಧಾರವಾಡದ ಸೃಜನಾ ರಂಗಮಂದಿರದಲ್ಲಿ ದಿ 26 ರಂದು ಸಂಜೆ 6:00 ಗಂಟೆಗೆ ಪ್ರದರ್ಶಿತವಾಗಲಿದೆ.
ಧಾರವಾಡ ನಗರದ ರಂಗಪ್ರಿಯರಿಗೆ ಹಾಗೂ ವಿದ್ಯಾರ್ಥಿ ಮಿತ್ರರಿಗೆ ಬೇಂದ್ರೆ ವಾಂಗ್ಮಯದ ಅರಿವು ಮೂಡಿಸಲು ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿಗಳಿಂದಲೇ ಅಭಿನಯಸಲ್ಪಡುತ್ತಿರುವ ಈ ನಾಟಕವನ್ನು ಧಾರವಾಡದ ಸ್ನೇಹ ಪ್ರತಿಷ್ಠಾನ, ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಡಾ. ಅಣ್ಣಾಜಿರಾವ್ ಸಿರೂರ ರಂಗಮಂದಿರ ಪ್ರತಿಷ್ಠಾನದವರು ಆಯೋಜಿಸಿದ್ದಾರೆ. 

ಈ ನಾಟಕದ ಪ್ರವೇಶ ಪತ್ರಗಳಿಗಾಗಿ ಹಾಗೂ ಇತರ ವಿವರಗಳಿಗಾಗಿ  ಹರ್ಷ ಡಂಬಳ - 9845703404 ಹಾಗೂ  ಸಮೀರ್ ಜೋಶಿ - 9845447002 ಇವರನ್ನು ಸಂಪರ್ಕಿಸಬಹುದು.
ನವೀನ ಹಳೆಯದು

نموذج الاتصال