*ಆಸ್ತಿ ತೆರಿಗೆ ಸೆಸ್ ಮರುಹಂಚಿಕೆ: ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಸಭೆ*
=================
ಬೆಂಗಳೂರು, ಸೆಪ್ಟೆಂಬರ್ 3: ಪ್ರಸ್ತುತ ಆಸ್ತಿ ತೆರಿಗೆ ಮೇಲೆ ವಿಧಿಸುತ್ತಿರುವ ಸೆಸ್ ಅನ್ನು ಮರುಹಂಚಿಕೆ ಮಾಡುವ ಮೂಲಕ ಕರ್ನಾಟಕ ಅಸಂಘಟಿತ ಕಾರ್ಮಿಕರ ಕಲ್ಯಾಣ ನಿಧಿಯನ್ನು ಸ್ಥಾಪಿಸಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ವಿಕಾಸಸೌಧದಲ್ಲಿ ಸಭೆ ನಡೆಸಿದರು.
ಕಳೆದ ಬಾರಿಯ ಬಜೆಟ್‌ನಲ್ಲಿ ಈ ಸಂಬಂಧ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಸಭೆ ನಡೆಸಿದರು. ಆರೋಗ್ಯ ಮತ್ತು ಗ್ರಂಥಾಲಯ ಇಲಾಖೆಗಳಿಂದ ಪ್ರಸ್ತಾವನೆಗೆ ಅನುಮೋದನೆ ಪಡೆಯುವುದು ಬಾಕಿ ಇದೆ. ಸೆಸ್ ನೀಡುವ ಕುರಿತು ಈ ಎರಡೂ ಇಲಾಖೆಗಳ ಅಧಿಕಾರಿಗಳು ಲಿಖಿತ ರೂಪದ ಹೇಳಿಕೆ ಸಲ್ಲಿಸುವುದಾಗಿ ಹೇಳಿದರು. ಹೀಗೆ ಸಂಗ್ರಹಿಸಿದ ಹಣವನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಬಳಸಲು ನಿಧಿ ಸ್ಥಾಪಿಸಲು ಕಾರ್ಮಿಕ ಇಲಾಖೆ ಯೋಜನೆ ರೂಪಿಸಲಿದೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಲಾಡ್ ಅವರು, " ತೆರಿಗೆದಾರರಿಗೆ ಹೆಚ್ಚಿನ ಹೊರೆಯಾಗುವುದಿಲ್ಲ. ಸೆಸ್ ಮರು ಹಂಚಿಕೆಯಷ್ಟೇ. ನಮ್ಮ ಇಲಾಖೆಗೆ ಶೇ 7 ರಷ್ಟು ಸಿಗಲಿದೆ. ಇಲಾಖೆಗಳು ಒಮ್ಮೆ ಪ್ರಸ್ತಾವ ಕಳಿಸಿದರೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಗುವುದು" ಎಂದು ಹೇಳಿದರು.
ಈ ಸಭೆಯಲ್ಲಿ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಹಿಸಿನ್, ಕಾರ್ಮಿಕ ಆಯುಕ್ತರಾದ ಗೋಪಾಲಕೃಷ್ಣ, ಪೌರಾಡಳಿತ ನಿರ್ದೇಶಕರಾದ ಶ್ರೀ ಪ್ರಭುಲಿಂಗ ಕವಳಿಕಟ್ಟೆ, ಶಿಕ್ಷಣ ಇಲಾಖೆಯ ಗ್ರಂಥಾಲಯ ಆಯುಕ್ತರಾದ ಕನಗವಲ್ಲಿ ಜಂಟಿ ಕಾರ್ಮಿಕ ಆಯುಕ್ತರಾದ ಚಿದಾನಂದ, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.