ಬಿಸಿಯೂಟ ಕಾರ್ಮಿಕರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಪ್ರತಿಭಟನೆ
ಬಿಸಿಯೂಟ ಕಾರ್ಮಿಕರಿಗೆ ಗೌರವಧನವನ್ನು ಇಂದಿನ ಬೆಲೆಯೇರಿಕೆಗೆ ತಕ್ಕಂತೆ ಹೆಚ್ಚಳ ಮಾಡುವುದು, ಎಪ್ರೀಲ್ ಮತ್ತು ಮೇ ತಿಂಗಳ ಬಾಕಿಯಿರುವ ಗೌರವಧನವನ್ನು ಕೂಡಲೇ ಪಾವತಿಸುವುದು ಸೇರಿದಂತೆ ವಿವಿಧ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಇಂದು ಎಐಯುಟಿಯುಸಿ ಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದಿಂದ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರಾದ ಎ. ಶಾಂತಾ ಮಾತನಾಡಿ, ಇಡೀ ರಾಜ್ಯದಾದ್ಯಂತ ಸರ್ಕಾರಿ ಮತ್ತು ಅನುದಾನಿತ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಅಪೌಷ್ಟಿಕತೆಯನ್ನು ನೀಗಿಸಲು ಬಿಸಿಯೂಟ ಯೋಜನೆ ಅತ್ಯಂತ ಪರಿಣಾಮಕಾರಿಯಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಕಳೆದ 22 ವರ್ಷಗಳಿಂದ ಬೆನ್ನೆಲುಬಾಗಿರುವವರು ಬಿಸಿಯೂಟ ತಯಾರಕರು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಎಲ್ಲಾ ಮಕ್ಕಳಿಗೆ ಅಡಿಗೆ ಮಾಡಿ ಬಡಿಸುವುದು, ಹಾಲು ಕಾಯಿಸಿ ನೀಡುವುದು, ಮೊಟ್ಟೆ, ಬಾಳೆಹಣ್ಣು ಕೊಟ್ಟು ಅತ್ಯಂತ ಜತನದಿಂದ ಕೆಲಸ ರ‍್ವಹಿಸುತ್ತಿರುವ ಈ ಮಹಿಳೆಯರು ಮಕ್ಕಳ ಪಾಲಿಗೆ ಮಹಾ ತಾಯಂದಿರಾಗಿದ್ದಾರೆ. ರಾಜ್ಯದಾದ್ಯಂತ ಬಿಸಿಯೂಟ ತಯಾರಕರೆಂದು
ಹೆಸರುವಾಸಿಯಾಗಿರುವ ಇವರು ಮಾತೃ ಹೃದಯದಿಂದ ಮಕ್ಕಳು ಚೆನ್ನಾಗಿರಲಿ ಎಂದು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಅಡಿಗೆಯವರು 47,250, ಅಡಿಗೆ ಸಹಾಯಕರಾಗಿ 71,336, ಪ್ರಸ್ತುತ ಒಟ್ಟಾರೆ 1,18,586 ಬಿಸಿಯೂಟ ತಯಾರಕರು ಈ ಯೋಜನೆಯಡಿ ದುಡಿಯುತ್ತಿದ್ದಾರೆ. ಬಿಡಿಕಾಸಿಗೆ, ಕಡಿಮೆ ವೇತನಕ್ಕೆ ದುಡಿಯುವ ಇವರಿಗೆ ಅವರ ವೇತನ ಕೂಡ ಸಕಾಲದಲ್ಲಿ ಪಾವತಿಯಾಗುತ್ತಿಲ್ಲ. ಎಷ್ಟೋ ಸಲ ಮೂರು ತಿಂಗಳಿಗೊಮ್ಮೆ ವೇತನ ಪಾವತಿ ಮಾಡುವಂತಾಗುತ್ತದೆ. ಸೇವಾ ಹಿರಿತನದ ಭತ್ಯೆ ಇಲ್ಲ, ಕೆಲಸದ ನಿಯಮಾವಳಿಗಳ ಸ್ಪಷ್ಟ ನಿರ್ದೇಶನಗಳಿದ್ದು, ಶಾಲೆಗಳ 'ಆಯಾ' ಗಳ ತರಹ 'ಡಿ' ದರ್ಜೆ ನೌಕರರ ತರಹ ದುಡಿಸಿಕೊಳ್ಳಲಾಗುತ್ತಿದೆ. ಇದೀಗ 15 ವರ್ಷ ಸೇವೆ ಸಲ್ಲಿಸಿ 60 ವರ್ಷಗಳನ್ನು ಪೂರೈಸಿ ನಿವೃತ್ತಿಯಾಗುತ್ತಿರುವ ಬಿಸಿಯೂಟ ತಯಾರಕರಿಗೆ ರೂ.40000/-ಗಳ ಇಡಿಗಂಟು ನೀಡುತ್ತಿರುವುದು ಬಿಸಿಯೂಟ ಕಾರ್ಮಿಕರ ಹೋರಾಟಕ್ಕೆ ಸಂದ ಜಯವಾಗಿದ್ದು ಸರ್ಕಾರದ ಈ ನಿರ್ಧಾರವನ್ನು ನಮ್ಮ ಯೂನಿಯನ್ ಸ್ವಾಗತಿಸುತ್ತದೆ. ತುಂಬಾ ಹಿಂದಿನಿಂದಲೂ ನಮ್ಮ ಯೂನಿಯನ್‌ನಿಂದ ಭದ್ರತೆಯ ಕುರಿತಾಗಿ ಬೇಡಿಕೆಯನ್ನಿಟ್ಟುಕೊಂಡು ನಿರಂತರವಾಗಿ ಹೋರಾಟ ಕಟ್ಟಲಾಗಿತ್ತು ಮತ್ತು ಈಗಲೂ ಮುಂದುವರೆದಿದೆ. ಈ ತಾಯಂದಿರು ಅತ್ಯಂತ ಕಡಿಮೆ ಗೌರವಧನದಲ್ಲಿ ಸೇವೆ ಸಲ್ಲಿಸಿದ್ದಾಗ್ಯೂ 5ರಿಂದ 10 ವರ್ಷ ಸೇವೆ ಸಲ್ಲಿಸಿದವರನ್ನು ಕೆಲಸದಿಂದ ಬಿಡಿಸಿದರೆ ಅಥವಾ ಅನಿವಾರ್ಯ ಕಾರಣಗಳಿಂದ ಕಾರ್ಮಿಕರೇ ಕೆಲಸ ಬಿಟ್ಟರೆ ಅಥವಾ ಈ ಹಿಂದೆ ಕೆಲಸ ಬಿಟ್ಟಂತವರಿಗೂ ಹಾಗೂ ನಿವೃತ್ತಿ ಹೊಂದಿದವರಿಗೂ ಇಡಿಗಂಟು ನೀಡಲೇಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷರಾದ ಭುವನಾ ಬಳ್ಳಾರಿ ಮಾತನಾಡಿ, ಕಾನೂನಾತ್ಮಕವಾಗಿ ದೇಶದಾದ್ಯಂತ ಬಿಸಿಯೂಟ ಯೋಜನೆ ಜಾರಿಯಲ್ಲಿದ್ದು ಇದು ನಿರಂತರವಾಗಿ (ಪೆರಿನ್ನಿಯಲ್ ಇನ್ ನೇಚರ್) ಇರುವಂತದ್ದಾದ್ದರಿಂದ ಇವರನ್ನು ಖಾಯಂ ಆಗಿ ಸರ್ಕಾರಿ ನೌಕರರನ್ನಾಗಿ ನೇಮಿಸಿಕೊಳ್ಳಬೇಕು. ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ, ಆರೋಗ್ಯ ರಕ್ಷಣೆ, ಇಪಿಎಫ್, ಇಎಸ್‌ಐ, ನಿವೃತ್ತಿಯ ಪಿಂಚಣಿ ,ಹೆರಿಗೆ ರಜೆ, ಸಮವಸ್ತ್ರ, ಗುರುತಿನ ಚೀಟಿ ಇತ್ಯಾದಿ ಸೌಲಭ್ಯಗಳನ್ನು ನೀಡಬೇಕಾಗಿದೆ. ರಾಜ್ಯದ ಕಾರ್ಮಿಕ ಇಲಾಖೆ ಎಲ್ಲಾ ದುಡಿಯುವ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಕಾಯ್ದೆಯನ್ನು ಜಾರಿಗೊಳಿಸಿದೆ. ಅದರಂತೆ ಸರ್ಕಾರಿ ಹಾಸ್ಟೆಲ್‌ಗಳಲ್ಲಿ, ಮದುವೆ ಛತ್ರಗಳಲ್ಲಿ ಕೆಲಸ ಮಾಡುವ ಅಡುಗೆಯವರಿಗೆ ಮತ್ತು ಸಹಾಯಕರಿಗೂ ವೇತನ ನಿಗದಿಗೊಳಿಸಿದೆ. ಆದರೆ ಈ ಶೆಡ್ಯೂಲ್ ನಲ್ಲಿ ಬಿಸಿಯೂಟ ಕಾರ್ಮಿಕರನ್ನು ಹೊರಗಿಡಲಾಗಿದೆ. ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಶಾಲೆಗಳಲ್ಲೇ ಬಿಸಿಯಾದ ಊಟ ಮಕ್ಕಳಿಗೆ ತಯಾರಿ ಮಾಡಿಕೊಡಬೇಕು, ಆದರೆ ಖಾಸಗಿ ಸರ್ಕಾರೇತರ ಸಂಸ್ಥೆಗಳಿಗೆ ಉದಾಹರಣೆಗೆ ಇಸ್ಕಾನ್ ನಂತಹ ಸಂಸ್ಥೆಗಳಿಗೆ ಕೇಂದ್ರೀಕೃತ ಅಡುಗೆ ವ್ಯವಸ್ಥೆಯನ್ನು ನೀಡಿರುವುದರಿಂದ ಬಿಸಿ ಊಟ ಸಿಬ್ಬಂದಿಗಳನ್ನು ಮನೆಗೆ ಕಳುಹಿಸುವಂತಾಗುತ್ತದೆ. ಶಾಲಾಮಕ್ಕಳ ಸರಾಸರಿ ಸಂಖ್ಯೆಗೆ ಅನುಗುಣವಾಗಿ ಬಿಸಿಯೂಟ ತಯಾರಕರು ಇರಬೇಕು. ಆದರೆ ಇಸ್ಕಾನ್ ನಂತಹ ಸರ್ಕಾರೇತರ ಸಂಸ್ಥೆಗಳ ಮಧ್ಯ ಪ್ರವೇಶದಿಂದಾಗಿ ಬಿಸಿ ಊಟ ತಯಾರಕರ ಸರಾಸರಿ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಇವರಿಗೆ ನಾಲ್ಕು ಗಂಟೆಗಳ ಕೆಲಸದ ಬದಲಾಗಿ ಎಂಟು ಗಂಟೆಗಳ ಹೆಚ್ಚು ಕೆಲಸ ಮಾಡುವಂತಹ ಪರಿಸ್ಥಿತಿ ಬಂದಿದೆ. ಅಡುಗೆ ಮನೆ ತಯಾರಕರು ಎನ್ನುವ ಕೆಲಸದ ಬದಲಾಗಿ, ಅಡುಗೆ ಬಡಿಸುವವರು ಹಾಗೂ ಸ್ವಚ್ಛತಾ ಸಿಬ್ಬಂದಿಗಳ ಕೆಲಸ ನಿರ್ವಹಿಸುತ್ತಿದ್ದಾರೆ. ಒಟ್ಟಾರೆ ದಿನೇ ದಿನೇ ಹೆಚ್ಚುವರಿ ಕೆಲಸದ ಜೊತೆಗೆ, ಕೆಲಸದ ಅಭದ್ರತೆಯೂ ಕಾಡುತ್ತಿದೆ. ಇದರಿಂದಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಂದ ಬಂದಿರುವ ಬಿಸಿಯೂಟ ತಯಾರಕರ ಈ ಪರಿಸ್ಥಿತಿಯಿಂದಾಗಿ ಹೆಣ್ಣು ಮಕ್ಕಳ ಸಬಲೀಕರಣ ಎನ್ನುವುದು ಕನಸಿನ ಮಾತಿನಂತಾಗುತ್ತದೆ. ಈ ಕಾರಣದಿಂದಾಗಿ ಈಗಾಗಲೇ ಘೋಷಿಸಿರುವ ಇಡಿಗಂಟು ಕೈಗೆ ಸೇರುವ ಮೊದಲೇ ಕಡ್ಡಾಯ ನಿವೃತ್ತಿಗನುಗುಣವಾಗಿ ಮನೆಗೆ ಹೋಗಬೇಕಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಇಡಿಗಂಟು ಎನ್ನುವುದು ಕನ್ನಡಿಯೊಳಗಿನ ಗಂಟಾಗಿ ಪರಿಣಮಿಸುವ ಸ್ಥಿತಿ ದೂರವಿಲ್ಲ. ವಾಸ್ತವದಲ್ಲಿ ಪುನರ್ ನಿಯೋಜನೆ ಎನ್ನುವುದು ಶಾಲಾ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಆಗುತ್ತಿಲ್ಲ. ಕಡ್ಡಾಯವಾಗಿ ಬಿಸಿಯೂಟ ಸಿಬ್ಬಂದಿಗಳು ಕೆಲಸವಿಲ್ಲದೆ ಮನೆಗೆ ಹೋಗುವ ವಾತಾವರಣವು ಸೃಷ್ಟಿಯಾಗುತ್ತಿದೆ. ಆದ್ದರಿಂದ ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಈ ಕೆಳಗಿನ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮನವಿಪತ್ರ ಸಲ್ಲಿಸಲಾಯಿತು.
1) ಬಿಸಿಯೂಟ ಕಾರ್ಮಿಕರಿಗೆ ಗೌರವಧನವನ್ನು ಇಂದಿನ ಬೆಲೆಯೇರಿಕೆಗೆ ತಕ್ಕಂತೆ ಹೆಚ್ಚಳ ಮಾಡಿ. ಹಾಗೂ ಎಪ್ರೀಲ್ ಮತ್ತು ಮೇ ತಿಂಗಳುಗಳ ಬಾಕಿಯಿರುವ ಗೌರವಧನವನ್ನು ಕೂಡಲೇ ಪಾವತಿಸಬೇಕು.
2) ಸಮಯ ಮತ್ತು ಕಾರ್ಯಪಾಲನೆ ಬಗ್ಗೆ ಸ್ಪಷ್ಟ ಆದೇಶ ನೀಡಿ ಜಾರಿಗೆ ತರಬೇಕು.
3) ಮೊಟ್ಟೆಯ ಪ್ರೋತ್ಸಾಹಧನವನ್ನು ಬಿಸಿಯೂಟ ಕಾರ್ಮಿಕರಿಗೆ ಖಾತ್ರಿ ಮಾಡಿ. ಅಜೀಂ ಪ್ರೇಮ್‌ಜಿ ಪ್ರತಿಷ್ಠಾಣದಿಂದ ಕೊಡಮಾಡುವ ಮೊಟ್ಟೆಗಳ ಪ್ರೋತ್ಸಾಹಧನವನ್ನೂ ನೀಡಬೇಕು.
4) ಇಸ್ಕಾನ್ ಅಕ್ಷಯ ಪಾತ್ರೆಯಂತಹ ಕೇಂದ್ರೀಕೃತ ಅಡುಗೆ ವ್ಯವಸ್ಥೆಗೆ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆಯನ್ನು ನೀಡದೇ, ಆಯಾಯ ಶಾಲೆಗಳಲ್ಲಿ ಬಿಸಿ ಊಟ ತಯಾರಿಸಿ ನೀಡಬೇಕು, ಆ ಮೂಲಕ ಬಿಸಿಯೂಟ ಕಾರ್ಯಕರ್ತೆಯರ ಸೇವೆಯನ್ನು ಸುಭದ್ರಗೊಳಿಸಬೇಕು.
5) ಪುನರ್‌ನೇಮಕ (ರಿಡಿಪ್ಲಾಯ್ಮೆಂಟ್) ಹೆಸರಿನಲ್ಲಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯ ಕೊರತೆಯಿಂದ ಬಿಸಿಯೂಟ ಕಾರ್ಯಕರ್ತೆಯರನ್ನು ಮನೆಗೆ ಕಳುಹಿಸುವುದರ ಬದಲಾಗಿ ಇತರೆ ಶಾಲೆಗಳಲ್ಲಿ ಕೆಲಸ ಮಾಡುವಂತೆ ನಿಯೋಜಿಸಬೇಕು.
6) ಮಾಸಿಕ ವೇತನವನ್ನು ಪ್ರತಿ ತಿಂಗಳು 5ನೇ ತಾರೀಕಿನೊಳಗೆ ಕಾರ್ಮಿಕರ ಬ್ಯಾಂಕ್ ಖಾತೆಗೆ ಪಾವತಿಸಿ, ಪ್ರತಿ ತಿಂಗಳು ವೇತನ ಚೀಟಿ ನೀಡಬೇಕು.
7) ಪ್ರತಿ ಮೂರು ತಿಂಗಳಿಗೊಮ್ಮೆ ಬಿಸಿಯೂಟ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಂಘದ ಪದಾಧಿಕಾರಿಗಳನ್ನು ಒಳಗೊಂಡು ತಾಲ್ಲೂಕು ಹಾಗು ಜಿಲ್ಲಾ ಮಟ್ಟದಲ್ಲಿ ಕುಂದು ಕೊರತೆ ಸಭೆ ನಡೆಸಬೇಕು.
8) ಈ ಕಾರ್ಮಿಕರ ಸುರಕ್ಷತೆಗೆ ಬೇಕಾಗಿರುವ ಸಾಮಾಗ್ರಿಗಳಾದ, ಹತ್ತಿಬಟ್ಟೆಯ ಸೀರೆ, ಏಪ್ರಾನ್, ಕೈಗೆ ಗ್ಲೌಸ್ ಹಾಗೂ ತಲೆಗೆ ಸ್ಕಾರ್ಫ್ನೊಂದಿಗೆ ಕೆಲಸ ನಿರ್ವಹಿಸಬೇಕೆಂದು ನಿರ್ದೇಶನವಿದೆ ಇದನ್ನು ಈ ಕೂಡಲೇ ನೀಡಬೇಕು.
9) ಸರ್ಕಾರವು ಈಗಾಗಲೇ 60 ವರ್ಷಕ್ಕೆ ನಿವೃತ್ತಿ ಹೊಂದುವವರಿಗೆ ಇಡಿಗಂಟನ್ನು ಘೋಷಿಸಿರುವುದನ್ನು, ಈಗಾಗಲೇ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರಿಗೂ ನೀಡಬೇಕು.
10) ರಾಜ್ಯ ಸರ್ಕಾರದ ಶಾಲೆಗಳಲ್ಲಿ ಹಲವಾರು ವರ್ಷಗಳಿಂದ ಮಧ್ಯಾಹ್ನದ ಬಿಸಿ ಊಟದ ಅಡುಗೆ ತಯಾರು ಮಾಡುವ ಮುಖ್ಯ ಅಡುಗೆಯವರು, ಅಡುಗೆಯವರು, ಅಡುಗೆ ಸಹಾಯಕರನ್ನು ಅವರು ಕೆಲಸ ಮಾಡುತ್ತಿರುವ ಹುದ್ದೆಗಳಲ್ಲಿ ಖಾಯಂಗೊಳಿಸಿ ಇಲ್ಲವೇ ಇವರನ್ನು ಈ ಹುದ್ದೆಗಳಲ್ಲಿ ಖಾಯಂ ಗೊಳಿಸುವವರೆಗೂ ಮುಖ್ಯ ಅಡುಗೆಯವರು ಅಡುಗೆಯವರು, ಅಡುಗೆ ಸಹಾಯಕರ ಹುದ್ದೆಗಳಿಗೆ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆಯ ಅನ್ವಯ ಈಗಾಗಲೇ ಈ ಶೆಡ್ಯೂಲ್ ಹುದ್ದೆಗಳಿಗೆ ನಿಗದಿಪಡಿಸಿರುವಷ್ಟು ಮಾಸಿಕ ವೇತನ ಇಪಿಎಫ್ ,ಇಎಸ್‌ಐ ಸೌಲಭ್ಯಗಳನ್ನು ನೀಡಬೇಕು.
11) ಶಾಸನಬದ್ಧ ಸೌಕರ್ಯಗಳಾದ ವಾರದ ರಜೆ, ರಾಷ್ಟ್ರೀಯ ಹಬ್ಬದ ರಜೆ, ಹೆರಿಗೆ ರಜೆಗಳನ್ನು ನೀಡಬೇಕು. ಈ ರಜಾ ದಿನಗಳಲ್ಲಿ ಕೆಲಸ ಮಾಡಿದವರಿಗೆ ದುಪ್ಪಟ್ಟು ವೇತನ ನೀಡಬೇಕು.
12) ಸುರಕ್ಷಿತ ನಿವೃತ್ತಿ ಬದುಕು ಖಾತ್ರಿಪಡಿಸುವುದಕ್ಕಾಗಿ, ನಿವೃತ್ತಿ ವೇತನಕ್ಕೆ ಒಳಪಡಿಸಿ, ಅಲ್ಲಿಯವರೆಗೆ ರೂ.5 ಲಕ್ಷ ಇಡಿಗಂಟು ನೀಡಬೇಕು ಮತ್ತು ಜೀವ ವಿಮೆಗೆ ಒಳಪಡಿಸಿ ಇಲಾಖೆಯಿಂದ ಪ್ರೀಮಿಯಂ ಪಾವತಿಸಬೇಕು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಉಮಾ ಹಿರೇಮಠ, ಗೌರಮ್ಮ ಗುಡ್ಡದಮನಿ, ಲಲಿತಾ ಹೊಸಮನಿ, ರೇಣುಕಾ ಕರಿಗಾರ, ಜಾಹಿದಾ ಹೊಂಬಳ, ಮಾಲತಿ ಮುಗಳಿ, ರಾಜಮ್ಮ ಕುಂದಗೋಳ, ಕುತೇಜಾ, ರತ್ನಾ ಕಂಬಾರ ಮುಂತಾದವರು ಭಾಗವಹಿಸಿದ್ದರು.