ರೈಲ್ವೆ ಯೂನಿಯನ್ ಚುನಾವಣೆಯಲ್ಲಿ ಸೌತ್ ವೆಸ್ಟರ್ನ್ ರೈಲ್ವೇ ಎಂಪ್ಲಾಯಿಸ್ ಯುನಿಯನ್ ಸ್ಪರ್ಧೆ.
ಧಾರವಾಡ 18 :
ಸೌಥ್ ವೆಸ್ಟರ್ನ್ ರೇಲ್ವೆ ಎಂಪ್ಲಾಯಿಸ್ ಯುನಿಯನ್ (SWREU), ಸಂಯೋಜಿತ AIUTUC, ಇಂದ ರೈಲ್ವೆ ಯೂನಿಯನ್ ಚುನಾವಣೆಯಲ್ಲಿ ಸ್ಪರ್ಧಿಸಿ ಇಂದು ಈಶಾನ್ಯ ರೈಲ್ವೆಯ ಜನರಲ್ ಮ್ಯಾನೇಜರ್/ ಚುನಾವಣಾಧಿಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೇಶ್ವಾಪುರ ಸರ್ಕಲ್ ನಿಂದ ಜನರಲ್ ಮ್ಯಾನೇಜರ್ ಕಚೇರಿ ವರೆಗೆ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಡಬ್ಲ್ಯೂ.ಆರ್.ಇ.ಯು SWREU ವಲಯ ಅಧ್ಯಕ್ಷರಾದ ಕೆ. ಸೋಮಶೇಖರ್ ಮಾತನಾಡಿ, ಕೇಂದ್ರ ಸರ್ಕಾರವು ಆರ್ಥಿಕ ಸುಧಾರಣೆಗಳ ಹೆಸರಿನಲ್ಲಿ ಆಳುವ ಬಂಡವಾಳಶಾಹಿ ವರ್ಗದ ಹಿತಾಸಕ್ತಿಯನ್ನು ಕಾಪಾಡುತ್ತಾ, ದೇಶದ ಕಾರ್ಮಿಕರು ಮತ್ತು ಸಾಮಾನ್ಯ ಜನರ ಆಶಯಗಳಿಗೆ ವಿರುದ್ಧವಾಗಿ ರೈಲ್ವೆಯಲ್ಲಿ ಸಂಪೂರ್ಣವಾಗಿ ಖಾಸಗೀಕರಣದ ದಾಳಿಯನ್ನು ನಡೆಸಿದೆ. ಇದರ ಭಾಗವಾಗಿ ರೈಲ್ವೆ ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾದ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. 1991ರಲ್ಲಿ ಹೊಸ ಆರ್ಥಿಕ ನೀತಿಯನ್ನು ಜಾರಿಗೊಳಿಸುವ ಮೂಲಕ ಖಾಸಗಿಕರಣದ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ಬಂಡವಾಳಶಾಹಿ ಮನೆತನಗಳ ಲಾಭದ ದಾಹವನ್ನು ನೀಗಿಸಲು ಗರಿಷ್ಠ ರೈಲ್ವೆ ವಲಯವನ್ನು ಹಸ್ತಾಂತರಿಸುವ ದಿನಗಳು ದೂರವಿಲ್ಲ. ಇದುವರೆಗೆ ಸೇವಾ ಕ್ಷೇತ್ರವಾಗಿದ್ದ ರೈಲ್ವೆ ವಲಯ ಕ್ರಮೇಣ ವ್ಯಾಪಾರಿ ಕ್ಷೇತ್ರವಾಗಿ ಬದಲಾಗುತ್ತಿದೆ. ಇದರ ಒಂದು ನಿರ್ದಿಷ್ಟ ಫಲಿತಾಂಶವಾಗಿ ರೈಲ್ವೆ ಸೇವೆಗಳು ದುಬಾರಿಯಾಗುತ್ತಿವೆ. ಅದೇ ಸಮಯದಲ್ಲಿ ವಿವಿಧ ರೀತಿಯ ರಿಯಾಯಿತಿಗಳು ಮತ್ತು ಇತರ ಹಲವು ಸೌಲಭ್ಯಗಳನ್ನು ಈಗಾಗಲೇ ಹಿಂತೆಗೆದುಕೊಳ್ಳಲಾಗಿದೆ. ರೈಲ್ವೆ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ರೈಲ್ವೆಯಲ್ಲಿ ಖಾಯಂ ಉದ್ಯೋಗಗಳನ್ನು ರದ್ದುಗೊಳಿಸಲಾಗುತ್ತಿದೆ. ಈಗಿರುವ ನೌಕರರು ಕಷ್ಟಪಟ್ಟು ಸಂಪಾದಿಸಿದ ಹಳೆಯ ಪಿಂಚಣಿ ಯೋಜನೆ ಮತ್ತು ಇತರ ಹಲವು ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ವಾಸ್ತವವಾಗಿ ಆಳುವ ಬಂಡವಾಳಶಾಹಿ ವರ್ಗದ ಕಪಿಮುಷ್ಟಿಗೆ ಸಿಲುಕುತ್ತಿದ್ದಾರೆ ಎಂದರು.
ಮುಂದುವರೆದು ಮಾತನಾಡಿ, ಪ್ರಸ್ತುತ ಆಡಳಿತಾರೂಡ ರಾಷ್ಟ್ರೀಯ ನಾಯಕತ್ವವು ಯುಪಿಎಸ್ ಅನ್ನು ಬೆಂಬಲಿಸುವ ಮೂಲಕ ಉದ್ಯೋಗಿಗಳ ಹಿತಾಸಕ್ತಿಯನ್ನೇ ಕೈಬಿಟ್ಟಿತು. ಈ ಹಿಂದೆಯೂ ಸಹ ಈ ರಾಜೀಪರ ನಾಯಕತ್ವವು ನೌಕರರ ಹಿತಾಸಕ್ತಿಯನ್ನು ಕಡೆಗಣಿಸಿ ಎನ್‌ಪಿಎಸ್ ಅನ್ನು ಒಪ್ಪಿಕೊಂಡಿತ್ತು. ನೌಕರರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಇಂತಹ ಕಾರ್ಮಿಕ-ನೌಕರ ವಿರೋಧಿ ನೀತಿಗಳನ್ನು ಬೆಂಬಲಿಸುತ್ತಿರುವ ಸ್ಥಾಪಿತ ಯೂನಿಯನ್ ನಾಯಕತ್ವವು ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಕಾರ್ಮಿಕರ ಚಳವಳಿಯ ಹಿತದೃಷ್ಟಿಯಿಂದ ಈ ನಾಯಕತ್ವದ ನೈಜ ಮುಖವನ್ನು ಗುರುತಿಸುವುದು ಮುಖ್ಯವಾಗಿದೆ. ಎನ್‌ಪಿಎಸ್/ಯುಪಿಎಸ್ ಬದಲಿಗೆ ಓಪಿಎಸ್‌ಅನ್ನು ಮರು-ಜಾರಿಗೊಳಿಸಬೇಕೆಂದು ಒತ್ತಾಯಿಸುವ ಹೋರಾಟವನ್ನು ಕಟ್ಟಲು, ರಾಜೀರಹಿತ ಚಳುವಳಿಯನ್ನು ಬಲಪಡಿಸಬೇಕು. ಅದೇರೀತಿ ಟ್ರೇಡ್ ಯೂನಿಯನ್ ಚಳವಳಿಯಲ್ಲಿ ಯಾವುದೇ ರೀತಿಯ ಅವಕಾಶವಾದಿಗಳಿಗೆ ಅವಕಾಶ ನೀಡದೇ ಬದಲಾವಣೆಯನ್ನು ಬಯಸುತ್ತಿರುವ, ಸರಿಯಾಗಿ ಆಲೋಚಿಸುತ್ತಿರುವ ಪ್ರತಿಯೊಬ್ಬರೂ ಎಸ್.ಡಬ್ಲ್ಯೂ.ಆರ್.ಇ.ಯು -SWREU ಜೊತೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಎಸ್.ಡಬ್ಲ್ಯೂ.ಆರ್.ಇ.ಯು-SWREU ಪ್ರಧಾನ ಕಾರ್ಯದರ್ಶಿ ಎಂ.ಬಿ. ತಾಯಿದಾಸ್ ಮಾತನಾಡಿ, ಎಸ್.ಡಬ್ಲ್ಯೂ.ಆರ್.ಇ.ಯು ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವುದು, ತಕ್ಷಣವೇ 8ನೇ CPCಯನ್ನು ಸ್ಥಾಪಿಸುವುದು, ಎಲ್ಲಾ ಗ್ರೂಪ್ ಸಿ ಮತ್ತು ಹಿಂದಿನ ಡಿ ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡುವುದು, ಹಿರಿಯ ನಾಗರಿಕರ ಪ್ರಯಾಣದ ರಿಯಾಯಿತಿ ಸೇರಿದಂತೆ ಎಲ್ಲಾ ರೀತಿಯ ರಿಯಾಯಿತಿಗಳನ್ನು ಮರುಸ್ಥಾಪಿಸುವುದು, ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿ ಹೊಂದಿರುವ ಸರ್ಕಾರಿ ನೌಕರರು/ಪಿಂಚಣಿದಾರರ 18 ತಿಂಗಳ ಡಿಎ/ಡಿಆರ್ ಬಾಕಿಯನ್ನು ಬಿಡುಗಡೆ ಮಾಡುವುದು, 6ನೇ CPC ಹಾಗೂ ಗೌರವಾನ್ವಿತ ನ್ಯಾಯಾಲಯದ ನಿರ್ದೇಶನದ ಶಿಫಾರಸಿನಂತೆ ಪಿಂಚಣಿಯ ಪರಿವರ್ತನೆಯ ಅವಧಿಯನ್ನು 15 ವರ್ಷಗಳಿಂದ 12 ವರ್ಷಗಳಿಗೆ ಕಡಿಮೆ ಮಾಡುವುದು ಸೇರಿದಂತೆ ಮುಂತಾದ ಬೇಡಿಕೆಗಳ ಈಡೇರಿಕೆಗೆ ಹೋರಾಟಗಳನ್ನು ಕಟ್ಟುತ್ತಿದೆ. ಮತ್ತು ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ರಾಜಿರಹಿತ ಪ್ರಬಲ ರೈಲ್ವೆ ಕಾರ್ಮಿಕರ ಚಳವಳಿಯನ್ನು ನಿರ್ಮಿಸುತ್ತಿದ್ದು, ಹೋರಾಟವನ್ನು ಬಲಪಡಿಸಬೇಕು ಎಂದರು.
ಎಸ್.ಡಬ್ಲ್ಯೂ.ಆರ್.ಇ.ಯು-SWREU ಕಾರ್ಯಾಧ್ಯಕ್ಷರಾದ ಕಾಮ್ರೇಡ್ ಗುಡದಪ್ಪ ಮಾತನಾಡಿ, ರೈಲ್ವೇ ನೌಕರರ ಹಿತಾಸಕ್ತಿ ಕಾಪಾಡಲು ಮತ್ತು ರೈಲ್ವೇಯನ್ನು ಖಾಸಗೀಕರಣಗೊಳಿಸದಂತೆ ಉಳಿಸಲು ರಾಜಿರಹಿತ ಚಳವಳಿಯನ್ನು ಕಟ್ಟಲು ರೈಲ್ವೆ ಯೂನಿಯನ್ ಚುನಾವಣೆಯಲ್ಲಿ ಸೌತ್ ವೆಸ್ಟರ್ನ್ ರೈಲ್ವೇ ನೌಕರರ ಸಂಘ(SWREU)ದ ಪರವಾಗಿ ಮತ ಹಾಕಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜೀವ್ ಕುಮಾರ್, ಯಶವಂತ್, ಕಿರಣ್ ಕುಮಾರ್,, ವಿಜಯ ಕುಮಾರ್ ಮುಂತಾದವರು ಭಾಗವಹಿಸಿದ್ದರು.