DHARWAD: ಅದ್ದೂರಿಯಾಗಿ ನೆರವೇರಿದ ಜಂಬೂ ಸವಾರಿ

ಜಂಬೂ ಸವಾರಿ
ಧಾರವಾಡ: ಭಾರತೀಯ ಪರಂಪರೆಯಲ್ಲಿ ಹಲವಾರು ಹಬ್ಬಗಳನ್ನು ಆಚರಿಸುತ್ತ ಬರಲಾಗುತ್ತಿದ್ದು, ಅದರಲ್ಲಿ ನವರಾತ್ರಿಗೆ ವಿಶೇಷ ಸ್ಥಾನವಿದೆ  ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶುಕ್ರವಾರ ಗಾಂಧಿನಗರದ ಈಶ್ವರ ದೇವಸ್ಥಾನದಲ್ಲಿ ಜಂಬೂ ಸವಾರಿ ಮೆರವಣಿಗೆ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ನವರಾತ್ರಿ ಸಂದರ್ಭದಲ್ಲಿ ದೇವಿಯಲ್ಲಿ ಬೇರೆ ಬೇರೆ ರೂಪದಲ್ಲಿ ಅಲಂಕರಿಸಿ ಆರಾಧಿಸುವುದು ಸಂಪ್ರದಾಯ. ಪ್ರತಿ ಆರಾಧನೆಗೂ ಒಂದು ಮಹತ್ವವಿದೆ. ನವರಾತ್ರಿ ನಿಮಿತ್ತದ ಜಂಬೂಸವಾರಿಗೆ ಪೌರಾಣಿಕ ಹಿನ್ನೆಲೆಯಿದೆ.
ಮೈಸೂರಲ್ಲಿ ನಡೆಯುವ ದಸರಾ ವೈಭವಕ್ಕೆ ಶ್ರೀಮಂತ ಪರಂಪರೆಯಿದೆ. ಆ ಪರಂಪರೆ ಇಂದಿಗೂ ನಡೆದುಕೊಂಡು ಬಂದಿದೆ. ಅದೇ ಮಾದರಿಯಲ್ಲಿ ಧಾರವಾಡದಲ್ಲಿಯೂ ದಸರಾ ಜಂಬೂ ಸವಾರಿ ಆಯೋಜಿಸುವ ಮೂಲಕ ಸಾಂಸ್ಕೃತಿಕ ವೈಭವವನ್ನು ಹೆಚ್ಚಿಸಲಾಗಿದೆ. ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿಯ ಈ ಪ್ರಯತ್ನಕ್ಕೆ ಎಲ್ಲರೂ ಅಗತ್ಯ ಸಹಕಾರ  ನೀಡಬೇಕಿದೆ ಎಂದು ಜೋಶಿ ಹೆಳಿದರು.
ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನದ ಮ.ನಿ.ಪ್ರ. ಶ್ರೀ ಶಿವಾನಂದ ಶಿವಯೋಗಿ ರಾಜಯೋಗಿಂದ್ರ ಮಹಾಸ್ವಾಮೀಜಿ ಮತ್ತು ಹುಬ್ಬಳ್ಳಿ ಮೂರುಸಾವಿರ ಮಠದ ಮ.ನಿ.ಪ್ರ. ಜಗದ್ಗುರು ಶ್ರೀ ಗುರುಶಿದ್ದ ರಾಜಯೋಗೇಂದ್ರ ಮಹಾಸ್ವಾಮೀಜಿ  ದಿವ್ಯ ಸಾನಿಧ್ಯವಹಿಸಿದ್ದರು.
ಹೆಬ್ಬಳ್ಳಿ ಬ್ರಹ್ಮಚೈತನ್ಯ ಮಠದ ಶ್ರೀ ದತ್ತಾವಧೂತರು
ಉಪ್ಪಿನ ಬೆಟಗೇರಿಯ ಕುಮಾರ ವಿರುಪಾಕ್ಷ ಸ್ವಾಮೀಜಿ, ಹಂಡಿಬಡಗನಾಥ ಕಾರ್ಯಭಾರಿ ಶ್ರೀ ಯೋಗಿ ಸಾಗರನಾಥ ಮಹಾರಾಜರು, ಹುನಗುಂದಮಠದ ಶ್ರೀ ವೀರೇಶ್ವರ ಶಿವಾಚಾರ್ಯರು  ಸಮ್ಮುಖವಹಿಸಿದ್ದರು.

ಶಾಸಕರಾದ ಎಂ.ಆರ್.ಪಾಟೀಲ, ಪ್ರಕಾಶ ಕೋಳಿವಾಡ, ಮಾಜಿ ಸಚಿವ ಹನಮಂತಪ್ಪ ಅಲ್ಕೋಡ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಾಜಿ ಮೇಯರ ಈರೇಶ ಅಂಚಟಗೇರಿ ಇತರರು ವೇದಿಕೆಯಲ್ಲಿದ್ದರು.

ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಶಿಮರದ ಅಧ್ಯಕ್ಷತೆವಹಿಸಿದ್ದರು.

 

ಮಳೆಯ ಮಧ್ಯೆ ಮೆರವಣಿಗೆ: ಈಶ್ವರ ದೇವಸ್ಥಾನದಿಂದ ಆರಂಭವಾದ ಜಂಬೂ ಸವಾರಿ ಮೆರವಣಿಗೆಯು ಕಲಘಟಗಿ ರಸ್ತೆ, ಟೋಲನಾಕಾ, ಬಾಗಲಕೋಟ ಪೆಟ್ರೋಲ್ ಪಂಪ್, ಹೊಸಯಲ್ಲಾಪೂರ, ಗಾಂಧಿ ಚೌಕ, ಸುಭಾಸ ರಸ್ತೆ ಮಾರ್ಗವಾಗಿ ಸಂಚರಿಸಿ ನಂತರ ಕಡಪಾ ಮೈದಾನ ತಲುಪಿ ಮುಕ್ತಾಯಗೊಂಡಿತು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆನೆ, ಕುದುರೆ  ಸಾರೋಟಗಳು, ಜಾಂಝ್ ಮೇಳ, ಚಂಡಿ ವಾದ್ಯ , ವೀರಭದ್ರ ಕುಣಿತ, ಭಜನೆ, ಡೊಳ್ಳು ಸೇರಿದಂತೆ ವಿವಿಧ ಕಲಾ ತಂಡಗಳು ಜನರ ಗಮನಸೆಳೆದವು. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಮಳೆಯ ಮಧ್ಯೆಯೂ ನಡೆದ ಮೆರವಣಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಈ ಮೂಲಕ ಕಳೆದ ಒಂಬತ್ತು ದಿನಗಳಿಂದ ಜರುಗಿದ 20 ನೇ ವರ್ಷದ ಜಂಬೂಸವಾರಿ ಉತ್ಸವ ತೆರೆಕಂಡಿತು.

ಸಮಿತಿಯ  ನಾರಾಯಣ ಕೋಪರ್ಡೆ, ಪುರುಷೋತ್ತಮ ಪಟೇಲ, ಮಂಜುಗೌಡ ಪಾಟೀಲ, ಪಿ.ಎಚ್.ಕಿರೇಸೂರ, ವಿಲಾಸ ತಿಬೇಲಿ, ರಾಜೇಂದ್ರ ಕಪಲಿ, ಯಶವಂತರಾವ ಕದಂ, ಮನೋಜ ಸಂಗೊಳ್ಳಿ, ಮಂಜುಳಾ ಮುಂಜಿ, ಮಡಿವಾಳಪ್ಪ  ಸಿಂಧೋಗಿ ಮತ್ತು ವಿವಿಧ ಟ್ರಸ್ಟ್ ಕಮೀಟಿ, ಮಹಿಳಾ ಮಂಡಳ ಪದಾಧಿಕಾರಿಗಳು ಉತ್ಸವದ ಯಶಸ್ವಿಗೆ ಶ್ರಮಿಸಿದರು.
ನವೀನ ಹಳೆಯದು

نموذج الاتصال