ಲೆಬನಾನ್ ಮತ್ತು ಪ್ಯಾಲೆಸ್ಟೈನ್ ಮೇಲೆ ಜಿಯೋನಿಸ್ಟ್ ಇಸ್ರೇಲ್ ನ ಬರ್ಬರ ಆಕ್ರಮಣವನ್ನು
ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿ ಎಸ್.ಯು.ಸಿ.ಐ.(ಕಮ್ಯುನಿಸ್ಟ್) ಪಕ್ಷ ಪ್ರತಿಭಟನೆ.
ಧಾರವಾಡ 08 :
ಲೆಬನಾನ್ ಮತ್ತು ಪ್ಯಾಲೆಸ್ಟೈನ್ ಮೇಲೆ ಜಿಯೋನಿಸ್ಟ್ ಇಸ್ರೇಲ್ ನ ಬರ್ಬರ ಆಕ್ರಮಣವನ್ನು
ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿ ಎಸ್.ಯು.ಸಿ.ಐ.(ಕಮ್ಯುನಿಸ್ಟ್) ಪಕ್ಷದ ಧಾರವಾಡ ಜಿಲ್ಲಾ ಸಮಿತಿಯಿಂದ ಇಂದು ಧಾರವಾಡದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನುದ್ದೇಶಿಸಿ ಎಸ್.ಯು.ಸಿ.ಐ.(ಕಮ್ಯುನಿಸ್ಟ್)ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಗಂಗಾಧರ ಬಡಿಗೇರ ಮಾತನಾಡಿ, ಲೆಬನಾನ್ ಮತ್ತು ಪ್ಯಾಲೆಸ್ಟಿನಿಯನ್ ಜನರೊಂದಿಗೆ ಅಂತರರಾಷ್ಟ್ರೀಯ ಸೌಹಾರ್ದತೆ ಹಾಗೂ ಐಕ್ಯಮತ್ಯವನ್ನು ಸಂಘಟಿಸಲು ಮತ್ತು ಜನಾಂಗೀಯ ಯುದ್ಧದ ವಿರುದ್ಧ ಹೋರಾಡಲು ಮತ್ತು ಜಗತ್ತಿನ ಶಾಂತಿ- ಸೌಹಾರ್ದತೆ ಕದಡುವ, ಏಕಾಏಕಿಯಾಗಿ ಉದ್ಭವಿಸುವ ಪ್ರಾದೇಶಿಕ ಯುದ್ಧದ ಅಪಾಯಗಳ ವಿರುದ್ಧ ಹೋರಾಡಲು ಕಮ್ಯುನಿಸ್ಟ್ ಪಕ್ಷಗಳು ಹಾಗೂ ಕ್ರಾಂತಿಕಾರಿ ಸಂಘಟನೆಗಳ ಅಂತರರಾಷ್ಟ್ರೀಯ ಜಂಟಿ ಸಮಿತಿ(ಐಸಿಒಆರ್) ಅಕ್ಟೊಬರ್ ಮೊದಲ ವಾರ ವಿಶ್ವದಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿದೆ. ಈ ಅಂತರರಾಷ್ಟ್ರೀಯ ನಿಲುವಿಗೆ ಬದ್ಧವಾದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷವು ದೇಶದಾದ್ಯಂತ ಎಲ್ಲಾ ಶಾಂತಿಪ್ರಿಯ ಹಾಗೂ ಜನತಂತ್ರವನ್ನು ಪ್ರೀತಿಸುವ ಜನತೆ ಒಂದಾಗಿ ಈ ಜಿಯೋನಿಸ್ಟ್ ಇಸ್ರೇಲ್ ಆಕ್ರಮಣದ ವಿರುದ್ಧ ಪ್ರತಿಭಟಿಸಬೇಕೆಂದು ಕರೆ ನೀಡಿದ್ದು, ಇದರ ಭಾಗವಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸೆಪ್ಟೆಂಬರ್ 28 ರಂದು ಇಸ್ರೇಲ್ ಹೆಜ್ಬೊಲ್ಲಾದ ಪ್ರಧಾನ ಕಛೇರಿಯ ಮೇಲೆ ಬಂಕರ್-ಬಸ್ಟಿಂಗ್ ಬಾಂಬ್‌ಗಳಿಂದ ಬಾಂಬ್ ದಾಳಿ ಮಾಡಿದ್ದಲ್ಲದೆ ಅದರ ನಾಯಕ ನಸ್ರಲ್ಲಾ ಮತ್ತು ಇತರ ಕಮಾಂಡರ್‌ಗಳನ್ನು ಕೊಂದಿದೆ. ಇದು ಮಧ್ಯಪ್ರಾಚ್ಯದಲ್ಲಿ ಯುದ್ಧದ ಸಾಧ್ಯತೆಗಳನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. 500 ಕ್ಕೂ ಹೆಚ್ಚು ನಾಗರಿಕರ ಸಾವು ಹಾಗೂ ಸಾವಿರಾರು ಜನರನ್ನು ಗಾಯಾಳುಗಳನ್ನಾಗಿ ಮಾಡಿದ ಇಸ್ರೇಲ್‌ನ ದಾಳಿಯು ಅತ್ಯಂತ ಅಮಾನವೀಯವಾಗಿದೆ.
ಇಸ್ರೇಲ್ ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿ ಮತ್ತು ವಿಶೇಷವಾಗಿ ಅಮೇರಿಕಾ ಸಾಮ್ರಾಜ್ಯಶಾಹಿಯ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ಈ ಕುಕೃತ್ಯ ಎಸಗುತ್ತಿದೆ. ಇಸ್ರೇಲ್ ಪ್ಯಾಲಿಸ್ತೈನ್‌ನ ಗಾಜಾ ಪಟ್ಟಿಯಲ್ಲಿ ಕಳೆದ ಒಂದು ವರ್ಷದಿಂದ ಆಕ್ರಮಣ ಎಸಗುತ್ತಿದ್ದು ಶಾಲೆ, ಆಸ್ಪತ್ರೆ, ಮಾದ್ಯಮ ಕಛೇರಿಗಳು, ನಾಗರೀಕ ನಿವಾಸಗಳ ಮೇಲೆ ಬಾಂಬ್ ದಾಳಿ ಮಾಡುತ್ತ 40 ಸಾವಿರಕ್ಕೂ ಹೆಚ್ಚು ನಾಗರೀಕರ ಹತ್ಯೆಗೈದಿದೆ. ಈ ಭಯಾನಕ ಮತ್ತು ಕ್ರೂರ ದಾಳಿಗಳು ಪ್ರಾದೇಶಿಕ ಯುದ್ಧದತ್ತ ಒಂದು ಹೆಜ್ಜೆ ಎಂದು ಐಸಿಒಆರ್ ಪರಿಗಣಿಸುತ್ತದೆ. ಅಲ್ಲದೇ ವಿಶ್ವ ಯುದ್ಧದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಐಸಿಒಆರ್ ಹಲವಾರು ಬಾರಿ ಎಚ್ಚರಿಕೆ ನೀಡಿದೆ. ಇಂದು ಜಗತ್ತಿನಾದ್ಯಂತ ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ಮಾರುಕಟ್ಟೆ ತೀವ್ರ ಕುಸಿತ ಅನುಭವಿಸುತ್ತಿದ್ದು. ಈ ಭಿಕ್ಕಟ್ಟಿನಿಂದ ಹೊರಬರಲು ಕೃತಕ ಮಾರುಕಟ್ಟೆ ಸೃಷ್ಟಿಗಾಗಿ ಹಾಗೂ ಮಧ್ಯ ಪ್ರಾಚ್ಯದಲ್ಲಿ ಮಿಲಿಟರಿ ಅಧಿಪತ್ಯವನ್ನು ಸಾಧಿಸಲು ಅಮೇರಿಕಾ ಮೊದಲಿನಿಂದಲೂ ಪ್ರಯತ್ನಿಸುತ್ತಾ ಬಂದ ಭಾಗವಾಗಿ ಈ ಯುದ್ಧಗಳನ್ನು ಅರ್ಥ ಮಾಡಿಕೊಳ್ಳಬೇಕು. ಇಸ್ರೇಲ್ ವಿಶ್ವಸಂಸ್ಥೆಯ ಗೊತ್ತುವಳಿಗಳನ್ನು ಧಿಕ್ಕರಿಸುತ್ತಲೇ ಬಂದಿದೆ. 1948 ರಿಂದ ಭಾರತವು ಪಾಲೇಸ್ತೇನ್ ಅನ್ನು ಬೆಂಬಲಿಸುತ್ತ ಬಂದಿದೆ. ಪಾಲಿಸ್ತೇನ್ ವಿಮೋಚನಾ ಹೋರಾಟವನ್ನು ಮಾನ್ಯಮಾಡಿ ಭಾರತ ಸರ್ಕಾರವು ಸಹ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟ ಪರಂಪರೆಯನ್ನು ಎತ್ತಿ ಹಿಡಿಯಬೇಕು. ಆದ್ದರಿಂದ ಕೂಡಲೇ ಕದನ ವಿರಾಮ ಏರ್ಪಡಬೇಕು ಹಾಗೂ ಲೆಬನಾನ್ ಮತ್ತು ಪ್ಯಾಲೆಸ್ಟೈನ್ ನಲ್ಲಿ ಶಾಂತಿ ಏರ್ಪಡಿಸಿ, ನಾಗರೀಕರ ಸಂಕಷ್ಟಗಳನ್ನು ಕೊನೆಗಾಣಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್.ಯು.ಸಿ.ಐ. (ಕಮ್ಯುನಿಸ್ಟ್)ಪಕ್ಷದ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗಣ್ಣವರ ಜಿಲ್ಲಾ ಸಮಿತಿ ಸದಸ್ಯರಾದ ಭುವನಾ ಬಳ್ಳಾರಿ, ಮಧುಲತಾ ಗೌಡರ, ಭವಾನಿಶಂಕರ್ ಗೌಡ, ಸೇರಿದಂತೆ ಪಕ್ಷದ ಸದಸ್ಯರು, ಕಾರ್ಯಕರ್ತರು ಭಾಗವಹಿಸಿದ್ದರು.