Dharwad:25ನೇ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ ಯಶಸ್ವಿ.
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸಭಾಭವನದಲ್ಲಿ 25ನೇ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ರಾಷ್ಟ್ರೀಯ ಸೇವಾ ಯೋಜನೆ ಕೋಶ, ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ವಿಭಾಗ, ಮಹಿಳಾ ಸಂಶೋಧನಾ ಅಧ್ಯಯನ ಕೇಂದ್ರ, ಶ್ರೀ ವಿವೇಕಾನಂದ ರಕ್ತದಾನ ಫೌಂಡೇಶನ್ ,ಹುಬ್ಬಳ್ಳಿ-ಧಾರವಾಡ, ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆ, ನವನಗರ, ಹುಬ್ಬಳ್ಳಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಧಾರವಾಡ, ರೋಟರಿ ಬ್ಲಡ್ ಬ್ಯಾಂಕ್, ಧಾರವಾಡ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ರಕ್ತ ನಿಧಿ ಕೇಂದ್ರ ಸತ್ತೂರು, ಧಾರವಾಡ ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರದೊಂದಿಗೆ ಅಂಗಾಂಗ ದಾನ ಜಾಗೃತಿ ಹಾಗೂ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿಜ್ಞಾನ ನಿಖಾಯದ ಡೀನರು ಹಾಗೂ ಸ್ನಾತಕೋತ್ತರ ಭೂಗೋಳಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ಅರವಿಂದ್ ಮೂಲಿಮನಿ ಅವರು ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ನಂತರ ಕಾರ್ಗಿಲ್ ಯೋಧರನ್ನು ಸ್ಮರಿಸಿ ಮಾತನಾಡಿ ರಕ್ತದಾನ ಶಿಬಿರ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ಸಂಗೀತಾ. ಆರ್. ಮಾನೆ ಅವರು ಸರ್ವರಿಗೂ ಸ್ವಾಗತ ಮಾಡಿದರು, ಉದ್ಘಾಟಕರ ಪರಿಚಯವನ್ನು ಪ್ರಶಾಂತ್ ಅವರು, ಅತಿಥಿಗಳ ಪರಿಚಯವನ್ನು ಕು. ಸಂಜನಾ ಎಸ್. ಎಮ್ ಅವರು, ಉಪನ್ಯಾಸಕರ ಪರಿಚಯವನ್ನು ಕು. ಸೋನು. ಡಿ. ಆಚಾರ ಅವರು ಮಾಡಿದರು.
ನಂತರ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಕಾರ್ಗಿಲ್ ವೀರಯೋಧರಾದ ಶ್ರೀ ಪರಶುರಾಮ .ಎಮ್. ದಿವಾನದ ಅವರು ತಮ್ಮ ಸೈನ್ಯದ ಸೇವೆ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಅನುಭವಗಳನ್ನು ಹಂಚಿಕೊಂಡರು ಹಾಗೂ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಯುವಕರು ಭಾರತೀಯ ಸೇನೆ ಸೇರಿ ದೇಶ ಸೇವೆ ಮಾಡಲು ಪ್ರೇರಣೆ ನೀಡಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕರಾದ ಶ್ರೀ ಪ್ರಶಾಂತ್ ಸುತಾರ್ ಅವರು
ಕಾರ್ಗಿಲ್ ಯುದ್ಧದ ಯಶೋಗಾಥೆ ಹಾಗೂ ಕಾರ್ಗಿಲ್ ಯೋಧರ ಸಾಹಸಗಾಥೆಗಳನ್ನು ಮನಮುಟ್ಟುವಂತೆ ಕಣ್ಣಂಚಲ್ಲಿ ಕಣ್ಣೀರು ಬರುವಂತೆ ಹಾಗೂ ದೇಶ ಪ್ರೇಮ ಉಕ್ಕಿ ಬರುವಂತೆ ವಿವರಿಸಿದರು.
ಇನ್ನೋರ್ವ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಜೀವನ ಸಾರ್ಥಕತೆ (ಸೋಟೋ) ಪ್ರತಿನಿಧಿಗಳಾದ ಶ್ರೀ ಮನೋಜ್ ನಾಯಕ್ ಅವರು ಅಂಗಾಂಗ ದಾನದ ಮಹತ್ವ ಮತ್ತು ಜಾಗೃತಿ ಮೂಡಿಸಿದರು.
ವಿಶೇಷ ಅತಿಥಿಗಳಿಗೆ ಹಾಗೂ ವಿಶೇಷ ಉಪನ್ಯಾಸಕರಿಗೆ ಶ್ರೀ ವಿವೇಕಾನಂದ ರಕ್ತದಾನ ಫೌಂಡೇಶನ್ ಪರವಾಗಿ ಸಂಸ್ಥಾಪಕರಾದ ಶ್ರೀ ಶಿವಕುಮಾರ್ ರಟ್ಟಿಹಳ್ಳಿ ಅವರು ಸನ್ಮಾನಿಸಿದರು.
ಮುಂದುವರೆದು ಕಾರ್ಗಿಲ್ ಯೋಧರ ಸ್ಮರಣಾರ್ಥವಾಗಿ ನೂರಾರು ಯುವ ಜನರು ರಕ್ತದಾನ ಮಾಡಿದರು.
ಕೊನೆಯಲ್ಲಿ ಕಾರ್ಯಕ್ರಮಕ್ಕಾಗಿ ಶ್ರಮಿಸಿದ ಎನ್ಎಸ್ಎಸ್ ಸ್ವಯಂಸೇವಕರಿಗೆ, ಸಮಾಜ ಕಾರ್ಯ ಅಧ್ಯಯನ ವಿಭಾಗದ ವಿದ್ಯಾರ್ಥಿಗಳಿಗೆ, ಶ್ರೀ ವಿವೇಕಾನಂದ ರಕ್ತದಾನ ಫೌಂಡೇಶನ್ ಪದಾಧಿಕಾರಿಗಳಿಗೆ , ಕಾರ್ಯಕ್ರಮದ ಸಂಘಟಕರಿಗೆ ಹಾಗೂ ಭಾಗವಹಿಸಿದ ಎಲ್ಲ ರಕ್ತ ನಿಧಿ ವೈದ್ಯಾಧಿಕಾರಿಗಳಿಗೆ ಹೆಚ್.ಡಿ.ಎಫ್.ಸಿ ಬ್ಯಾಂಕ್ ಹುಬ್ಬಳ್ಳಿ ವತಿಯಿಂದ ಸನ್ಮಾನಿಸಲಾಯಿತು.
ವಂದನಾರ್ಪಣೆಯನ್ನು ಶ್ರೀ ವೀರೇಶ್ ಅವರು ಹಾಗೂ ನಿರೂಪಣೆಯನ್ನು ಕು. ಪೂಜಾ ಅವರು ಮಾಡಿದರು.