*ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಿ; ಸರಕಾರಿ ಯೋಜನೆಗಳ ಸಂಪೂರ್ಣ ಲಾಭ ಬಡವರಿಗೆ, ಅರ್ಹರಿಗೆ ಮುಟ್ಟಬೇಕು; ಜಿಲ್ಲೆಯಲ್ಲಿ ಪಂಚ ಗ್ಯಾರಂಟಿಗಳಿಗೆ ಫಲನುಭವಿಗಳಿಂದ ಉತ್ತಮ ಸ್ಪಂದನೆ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ*
ಧಾರವಾಡ (ಕ.ವಾ) ಆ.15: ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು. ಸರಕಾರದ ಎಲ್ಲ ಜನ ಕಲ್ಯಾಣ ಕಾರ್ಯಕ್ರಮಗಳು ಬಡವರಿಗೆ , ಅರ್ಹರಿಗೆ ತಲುಪಿಸುವಲ್ಲಿ ಎಲ್ಲರ ಪಾತ್ರ ಮುಖ್ಯವಾಗಿದೆ. ರಾಜ್ಯ ಸರಕಾರದ ಜನಪರ ಯೋಜನೆಗಳು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಫಲಾನುಭವಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಡಳಿತದಿಂದ ಆರ್.ಎನ್.ಶಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವದ ರಾಷ್ಟ್ರಧ್ವಜಾರೋಹಣ ನೇರವೇರಿಸಿ, ಸಾರ್ವಜನಿಕರನ್ನು ಉದ್ದೇಶಿಸಿ, ಮಾತನಾಡಿದರು.
ಜನಸಾಮಾನ್ಯರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಅಭಿವೃದ್ಧಿ ಕಾಮಗಾರಿಗಳು ಹಾಗೂ ಯೋಜನೆಗಳನ್ನು ಕೈಗೊಳ್ಳಲಿದೆ. ಅವುಗಳ ಸಂಪೂರ್ಣ ಲಾಭ ಬಡವರು ಮತ್ತು ಯೋಗ್ಯರಿಗೆ ತಲುಪುವಂತೆ ಮಾಡುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಸಚಿವ ಸಂತೋಷ ಲಾಡ ಅವರು ಹೇಳಿದರು.
ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿರುವ ಗಣ್ಯ ವ್ಯಕ್ತಿಗಳಿಗೆ ನನ್ನ ಅಭಿನಂದನೆಗಳು. ಎಲ್ಲ ಕ್ಷೇತ್ರದ ಸಾಧಕರು, ಪ್ರಮುಖರು ಜಿಲ್ಲೆಯ ಅಭಿವೃದ್ಧಿಗೆ ತಮ್ಮ ಸಲಹೆ ಹಾಗೂ ಸಹಕಾರವನ್ನು ನೀಡುವಂತೆ ತಮ್ಮಲ್ಲಿ ವಿನಂತಿಸುತ್ತೇನೆ ಎಂದು ಸಚಿವರು ತಿಳಿಸಿದರು.
*ಸ್ವಾತಂತ್ರ್ಯ ಸಂಗ್ರಾಮದ ಸ್ಫೂರ್ತಿಯ ಮೆಲುಕು:*
ಸ್ವಾತಂತ್ರ್ಯ ದಿನಾಚರಣೆಯನ್ನು ದೇಶದ ಎಲ್ಲೆಡೆ ರಾಷ್ಟ್ರ ಧ್ವಜವನ್ನು ಹಾರಿಸುವುದು, ಸ್ವಾತಂತ್ರ್ಯ ಹೋರಾಟಗಾರರ ಕುರಿತು ಭಾಷಣಗಳು, ವಿವಿಧ ಸ್ವಾತಂತ್ರ್ಯ ಚಳುವಳಿಗಳ ಬಗ್ಗೆ ಮಾಹಿತಿ ನೀಡುವುದು, ರಾಷ್ಟ್ರ ಗೀತೆ ಹಾಡುವುದು ಇನ್ನೂ ಹಲವು ಚಟುವಟಿಕೆಗಳು ಸೇರಿದಂತೆ ಸುಂದರವಾದ ಸಮಾರಂಭಗಳನ್ನು ಹಮ್ಮಿಕೊಳ್ಳುವ ಮುಖಾಂತರ ಮತ್ತು
ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲಾ ಮಹನೀಯರ ನೆನಪಿನಲ್ಲಿ ಮತ್ತು ಅವರುಗಳಿಗೆ ಗೌರವ ಸಲ್ಲಿಸುವುದಕ್ಕಾಗಿ ಈ ದಿನವನ್ನು ಸಡಗರದಿಂದ ಆಚರಿಸಲಾಗುತ್ತಿದೆ ಎಂದು ಸಚಿವರು ನುಡಿದರು.
*ರಾಷ್ಟ್ರಿಯ ನಾಯಕರ ಸ್ಮರಣೆ:* ಭಾರತದ ರಾಷ್ಟ್ರೀಯ ಚಳುವಳಿಯನ್ನು ನೂರಾರು ವರ್ಷಗಳಿಂದ ರೂಪಿಸಿದ ನಮ್ಮ ಹಿರಿಯ ಹೊರಾಟಗಾರರಾದ ರಾಜಾರಾಮ್ ಮೋಹನ್ ರಾಯ್, ದಾದಾಬಾಯಿ ನವರೋಜಿ, ರವಿಂದ್ರನಾಥ ಠಾಗೋರ್, ಗೋಪಾಲಕೃಷ್ಣ ಗೋಖಲೆ, ಮಹಾತ್ಮ ಗಾಂಧೀಜಿ, ಲಾಲಾ ಲಜಪತರಾಯ್, ಜವಾಹರಲಾಲ್ ನೆಹರು, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಮೌಲಾನಾ ಆಜಾದ್ ಮೊದಲಾದ ಮಹನೀಯರು ಮಾಡಿದ ತ್ಯಾಗ, ಬಲಿದಾನಗಳ ಫಲದಿಂದ ನಾವೆಲ್ಲರೂ ಸ್ವಾತಂತ್ರ್ಯವನ್ನು ಪಡೆದಿದ್ದೇವೆ. ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಭಾರತದ ಸಂವಿಧಾನವು ರಾಷ್ಟ್ರದ ಆಡಳಿತ ಮತ್ತು ಅಭಿವೃದ್ಧಿಯ ಬುನಾದಿಯಾಗಿದೆ ಎಂದು ಸಚಿವರು ಹೇಳಿದರು.
*ಧಾರವಾಡ ಜಿಲ್ಲೆಯ ನಮ್ಮವರ ನೆನಪು:*
ಅಹಿಂಸಾ ಮಾರ್ಗದಲ್ಲಿಯೇ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕೆಂಬ ಮಹಾತ್ಮಾ ಗಾಂಧೀಜಿ ಅವರ ಹೋರಾಟಕ್ಕೆ ಈ ಭಾಗದ ಮೈಲಾರ ಮಹದೇವಪ್ಪ, ಆರ್.ಆರ್.ದಿವಾಕರ್, ಉಮಾಬಾಯಿ ಕುಂದಾಪುರ, ಎನ್.ಎಸ್. ಹರಡೀಕರ್, ಕೆ.ಎಫ್.ಪಾಟೀಲ, ಗೋವಿಂದಾಚಾರ್ಯ ಅಗ್ನಿಹೋತ್ರಿ, ನರಸಿಂಹ ದಾಬಡೆ ಮೊದಲಾದ ನೇತಾರರು ಕೈ ಜೋಡಿಸಿದ್ದರು.
ನಮ್ಮ ದೇಶದ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನಗಳು ರಾಷ್ಟ್ರದ ಅಸ್ತಿತ್ವ, ಸಾರ್ವಭೌಮತ್ವವನ್ನು ಸಾರುತ್ತಿವೆ ಹಾಗೂ ರಾಷ್ಟ್ರದ ಹಿನ್ನಲೆ, ಕಲ್ಪನೆ ಮತ್ತು ಸಂಸ್ಕೃತಿಯನ್ನು ಪ್ರತಿಪಾದಿಸುತ್ತವೆ. ಈ ಹಿನ್ನಲೆಯಲ್ಲಿ ಇವುಗಳಿಗೆ ಗೌರವ ತೋರುವುದು, ಗೌರವ ದೊರಕಿಸಿಕೊಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಸಚಿವ ಸಂತೋಷ ಲಾಡ ತಿಳಿಸಿದರು.
*ನಮ್ಮ ಧ್ವಜ, ನಮ್ಮ ಹೆಮ್ಮೆ:* ದೇಶದ ಉಜ್ವಲ ಭವಿಷ್ಯಕ್ಕಾಗಿ ಪ್ರತಿಯೊಬ್ಬ ನಾಗರಿಕನು ಬೆಳೆಯಲು ಮತ್ತು ದೇಶದ ಪ್ರಗತಿಗೆ ಕೊಡುಗೆ ನೀಡಲು ಅವಕಾಶವನ್ನು ಪಡೆಯುವಂತಾಗಲಿ ಎಂದು ನಾವು ಒಟ್ಟಾಗಿ ಪ್ರತಿಜ್ಞೆ ಮಾಡೋಣ. ನಮ್ಮ ದೇಶದ ಹೆಮ್ಮೆಯ ಸಂಕೇತವಾಗಿರುವ ರಾಷ್ಟ್ರಧ್ವಜವನ್ನು ಧಾರವಾಡದ ಗರಗ ಹಾಗೂ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಸಿದ್ಧಪಡಿಸಿ ದೇಶಕ್ಕೆ ಒದಗಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.
ನಾವು ತ್ರಿವರ್ಣ ಧ್ವಜವನ್ನು ಹಾರಿಸುವಾಗ ಅದು ನಮ್ಮ ಏಕತೆ, ವೈವಿಧ್ಯತೆ ಮತ್ತು ಮುರಿಯಲಾಗದ ಮನೋಭಾವದ ಸಂಕೇತವಾಗಿರಲಿ ಎಂದು ಸಚಿವ ಸಂತೋಷ ಲಾಡ ತಮ್ಮ ಆಶಯ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಧಾರವಾಡ ಜಿಲ್ಲೆಗೆ ಭೇಟಿ ಕೊಟ್ಟ ಮಹನೀಯರಾದ ಮಹಾತ್ಮಾ ಗಾಂಧೀಜಿ, ಡಾ. ರಾಜೇಂದ್ರ ಪ್ರಸಾದ್, ಸುಭಾಷ್ ಚಂದ್ರ ಬೋಸ್ ಇವರುಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳೋಣ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಧಾರವಾಡ ಜಿಲ್ಲೆಯಿಂದ ಪ್ರಕಟವಾಗುತ್ತಿದ್ದ ರಾಜಹಂಸ ಪತ್ರಿಕೆ, ಕನ್ನಡ ಕೇಸರಿ ಹಾಗೂ ಇತರೆ ಪತ್ರಿಕೆಗಳ ಪಾತ್ರವು ಬಹಳ ಮುಖ್ಯವಾಗಿದೆ.
ಸರ್ ಸಿದ್ದಪ್ಪ ಕಂಬಳಿ, ಡೆಪ್ಯೂಟಿ ಚೆನ್ನಬಸಪ್ಪ, ಅರಟಾಳ ರುದ್ರಗೌಡರು, ಈ ಭಾಗದ ಶಿಕ್ಷಣ ಮತ್ತು ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ನಾವು ಸದಾಕಾಲ ನೆನಪಿಸಿಕೊಳ್ಳೋಣ ಎಂದು ಸಚಿವ ಸಂತೋಷ ಲಾಡ ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆಯ ಶುಭ ದಿನದಂದು ಒಲಂಪಿಕ್ ಪಂದ್ಯಾವಳಿಯಲ್ಲಿ ಭಾಗವಹಿಸಿ ದೇಶಕ್ಕೆ ಪದಕಗಳನ್ನು ತಂದಂತಹ ಕ್ರೀಡಾಪಟುಗಳಿಗೆ ಜನತೆಯ ಪರವಾಗಿ ಶುಭಾಶಯಗಳನ್ನು ಸಲ್ಲಿಸೋಣ. ನಾವೆಲ್ಲರೂ ಒಟ್ಟಾಗಿ ಇಂದು ನಮ್ಮ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ ನಮ್ಮ ಬದ್ಧತೆಯನ್ನು ನವೀಕರಿಸೋಣ. ನಾವು ಯಾವಾಗಲೂ ನಮ್ಮ ರಾಷ್ಟ್ರದ ಯೋಗಕ್ಷೇಮಕ್ಕೆ ಆದ್ಯತೆ ನೀಡೋಣ. ನಾವು ನಮ್ಮ ಸಮಾಜಕ್ಕೆ ಸಕಾರಾತ್ಮಕವಾಗಿ ಕೊಡುಗೆ ನೀಡೋಣ. ನಮ್ಮ ಮೌಲ್ಯಗಳನ್ನು ಎತ್ತಿಹಿಡಿಯೋಣ ಮತ್ತು ಎಲ್ಲರಿಗೂ ಉಜ್ವಲ ಭವಿಷ್ಯವನ್ನು ನಿರ್ಮಿಸಲು ಕೆಲಸ ಮಾಡೋಣ ಎಂದು ಸಚಿವ ಸಂತೋಷ ಲಾಡ ಅವರು ಮನಬಿಚ್ಚಿ ಮಾತನಾಡಿ, ಅಭಿಮಾನ ಮತ್ತು ಬದ್ಧತೆಯಿಂದ ಸಂಕಲ್ಪ ಮಾಡಿದರು.
*ರಾಜ್ಯ ಸರಕಾರ ನುಡಿದಂತೆ ನಡೆದಿದೆ;* ರಾಜ್ಯ ಸರಕಾರವು ಜನಪರ ಯೋಜನೆಗಳಾದ ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆ ಹಾಗೂ ಯುವನಿಧಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.
*ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಪ್ರಗತಿ:* ಶಕ್ತಿ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಜುಲೈ ಅಂತ್ಯದವರೆಗೆ 91.09 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದು, ರೂ. 26.02 ಕೋಟಿ ಮೊತ್ತದ ಸೇವೆಯನ್ನು ಪಡೆದಿರುತ್ತಾರೆ.
ಗೃಹಲಕ್ಷ್ಮಿ ಯೋಜನೆಯಡಿ ತಿಂಗಳಿಗೆ ರೂ.2,000/- ಗಳಂತೆ ಧಾರವಾಡ ಜಿಲ್ಲೆಯಲ್ಲಿ ಒಟ್ಟು 3,66,734 ಮಹಿಳೆಯರು ರೂ.688 ಕೋಟಿ ಈ ಯೋಜನೆಯ ಉಪಯೋಗವನ್ನು ಪಡೆಯುತ್ತಿದ್ದಾರೆ.
ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 4,82,274 ಗ್ರಾಹಕರು ಪ್ರಯೋಜನ ಪಡೆದಿದ್ದು, ರೂ.244 ಕೋಟಿಗಳನ್ನು ವೆಚ್ಚ ಮಾಡಲಾಗಿದೆ..
ಅನ್ನಭಾಗ್ಯ ಯೋಜನೆಯಡಿ ಯಾರೂ ಸಹ ಹಸಿವಿನಿಂದ ಇರದಂತೆ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 3,83,161 ಬಿ.ಪಿ.ಎಲ್. ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಒದಗಿಸಲಾಗಿದೆ. ಬಿ.ಪಿ.ಎಲ್. ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ರೂ.170/- ಗಳಂತೆ ರೂ. 215 ಕೋಟಿಗಳನ್ನು ಅವರ ಖಾತೆಗೆ ಜಮೆ ಮಾಡಲಾಗಿದೆ.
ಯುವನಿಧಿ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ 3230 ಫಲಾನುಭವಿಗಳಿಗೆ ನೇರ ನಗದು (ಡಿಬಿಟಿ) ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತವಾರಿ ಸಚಿವ ಸಂತೋಷ ಲಾಡ ಅವರು ಹೇಳಿದರು.
*ಜಿಲ್ಲೆಯಲ್ಲಿ ಮುಂಗಾರು,ಮಳೆ:* 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 2.71 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಈ ವರೆಗೆ 2.71 ಲಕ್ಷ ಹೆಕ್ಟೇರ್‌ಗಳಷ್ಟು ಪ್ರದೇಶ ಬಿತ್ತನೆಯಾಗಿದೆ.
ಮುಂಗಾರು ಹಂಗಾಮಿನಲ್ಲಿ ಒಟ್ಟು 11,521 ಕ್ವಿಂಟಾಲ್ ವಿವಿಧ ಬಿತ್ತನೆ ಬೀಜಗಳನ್ನು ಹಾಗೂ 45,282 ಮೆ.ಟನ್‌ಗಳಷ್ಟು ರಸಗೊಬ್ಬರವನ್ನು ವಿತರಿಸಲಾಗಿದೆ.
ಜನವರಿ 1, 2024 ರಿಂದ ಆಗಸ್ಟ್ 2,2024 ರವರೆಗೆ 425.2 ಮಿ.ಮೀ ವಾಡಿಕೆ ಮಳೆಗೆ, 472 ಮಿ.ಮೀ. ದಷ್ಟು ವಾಸ್ತವ ಮಳೆಯಾಗಿದೆ ಎಂದು ಸಚಿವರು ತಿಳಿಸಿದರು.
ಧಾರವಾಡ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗಾಗಿ ಒಟ್ಟು ರೂ.20 ಕೋಟಿಗಳ ಅನುದಾನ ಲಭ್ಯವಿದೆ. ಜಿಲ್ಲೆಯಲ್ಲಿ ವಿಪತ್ತು ಉಂಟಾದರೆ, ಸಮರ್ಥವಾಗಿ ನಿರ್ವಹಿಸಲು ಅಗತ್ಯ ಅನುದಾನವನ್ನು ಸರಕಾರ ನೀಡಿದ್ದು, ಜಿಲ್ಲಾಡಳಿತದ ಬಳಿ ಜಮೆ ಇದೆ ಎಂದು ಸಚಿವ ಸಂತೋಷ ಲಾಡ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸಲು 'ಜನಸ್ಪಂದನಾ' ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಮತ್ತು ಗ್ಯಾರಂಟಿ ಯೋಜನೆಗಳ ಸಮಾವೇಶಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ಸಚಿವರು ಹೇಳಿದರು.
ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರವು ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ತಾವು ಮಂಡಿಸಿರುವ ಈ ಸಾಲಿನ ಬಜೆಟ್ ಮುಖಾಂತರ ನಾಡಿನ ಜನತೆಗೆ ತಿಳಿಸಿ, ಅವರ ಪ್ರೀತಿ ಗಳಿಸಿದ್ದಾರೆ.
ರೈತರು, ಕಾರ್ಮಿಕರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲಾ ವರ್ಗದ ಬಡ ಜನತೆಗೆ ಭದ್ರತೆಯನ್ನು ಒದಗಿಸಲು ಸರ್ಕಾರ ಸದಾ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಹಾನಗರ ಪೊಲೀಸ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಟಾನ ಸಮಿತಿ ಅಧ್ಯಕ್ಷ ಆರ್.ಎಸ್.ಪಾಟೀಲ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ದೀಪಕ ಮಡಿವಾಳರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್.ಕೆಳದಿಮಠ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ, ಆರ್ ಸಿಎಚ್ಓ ಡಾ.ಸುಜಾತಾ ಹಸವಿಮಠ, ಸ್ಮಾರ್ಟ ಸಿಟಿ ಜಂಟಿ ನಿರ್ದೇಶಕ ಅಜೀಜ್ ದೇಸಾಯಿ, ಹುಡಾ ಆಯುಕ್ತ ಸಂತೋಷ ಬಿರಾದಾರ, ಆಹಾರ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನೀಯರು ಭಾಗವಹಿಸಿದ್ದರು.