*ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ*
*ಜಿಲ್ಲಾಡಳಿತದಿಂದ ನಾಳೆ ಹುಬ್ಬಳ್ಳಿಯಲ್ಲಿ ಪಾರಂಪರಿಕ ನಡಿಗೆ ಆಯೋಜನೆ;*
*ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿ*
*ಧಾರವಾಡ(ಕರ್ನಾಟಕ ವಾರ್ತೆ)ಆಗಸ್ಟ್:12;* ಧಾರವಾಡ ಜಿಲ್ಲಾಡಳಿತವು ಪ್ರಸಕ್ತ ವರ್ಷದ ಸ್ವಾತಂತ್ರ್ಯೋತ್ಸವವನ್ನು ಜಿಲ್ಲೆಯ ಐತಿಹಾಸಿಕತೆಗೆ ಅನುಗುಣವಾಗಿ, ವಿನೂತನವಾಗಿ ಆಚರಿಸುತ್ತಿದೆ. ಸ್ವಾತಂತ್ರ್ಯೋತ್ಸವ ಸಂಭ್ರಮದ ಭಾಗವಾಗಿ ಇಂದು (ಆ.13) ಬೆಳಿಗ್ಗೆ9 ಗಂಟೆಗೆ ಹುಬ್ಬಳ್ಳಿಯಲ್ಲಿ ಬೃಹತ್ ಪಾರಂಪರಿಕ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಾರ್ವಜನಿಕರು, ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಜಿಲ್ಲಾಡಳಿತ, ಹುಬ್ಬಳ್ಳಿ ತಾಲೂಕು ಆಡಳಿತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಮಹಾನಗರ ಪಾಲಿಕೆಯಿಂದ ಸಂಯುಕ್ತವಾಗಿ ನಾಳೆಯ ಪಾರಂಪರಿಕ ನಡೆಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪಾರಂಪರಿಕ ನಡಿಗೆಯಲ್ಲಿ ವಿವಿಧ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಪಾಲ್ಗೋಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪಾರಂಪರಿಕ ನಡಿಗೆಯು ಬೆಳಿಗ್ಗೆ 9ಗಂಟೆಗೆ (ವಿದ್ಯಾನಗರ) ಹೊಸೂರು ಬಸ್ ಡಿಪೋ ಎದುರಿಗಿರುವ ಮಹಿಳಾ ವಿದ್ಯಾಪೀಠದಿಂದ ಆರಂಭವಾಗಿ ಕಿತ್ತೂರು ಚೆನ್ನಮ್ಮ ವೃತ್ತ, ಮಹಾನಗರ ಪಾಲಿಕೆ, ಅಂಬೇಡ್ಕರ್ ವೃತ್ತ, ಕೊಪ್ಪಿಕರ ರಸ್ತೆ, ಬ್ರಾಡ್ವೆ ಮಾರ್ಗದ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಅಸಹಕಾರ ಚಳುವಳಿಯಲ್ಲಿ ಬಲಿದಾನವಾದ ಬಾಲಕ ನಾರಾಯಣ ದೋಣಿ ಅವರ ಸ್ಮಾರಕಕ್ಕೆ ಗೌರವ ಸಲ್ಲಿಸುವ ಮೂಲಕ ಮುಕ್ತಾಯಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಪಾರಂಪರಿಕ ನಡಿಗೆ ಮಾರ್ಗದಲ್ಲಿನ ವಿವಿಧ ಮಹಾತ್ಮರ, ಸ್ವಾತಂತ್ರ್ಯ ಹೋರಾಟಗಾರ ಪ್ರತಿಮೆಗಳಿಗೆ ಗಣ್ಯರು ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಲಿದ್ದಾರೆ.
ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ್ ಉಳ್ಳಾಗಡ್ಡಿ, ಹುಬ್ಬಳ್ಳಿ ತಹಶೀಲ್ದಾರ ಕೆ.ಆರ್.ಪಾಟೀಲ, ಇಓ ಉಮೇಶ ಬೊಮ್ಮಕ್ಕನವರ, ಬಿಇಓ ಚನ್ನಪ್ಪ ಗೌಡರ ಅವರು ಪಾರಂಪರಿಕ ನಡಿಗೆ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸ್ವಾತಂತ್ರ್ಯ ಸಂಭ್ರಮದಲ್ಲಿ ಪಾಲುದಾರರಾಗಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
**********