*ಹಾಲಿನ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹಿಸಿ ಮಳೆಯ ಮಧ್ಯೆ ರೈತರ ಪ್ರತಿಭಟನೆ*
ಧಾರವಾಡ : ಬಾಕಿ ಇರುವ ಹಾಲಿನ ಪ್ರೋತ್ಸಾಹ ಧನವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಧಾರವಾಡ ಕೆಎಂಎಫ್ ಕಚೇರಿ ಎದುರು ರತ್ನ ಭಾರತ ರೈತ ಸಮಾಜದ ಸದಸ್ಯರು ಮಳೆಯಲ್ಲಿಯೇ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ, ರೈತರಿಗೆ ಬರ ಪರಿಹಾರ ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಿಲ್ಲ, ಹಾಲಿಗೆ ನೀಡುವ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡದೇ ಸರ್ಕಾರ ರೈತರೊಂದಿಗೆ ಚೆಲ್ಲಾಟ ಆಡುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ರತ್ನ ಭಾರತ ರೈತ ಸಮಾಜದ ಸದಸ್ಯರು ಘೋಷಣೆ ಕೂಗಿದರು.
ಕೂಡಲೇ ಸರ್ಕಾರ ಬಾಕಿ ಇರುವ ಕೋಟ್ಯಂತರ ರೂಪಾಯಿ ಹಾಲಿನ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಬೇಕು, ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತು ಚರ್ಚೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತ ಚಳವಳಿ ರೂಪಿಸುವ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರತ್ನ ಭಾರತ ರೈತ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷ ಹೇಮನಗೌಡ ಬಸನಗೌಡರ, ಕುಂದಗೋಳ ತಾಲೂಕು ಅಧ್ಯಕ್ಷ ಬಸವರಾಜ ಯೋಗಪ್ಪನವರ, ವಿಠ್ಠಲ ಗಾಟಗೆ, ಸದಾನಂದ ಪೂಜಾರ, ಸೋಮನಗೌಡ ಫಕಿರಗೌಡರ, ರಾಜು ಮಲ್ಲಿಗವಾಡ, ನಾಗಪ್ಪ ಸಿದ್ದನವರ, ಜಯಪ್ಪ ಕಮಡೋಳ್ಳಿ, ಹನುಮಂತಗೌಡ ಗಡದ, ಚನ್ನಬಸಪ್ಪ ಸಿದ್ದುನವರ ಮುಂತಾದವರು ಭಾಗವಹಿಸಿದ್ದರು.