ಸಾಂಸ್ಕೃತಿಕ ನಾಯಕ' - ಬಸವಣ್ಣ - ಡಾ. ವೀರಣ್ಣ ರಾಜೂರ.
ಧಾರವಾಡ :
ಸಮಾನತೆ ಮತ್ತು ಸ್ವಾತಂತ್ರ‍್ಯದ ಪ್ರತೀಕವಾಗಿ ಶರಣ ಸಂಸ್ಕೃತಿಯನ್ನು ಬಸವಣ್ಣನವರು ಬಹಳ ಬಲವಾಗಿ ಪ್ರತಿಪಾದಿಸಿದ್ದರು ಎಂದು ಧಾರವಾಡದ ಡಾ.ಎಂ.ಎಂ.ಕಲಬುರ್ಗಿಯ ರಾಷ್ಟ್ರೀಯ ಪ್ರತಿಷ್ಠಾನ ಅಧ್ಯಕ್ಷರಾದ ಡಾ. ವೀರಣ್ಣ ರಾಜೂರ ಅಭಿಪ್ರಾಯಪಟ್ಟರು .
ಅವರು ಕರ್ನಾಟಕ ವಿಶ್ವವಿದ್ಯಾಲಯದ ಶ್ರೀ ಬಸವೇಶ್ವರ ಪೀಠವು ಬಸವೇಶ್ವರ ಜಯಂತಿ ಅಂಗವಾಗಿ ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ಆಯೋಜಿಸಿದ ‘ಸಾಂಸ್ಕೃತಿಕ ನಾಯಕ' ಎಂಬ ವಿಷಯದ ಕುರಿತು ಆಯೋಜಿಸಿದ ಎರಡು ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಶರಣ ತತ್ವಗಳನ್ನು ಹೊಸ ರೀತಿಯಲ್ಲಿ ವ್ಯಾಖ್ಯಾನ ಮಾಡುವುದು ಅವಶ್ಯಕತೆ ಇದೆ. ಬಸವಣ್ಣನವರು ಶ್ರೇಣಿಕೃತ ಜಾತಿ, ಪುರೋಹಿತ ಮತ್ತು ಶ್ರೇಣೀಕೃತ ರಾಜ ವ್ಯವಸ್ಥೆಯ ಸಂಸ್ಕೃತಿಗಳ ಧಿಕ್ಕರಿಸಿ ಸರ್ವ ಸಮಾನತೆಯ ಸಂಸ್ಕೃತಿಯನ್ನು ಪರಿಚಯಿಸಿದ ಧೀಮಂತರು ಎಂದ ಅವರು ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಬಸವಣ್ಣನವರು ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತು ಆಗಿದ್ದು 7೦೦ ಕ್ಕಿಂತಲೂ ಹೆಚ್ಚು ಕೆಳಸ್ತರದ ಕಾಯಕ ಜೀವಿಗಳನ್ನು ಹೊಂದಿದ್ದರು. ಬಸವಣ್ಣವರ ವಚನಗಳು ಸಂವಿಧಾನವಾಗಿದೆ ಎಂದರು. ಕೆಳಸ್ತರದ ಜನರನ್ನು ಒಗ್ಗೂಡಿಸಿಕೊಂಡು ಅನುಭವ ಮಂಟಪವನ್ನು ರೂಪಿಸಿದ್ದಕ್ಜಾಗಿ ಅವರೊಬ್ಬ ವಿಶ್ವ ಸಾಂಸ್ಕೃತಿಕ ನಾಯಕರಾಗಿದ್ದಾರೆ ಎಂದ ಅವರು ವಚನ ಸಾಹಿತ್ಯದ ಕುರಿತು ವಿಶೇಷ ಕಾರ್ಯವನ್ನು ಕವಿವಿ ಬಸವೇಶ್ವರ ಪೀಠ ಮಾಡಿದೆ ಎಂದರು.
ಮುಖ್ಯ ಅತಿಥಿಗಳಾದ ಕವಿವಿ ಮೌಲ್ಯಮಾಪನ ಕುಲಸಚಿವರಾದ ಡಾ.ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿ ಬಸವಣ್ಣನವರು ವಿಶ್ವ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಸೇರಿದಂತೆ ಅನೇಕ ವಿಷಯಗಳ ಕುರಿತು ವಚನಗಳ ಮೂಲಕ ಬಸವಣ್ಣನವರು ನಮಗೆ ನೀಡಿದ್ದಾರೆ. ಬಸವಣ್ಣನವರು ನುಡಿದಂತೆ ನಡೆದಿದ್ದಾರೆ ಎಂದ ಅವರು ಧರ್ಮ ಮತ್ತು ರಾಜಪ್ರಭುತ್ವವನ್ನು ದಿಕ್ಕರಿಸಿ ಸಾಮಾಜಿಕ ಕ್ರಾಂತಿಗೆ ಹೆಜ್ಜೆ ಇಟ್ಟರು. ಬಸವೇಶ್ವರರು ಅನುಭವ ಮಂಟಪದ ಮೂಲಕ ಶರಣ ಸಂಸ್ಕತಿಯನ್ನು ನಾಡಿಗೆ ಪರಿಚಯಿಸಿದರು. ಬಹು ಸಂಸ್ಕೃತಿಗಳ ನೆಲೆಗಳನ್ನು ಒಗ್ಗೂಡಿಸಿ ಕೊಂಡು ಹೊದವರಲ್ಲಿ ಬಸವೇಶ್ವರ ಪಾತ್ರ ಬಹಳ ಎಂದು ಅವರು ಜಗತ್ತಿನ ಅನೇಕ ಮಹಾನ್ ದಾರ್ಶನಿಕರಲ್ಲಿ ಬಸಣ್ಣವರು ಭಿನ್ನವಾಗಿ ನಿಲ್ಲುತ್ತಾರೆ ಬಸವಣ್ಣನವರು ಸಾಮರಸ್ಯದ ಮೂಲಕ ಬದುಕಿನ ಅನೇಕ ದ್ವಂದ್ವ ಗಳನ್ನು ಬಿಡಿಸಿದ್ದಾರೆ. ಮಹಿಳೆಯರನ್ನು ಒಳಗೊಂಡಂತೆ ಎಲ್ಲ ಸ್ತರದ ಸಮುದಾಯಗಳಿಗೆ ಹೊಸ ದಿಕ್ಕನ್ನು ಬಸವಣ್ಣನವರು ತೋರಿಸಿದ್ದಾರೆ ಎಂದರು. ಶ್ರೇಣೀಕೃತ ಸಮಾಜದಲ್ಲಿರುವ ಅಂತರವನ್ನು ಕಡಿಮೆ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದರು.
ಕವಿವಿ ಬಸವೇಶ್ವರ ಪೀಠದ ಸಂಯೋಜಕರಾದ ಡಾ. ಪ್ರೊ. ಸಿ.ಎಂ.ಕುಂದಗೋಳ ಪ್ರಸ್ತಾವಿಕವಾಗಿ ಮಾತನಾಡಿ ಎರಡು ದಿನಗಳಲ್ಲಿ ೧೬ ಜನ ವಿದ್ವಾಂಸರು ಬಸವಣ್ಣನವರ ಕುರಿತು ಮಾತನಾಡಿದ್ದು, ಎಲ್ಲಾ ವಿದ್ವಾಂಸರ ಪ್ರಬಂಧ ಲೇಖನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವದು ಎಂದರು.
ಇದೇ ಸಂದರ್ಭದಲ್ಲಿ ಕವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಎರಡು ದಿನಗಳ ಅಂತರರಾಷ್ಟ್ರೀಯ ಸಂಕಿರಣದ ಕುರಿತು ಹೊರತಂದ ವಿದ್ಯಾ ಸಮಾಚಾರ ವಿಶೇಷ ಸಂಚಿಕೆಯನ್ನು ವೇದಿಕೆ ಮೇಲಿದ್ದ ಗಣ್ಯರು ಬಿಡುಗಡೆ ಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಸಚಿವರಾದ ಡಾ.ಎ.ಚೆನ್ನಪ್ಪ ಮಾತನಾಡಿ... ಬಸಣ್ಣವರ ದಾಸೋಹ ಪರಿಕಲ್ಪನೆಯು ಆಧಾರದ ಮೇಲೆ ಈ ಎರಡು ದಿನಗಳ ರಾಷ್ಟ್ರೀಯ ವಿಚಾರ ನಡೆಯುತ್ತಿರುವದು ವಿಶೇಷ ಎಂದ ಅವರು ಜ್ಞಾನ ದಾಸೋಹ ಮತ್ತು ಅನ್ನ ದಾಸೋಹಕ್ಕೆ ಬಸವಣ್ಣನವರು ಹೆಚ್ಚು ಮಹತ್ವ ನೀಡಿದ್ದರು ಎಂದರು.
ಕವಿವಿ ಕುಲಪತಿಗಳಾದ ಪ್ರೊ.ಕೆ.ಬಿ.ಗುಡಸಿ, ಕವಿವಿ ಹಣಕಾಸು ಅಧಿಕಾರಿಗಳಾದ ಪ್ರೊ.ಸಿ.ಕೃಷ್ಣಮೂರ್ತಿ, ಶ್ರೀ ಬಸವೇಶ್ವರ ಪೀಠದ ಸಂಯೋಜಕರಾದ ಡಾ. ಪ್ರೊ.ಸಿ.ಎಂ.ಕುಂದಗೋಳ, ಡಾ. ಈರಣ್ಣ ಇಂಜಣಗೇರಿ, ಸೇರಿದಂತೆ ಬಸವ ಅನುಯಾಯಿಗಳು, ಸಿಂಡಿಕೇಟ್ ಸದಸ್ಯರು, ಪ್ರಾಧ್ಯಾಪಕರು, ಸಂಶೋಧಕರು, ಅನೇಕ ವಿದ್ವಾಂಸರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಇದ್ದರು.
ಫೋಟೋ ಶೀರ್ಷಿಕೆ :
ಕರ್ನಾಟಕ ವಿಶ್ವವಿದ್ಯಾಲಯದ ಶ್ರೀ ಬಸವೇಶ್ವರ ಪೀಠವು ಬಸವೇಶ್ವರ ಜಯಂತಿ ಅಂಗವಾಗಿ ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ಆಯೋಜಿಸಿದ 'ಸಾಂಸ್ಕೃತಿಕ ನಾಯಕ' ಎಂಬ ವಿಷಯದ ಕುರಿತು ಆಯೋಜಿಸಿದ ಎರಡು ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಡಾ. ವೀರಣ್ಣ ರಾಜೂರ ಮಾತನಾಡಿದರು. ಚಿತ್ರದಲ್ಲಿ ಪ್ರೊ.ಸಿ.ಕೃಷ್ಣಮೂರ್ತಿ, ಡಾ.ಎ.ಚೆನ್ನಪ್ಪ, ಡಾ.ನಿಜಲಿಂಗಪ್ಪ ಮಟ್ಟಿಹಾಳ, ಪ್ರೊ.ಸಿ.ಎಂ.ಕುಂದಗೋಳ ಇದ್ದರು.