AIMSS ಹಾಗೂ AIDYO ಸಂಘಟನೆಗಳಿಂದ ಜಂಟಿಯಾಗಿ ಧಾರವಾಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೆಣ್ಣು ಮಕ್ಕಳ ಹತ್ಯೆ ಪ್ರಕರಣಗಳನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಧಾರವಾಡದ ಸುಭಾಸ್ ರಸ್ತೆಯ ವಿವೇಕಾನಂದ ವೃತ್ತದಲ್ಲಿ ಇಂದು AIMSS ಮತ್ತು AIDYO ಮಹಿಳಾ ಹಾಗೂ ಯುವಜನ ಸಂಘಟನೆಗಳಿಂದ ಜಂಟಿಯಾಗಿ ಧಾರವಾಡ ಜಿಲ್ಲೆಯಲ್ಲಿ ನಡೆದಿರುವ ಹೆಣ್ಣುಮಕ್ಕಳ ಹತ್ಯೆ ಘಟನೆಗಳನ್ನು ಖಂಡಿಸಿ ಪ್ರತಿಭಟನೆಯನ್ನು ಸಂಘಟಿಸಲಾಗಿತ್ತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ AIMSS ನ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಮಧುಲತಾ ಗೌಡರ್ ಮಾತನಾಡುತ್ತಾ -ಉನ್ನತ ನೀತಿ- ನೈತಿಕತೆ, ಸಂಸ್ಕೃತಿ, ನೈಜ್ಯಪ್ರೀತಿ ಭಾವನೆಯ ಪರಿಕಲ್ಪನೆಗಳ ಜ್ಞಾನದ ಕೊರತೆ ಇಂದಿನ ಯುವಸಮುದಾಯವನ್ನು ಬಲವಾಗಿ ಕಾಡುತ್ತಿದೆ. ಆಳುವ ಸರ್ಕಾರಗಳ ಕುಮ್ಮಕ್ಕಿನೊಂದಿಗೆ ಇವತ್ತಿನ ಸಿನೆಮಾ - ಸಾಹಿತ್ಯ - ಇಂಟರ್ನೆಟ್ ಗಳಲ್ಲಿ ವ್ಯಾಪಾಕವಾಗಿ ಭಿತ್ತರವಾಗುತ್ತಿರುವ ಹಿಂಸೆ, ಕ್ರೌರ್ಯ , ಅಶ್ಲೀಲತೆ ಹಾಗೂ ಮದ್ಯ- ಮಾದಕ ದ್ರವ್ಯಗಳ ಹಾವಳಿ
ವಿದ್ಯಾರ್ಥಿ- ಯುವಜನರ ಮನಸ್ಥಿತಿಯನ್ನು ಕಲುಷಿತ ಮಾಡುತ್ತಿದೆ. ಹಾಗಾಗಿ ಅತ್ಯಾಚಾರ, ಗುಂಪು ಅತ್ಯಾಚಾರ, ಪ್ರೀತಿಯ ಹೆಸರಿನಲ್ಲಿ ನಡೆಯುತ್ತಿರುವ ಮೃಗಿಯ ಹತ್ಯೆಗಳು ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಅದರಲ್ಲೂ ಕಳೆದ ಒಂದು ತಿಂಗಳಲ್ಲಿ ನಡೆದ ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣ, ಹುಬ್ಬಳ್ಳಿಯಲ್ಲಿ ನಡೆದ ನೇಹಾ - ಅಂಜಲಿ ಹತ್ಯೆ ಪ್ರಕರಣಗಳು, ಕೊಡಗಿನ ಮೀನಾಳ ರುಂಡ ಕತ್ತರಿಸಿದ ಹೇಯ ಕೃತ್ಯ ಸಮಾಜದಲ್ಲಿ ತೀವ್ರ ಅಘಾತದ ಅಲೆಯೆಬ್ಬಿಸಿವೆ. ಈ ಘಟನೆಗಳು ಜಿಲ್ಲೆ, ರಾಜ್ಯದಲ್ಲಿ ಅಷ್ಟೇ ಅಲ್ಲದೇ ಇಡೀ ದೇಶದ ಜನತೆಯನ್ನು ಬೆಚ್ಚಿಬೀಳಿಸಿದೆ. ಇದರಿಂದ ಆಘಾತಕ್ಕೋಳಗಾದ ಸಾಮಾನ್ಯ ಜನ, ಗ್ರಾಮೀಣ ಭಾಗದ ತಂದೆ-ತಾಯಂದಿರು ಹೆಣ್ಣುಮಕ್ಕಳನ್ನು ಶಾಲೆ- ಕಾಲೇಜುಗಳಿಗೆ ಕಳಿಸುವ ಬಗ್ಗೆ ಯೋಚಿಸುವಂತಾಗಿದೆ. ಇಂತಹ ಘಟನೆಗಳನ್ನು ರಾಜಕೀಯ ಪಕ್ಷಗಳು ತಮ್ಮ ವೈಯುಕ್ತಿಕ ಹಿತಾಸಕ್ತಿ, ಚುನಾವಣಾ ರಾಜಕೀಯಕ್ಕೆ ಜಾತಿ- ಧರ್ಮದ ಲೇಪನ ಹಚ್ಚಿ ದಾಳವಾಗಿ ಬಳಸಿಕೊಳ್ಳುತ್ತಿರುವುದು ಇನ್ನೂ ಹೇಯವೆನಿಸುತ್ತಿದೆ. ಜನಸಾಮಾನ್ಯರು ಇಂತಹ ಘಟನೆಗಳಿಗೆ ಮೂಲ ಕಾರಣವೇನು, ತಡೆಗಟ್ಟಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವ ಕಡೆ ಆಲೋಚಿಸುವಂತಾಗಬೇಕು ಎಂದರು.
AIDYO ಧಾರವಾಡ ಜಿಲ್ಲಾ ಅಧ್ಯಕ್ಷರಾದ ಭವಾನಿ ಶಂಕರ್ ಮಾತನಾಡಿ - ಹೆಣ್ಣುಮಕ್ಕಳ ಮೇಲೆ ದಿನೇ ದಿನೇ ಹೆಚ್ಚುತ್ತಿರುವ ಇಂತಹ ಘಟನೆಗಳನ್ನು ನೋಡಿದಾಗ ಮನಸ್ಸಿಗೆ ತುಂಬಾ ಘಾಸಿಯಾಗುತ್ತಿದೆ. ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ನೋವಾಗುತ್ತಿದೆ. ಇಂದಿನ ಯುವಸಮುದಾಯದಲ್ಲಿ ಸೂಕ್ಷ್ಮ ಸಂವೇದನೆ, ಆತ್ಮವಿಶ್ವಾಸ, ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿರುವುದರ ಸಂಕೇತವೇ ಇಂತಹ ಮೃಗಿಯ ಘಟನೆಗಳು. ಇಂದು ಯುವಕ-ಯುವತಿಯರಲ್ಲಿ ಮಾನಸಿಕ ಖಿನ್ನತೆ ಹೆಚ್ಚು ಭಾದಿಸುತ್ತಿದೆ ಪರಿಣಾಮವಾಗಿ ಕ್ರೂರವಾಗಿ ಹತ್ಯೆಗೈಯುವುದು, ಆತ್ಮಹತ್ಯೆಗೆ ಶರಣಾಗುವಿಕೆ ಸರ್ವೆಸಾಮಾನ್ಯವೆನ್ನುವಂತಾಗಿದೆ . ಉನ್ನತ ಆದರ್ಶ ವ್ಯಕ್ತಿಗಳ ಮೌಲ್ಯಗಳನ್ನು, ನೈತಿಕ ಸ್ಥೈರ್ಯ ವನ್ನು ಯುವಜನಾಂಗದಲ್ಲಿ ತುಂಬುವ ಕೆಲಸ ಮಾಡಬೇಕಿದೆ. ಆ ನಿಟ್ಟಿನಲ್ಲಿ ಸಂಘಟಿತ ಸಾಮಾಜಿಕ-ಸಾಂಸ್ಕೃತಿಕ ಚಳುವಳಿಗಳನ್ನು ಕಟ್ಟಲು ಪ್ರತಿಯೊಬ್ಬರೂ ಮುಂದೆ ಬರಬೇಕು ಎಂದು ಜನತೆಗೆ ಕರೆನೀಡಿದರು.
ಪ್ರತಿಭಟನಾ ಸಭೆಯ ನಿರ್ವಹಣೆ ಮಾಡುತ್ತಾ AIMSS ನ ಧಾರವಾಡ ಜಿಲ್ಲಾ ಕಾರ್ಯದರ್ಶಿಯಾದ ಗಂಗೂಬಾಯಿ ಕೋಕರೆ-ಇಂತಹ ಘಟನೆಯಲ್ಲಿ ಭಾಗಿಯಾದ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ಖಾತ್ರಿಯಾಗಬೇಕು. ಆ ನಿಟ್ಟಿನಲ್ಲಿ ಆಳ್ವಿಕರು ಬಲಿಷ್ಠ ಕಾನೂನು ಕ್ರಮಗಳನ್ನು ರೂಪಿಸಬೇಕು. ಹಾಗಾಗಬೇಕೆಂದರೆ ಪ್ರಬಲ ಜನಹೋರಾಟಗಳು ಬೆಳೆಯಬೇಕಿದೆ ಎಂದರು. ಆ ನಿಟ್ಟಿನಲ್ಲಿ ನಮ್ಮ ಸಂಘಟನೆಗಳು ನಿರಂತರವಾಗಿ ಹಳ್ಳಿ- ಬಡಾವಣೆ,ಕೊಳಗೇರಿ, ಶಾಲೆ- ಕಾಲೇಜು, ಹಾಸ್ಟೆಲ್ ಗಳಲ್ಲಿ ಯುವಜನರ ನಡುವೆ ಉನ್ನತ ನೀತಿ ಸಂಸ್ಕೃತಿ ತುಂಬುವ ಕಾರ್ಯಕ್ರಮಗಳನ್ನು ಸಂಘತಿಸುತ್ತ ಬಂದಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ವ್ಯಾಪಾಕವಾಗಿ ಆಯೋಜಿಸಲು ನಿರ್ಧಾರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ AIDYO ಧಾರವಾಡ ಜಿಲ್ಲಾ ಕಾರ್ಯದರ್ಶಿಯಾದ ರಣಜಿತ್ ದೂಪದ್, AIDYO ಜಿಲ್ಲಾ ಸಂಘಟನಾಕಾರರಾದ ಪ್ರೀತಿ ಸಿಂಗಾಡೆ, ಸಿಮನ್ ಸದಸ್ಯರುಗಳಾದ ಪವಿತ್ರಾ, ಲಕ್ಷ್ಮಿ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.