*ಡಿ.21ರಿಂದ ಶ್ರೀಕ್ಷೇತ್ರ ಉಳವಿಗೆ ಏಳನೇ ವರ್ಷದ ಪಾದಯಾತ್ರೆಗೆ ಚಾಲನೆ*
ಧಾರವಾಡ: ಧಾರವಾಡ ತಾಲೂಕಿನ ಗರಗ ಗ್ರಾಮದ ಶ್ರೀ ಮಡಿವಾಳೇಶ್ವರ ಕಲ್ಮಠದ ಉತ್ತರಾಧಿಕಾರಿಗಳಾದ ಪರಮಪೂಜ್ಯ ಪ್ರಶಾಂತ ದೇವರು ಸ್ವಾಮಿಜಿ ಹಾಗೂ ಮಾಜಿ ಶಾಸಕ ಅಮೃತ ದೇಸಾಯಿಯವರ ನೇತೃತ್ವದಲ್ಲಿ ಇದೇ ಡಿಸೆಂಬರ್ 21ರಂದು ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ 7ನೇ ವರ್ಷದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 10 ಗಂಟೆಗೆ ಶ್ರೀಮಠದಿಂದ ಆರಂಭವಾಗುವ ಪಾದಯಾತ್ರೆಗೆ ಶ್ರೀಮಠದ ಉತ್ತರಾಧಿಕಾರಿಗಳಾದ ಪ್ರಶಾಂತ ದೇವರು ಸ್ವಾಮಿಜಿ ಚಾಲನೆ ನೀಡಲಿದ್ದಾರೆ. ನಂತರ ನಡೆಯುವ ಪಾದಯಾತ್ರೆಯಲ್ಲಿ ಶ್ರೀಮಠದ ಕಾರ್ಯಾಧ್ಯಕ್ಷರಾದ ಅಶೋಕ ದೇಸಾಯಿ ಮತ್ತು ಬಿಜೆಪಿ ಮುಖಂಡರು ಹಾಗೂ ಮಾಜಿ ಶಾಸಕರಾದ ಅಮೃತ ದೇಸಾಯಿ, ಪತ್ನಿ ಪ್ರಿಯಾ ಅಮೃತ ದೇಸಾಯಿ , ಶ್ರೀಮಠದ ಟ್ರಸ್ಟ್ ಕಮೀಟಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಧಾರವಾಡ ತಾಲೂಕಿನ ಹಂಗರಕಿ, ತಡಕೋಡ, ಯಾದವಾಡ, ಉಪ್ಪಿನಬೆಟಗೇರಿ ಸೇರಿದಂತೆ ವಿವಿಧ 25 ಗ್ರಾಮದ 1500ಕ್ಕೂ ಹೆಚ್ಚು ಭಕ್ತರು ಭಾಗವಹಿಸಲಿದ್ದಾರೆ.
*ಪಾದಯಾತ್ರೆಯ ಮಾರ್ಗ:*
ಡಿಸೆಂಬರ್ 21ರಂದು ಗರಗ ಶ್ರೀ ಮಡಿವಾಳೇಶ್ವರ ಕಲ್ಮಠದಿಂದ ಪ್ರಾರಂಭವಾಗುವ ಪಾದಯಾತ್ರೆ, ನಂತರ ಮಂಗಳಗಟ್ಟಿ, ನರೇಂದ್ರ ಬೈಪಾಸ್ ಮಾರ್ಗವಾಗಿ ಧಾರವಾಡ ತಪೋವನಕ್ಕೆ ಆಗಮಿಸಲಿದೆ. ಅಂದು ಮಧ್ಯಾಹ್ನ ಊಟ, ನಂತರ ನಿಗದಿ ಮಡಿವಾಳೇಶ್ವರ ಮಠದಲ್ಲಿ ರಾತ್ರಿ ವಾಸ್ತವ್ಯ, ಡಿ.22ರಂದು ಹಳಿಯಾಳ ಎಪಿಎಂಸಿಯಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ, ಹಳಿಯಾಳ ಬಳಿಯ ಕರ್ಕಾ ಟ್ಯಾಂಕ್ ಬಳಿಯ ಆವರಣದಲ್ಲಿ ರಾತ್ರಿ ವಾಸ್ತವ್ಯ, ಡಿ.23ರಂದು ದಾಂಡೇಲಿ ಮಲ್ಲಿಕಾರ್ಜುನ ಮಠದಲ್ಲಿ ಮಧ್ಯಾಹ್ನ ಊಟ, ನಂತರ ಪಾಟೋಲಿ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ನಡೆಯಲಿದೆ. ಡಿ.24 ರಂದು ಕಾನೇರಿಯ ಅನಾಕೊಂಡೆಯಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಹಾಗೂ ರಾತ್ರಿ ಶ್ರೀಕ್ಷೇತ್ರ ಉಳವಿ ಚನ್ನಬಸವೇಶ್ವರ ದೇವಸ್ಥಾನ ತಲುಪಿ, ವಾಸ್ತವ್ಯ ಹೂಡಲಿದೆ. ಅದೇ ದಿನ ಮಧ್ಯಾಹ್ನ 4ಗಂಟೆಗೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಡಿ.25ರಂದು ನಸುಕಿನ ಜಾವ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಹಾಗೂ ಕಾರ್ತಿಕೋತ್ಸನ ಜರುಗಲಿದೆ. ಅದೇ ದಿನ ಮಧ್ಯಾಹ್ಮ ಊಟದ ನಂತರ ಪಾದಯಾತ್ರೆ ವಾಪಸ್ ಗರಗ ಮಡಿವಾಳೇಶ್ವರ ಮಠಕ್ಕೆ ಆಗಮಿಸಿ ಮುಕ್ತಾಯಗೊಳ್ಳಲಿದೆ. ಆಸಕ್ತರು ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು ಎಂದು ಶ್ರೀಮಠದ ಕಾರ್ಯಾಧ್ಯಕ್ಷರಾದ ಅಶೋಕ ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.