ಮಕ್ಕಳಲ್ಲಿ ಅತಿಸಾರದಿಂದ ನಿರ್ಜಲೀಕರಣ ಉಂಟಾಗಿ ಜೀವಕ್ಕೆ ಅಪಾಯ ಆಗಬಹುದು; ನಿರ್ಲಕ್ಷ್ಯ ಮಾಡದೆ ಪಾಲಕರು ಜಾಗೃತಿ ವಹಿಸಬೇಕು: ಸಿಇಓ ಸ್ವರೂಪ ಟಿ.ಕೆ.*

*ಮಕ್ಕಳಲ್ಲಿ ಅತಿಸಾರದಿಂದ ನಿರ್ಜಲೀಕರಣ ಉಂಟಾಗಿ ಜೀವಕ್ಕೆ ಅಪಾಯ ಆಗಬಹುದು; ನಿರ್ಲಕ್ಷ್ಯ ಮಾಡದೆ ಪಾಲಕರು ಜಾಗೃತಿ ವಹಿಸಬೇಕು: ಸಿಇಓ ಸ್ವರೂಪ ಟಿ.ಕೆ.*
*ಧಾರವಾಡ (ಕರ್ನಾಟಕ ವಾರ್ತೆ) ನ.15:* ಮಕ್ಕಳಲ್ಲಿ ಅತಿಸಾರದಿಂದ ನಿರ್ಜಲೀಕರಣ ಉಂಟಾಗಿ ಮಕ್ಕಳ ಜೀವಕ್ಕೆ ಅಪಾಯವಾಗಬಹುದು. ಪಾಲಕರು ನಿರ್ಲಕ್ಷ್ಯ ವಹಿಸದೆ ಜಾಗೃತರಾಗಿ, ನಿಗಧಿತ ಪ್ರಮಾಣದ ಓಆರ್‍ಎಸ್ ದ್ರಾವಣ ಮತ್ತು ಝಿಂಕ್ ಮಾತ್ರೆ ನೀಡಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಹೇಳಿದರು.

ಅವರು ಇಂದು (ನ.15) ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಯ ತಾಯಿ ಮಕ್ಕಳ ಆಸ್ಪತ್ರೆ ವಾರ್ಡ್‍ದಲ್ಲಿ ತೀವ್ರತರ ಅತಿಸಾರ ನಿಯಂತ್ರಣ ರಾಷ್ಟ್ರೀಯ ನವಜಾತ ಶಿಶು ಸಪ್ತಾಹ ಹಾಗೂ ಸ್ಯಾನ್ಸ್ (SAANS) ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. 

ಅತಿಸಾರದಿಂದ ನಿರ್ಜಲೀಕರಣವಾಗಿ ಅದು, ಮಕ್ಕಳಿಗೆ ಮಾರಣಾಂತಿಕವಾಗಬಹುದು. ಇದನ್ನು ಸರಿಯಾದ ಪ್ರಮಾಣದಲ್ಲಿ ಓಆರ್‍ಎಸ್ ಮತ್ತು ಝೀಂಕ್ (ORS–ZINC) ಮಾತ್ರೆಗಳನ್ನು  ನೀಡುವುದರ ಮೂಲಕ ತಡೆಗಟ್ಟಬಹುದೆಂದು ಅವರು ತಿಳಿಸಿದರು.

ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದ ಮೂಲ ಉದ್ದೇಶ “ಅತಿಸಾರ ಭೇದಿಯಿಂದ ಬಾಲ್ಯದ ಸಾವುಗಳ ಶೂನ್ಯಗೊಳಿಸುವುದರ ಕಡೆಗೆ ತೀವ್ರ ಪ್ರಯತ್ನ” ವಾಗಿದೆ ಎಂದು ಅವರು ತಿಳಿಸಿದರು. 

ನವೆಂಬರ್ 15 ರಿಂದ 21 ರವರೆಗೆ ಜಿಲ್ಲೆಯಲ್ಲಿ ರಾಷ್ಟ್ರೀಯ ನವಜಾತ ಶಿಶು ಸಪ್ತಾಹವನ್ನು ಆಚರಿಸಲಾಗುತ್ತಿದೆ. ಸಪ್ತಾಹವು ಸಮುದಾಯ ಸೌಲಭ್ಯ ತೊಡಗಿಸಿಕೊಳ್ಳುವಿಕೆಯ ಮೂಲಕ  ಶಿಶುವನ್ನು  ಪೆÇೀಷಿಸುವುದು ಎಂಬ ವಿಷಯ ವಸ್ತು ಒಳಗೊಂಡಿದೆ. ನವಜಾತ ಶಿಶುವಿಗೆ ಉತ್ತಮ ಆರೈಕೆ ನೀಡುವುದರ ಮೂಲಕ ನವಜಾತ ಶಿಶುವಿನ ಮರಣ ಪ್ರಮಾಣ ಕಡಿಮೆ ಮಾಡಬಹುದು. ಈ ನಿಟ್ಟಿನಲ್ಲಿ ಗರ್ಭಿಣಿಯರಲ್ಲಿ, ನವಜಾತ ಪಾಲಕರಲ್ಲಿ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು  ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು. 

ಜಿಲ್ಲಾ ಆರೋಗ್ಯಾಧಿಕಾರಿ ಡಾ: ಪಾಟೀಲ ಶಶಿ ಅವರು  ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಅತಿಸಾರ ಉಂಟಾಗದಂತೆ ಮಾಡುವಲ್ಲಿ ಶುಚಿತ್ವದ ಪಾತ್ರ ಮುಖ್ಯವಾಗಿದೆ. ಆಹಾರ ತಯಾರಿಕೆ, ಕೈ, ಬಟ್ಟೆಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವುದರ ಮೂಲಕ ಮಕ್ಕಳಲ್ಲಿ ಅತಿಸಾರ ಉಂಟಾಗದಂತೆ ನೋಡಿಕೊಳ್ಳಬಹುದು ಎಂದು ಹೇಳಿದರು. 

ಮಗುವಿಗೆ ಅತಿಸಾರ ಉಂಟಾದಾಗ ಓಆರ್ ಎಸ್ ನೀಡುವುದರ ಮೂಲಕ ನಿರ್ಜಲೀಕರಣ ಆಗದಂತೆ ತಡೆಯಬೇಕು. ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಉಚಿತ ಚಿಕಿತ್ಸೆ ಪಡೆದುಕೊಳ್ಳಲು ಎಂದು ಡಾ.ಪಾಟೀಲ ಶಶಿ ಅವರು ತಿಳಿಸಿದರು.

ಜಿಲ್ಲೆಯಲ್ಲಿ ತೀವ್ರತರ ಅತಿಸಾರ ನಿಯಂತ್ರಣ (ಐಡಿಸಿಎಪ್) ಪಾಕ್ಷಿಕವನ್ನು ನವೆಂಬರ್ 15 ರಿಂದ 28 ರವರೆಗೆ ಎಲ್ಲ ಆರೋಗ್ಯ ಕೇಂದ್ರ, ಉಪಕೇಂದ್ರಗಳಲ್ಲಿ ಹಮ್ಮಿಕೊಂಡಿದ್ದು, ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರ ಮೂಲಕ ಐಡಿಸಿಎಪ್ ಪಾಕ್ಷಿಕ ಕುರಿತಂತೆ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು  ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.

ಮಕ್ಕಳಲ್ಲಿ ನ್ಯೂಮೋನಿಯಾವನ್ನು ಯಶಸ್ವಿಯಾಗಿ ಕೊನೆಗೊಳಿಸಲು ಸಾಮಾಜಿಕ ಜಾಗೃತಿ ಹಾಗೂ ಕ್ರಿಯೆ–2023 ಕಾರ್ಯಕ್ರಮ ಹಮ್ಮಿಕೊಂಡಿದ್ದು, ನ್ಯೂಮೋನಿಯಾ ಕಾಯಿಲೆಯು 5 ವರ್ಷದ ಒಳಗಿನ ಮಕ್ಕಳಿಗೆ ಮರಣಕರವಾಗಿದ್ದು, ಇದರ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಮತ್ತು ಪಿಸಿವಿ ಲಸಿಕೆಯ ಮಹತ್ವವನ್ನು ತಿಳಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ಸಂಗಪ್ಪ ಗಾಬಿ ಅವರು ಮಾತನಾಡಿ, ಪಾಲಕರು ಮಕ್ಕಳನ್ನು ಬೇಗನೆ ಆಸ್ಪತ್ರೆಗೆ ಕರೆದುಕೊಂಡು ಬಂದು ಸೂಕ್ತ ಚಿಕಿತ್ಸೆಯನ್ನು ಪಡೆಯುವುದರಿಂದ ಮಗುವಿಗೆ ಪ್ರಾಣಾಪಾಯವಾಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು. 
ಜಿಲ್ಲಾ ಆಸ್ಪತ್ರೆಯಲ್ಲಿ ನುರಿತ ಮಕ್ಕಳ ತಜ್ಞ ವೈದ್ಯರು ಹಾಗೂ ಉತ್ತಮ ಸೌಲಭ್ಯಗಳಿದ್ದು, ಉಚಿತ ಚಿಕಿತ್ಸೆ ಲಭ್ಯವಿದೆ.  ಸಾರ್ವಜನಿಕರು ಇದರ ಉಪಯೋಗವನ್ನು ಪಡೆಯಲು ತಿಳಿಸಿದರು. 

ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಒಟ್ಟು 100 ಹಾಸಿಗೆಗಳಿದ್ದು, 90 ಹಾಸಿಗೆಗಳು ತಾಯಿಗೆ ಮತ್ತು 10 ನವಜಾತ ಶಿಶುಗಳ ಚಿಕಿತ್ಸೆಗೆ ಮಾಡಲಾಗಿದೆ. ಮತ್ತು ಇದರೊಂದಿಗೆ 30 ಹಾಸಿಗೆಗಳನ್ನು ವಿವಿಧ ರೀತಿಯ ರೋಗಗಳಿಂದ ಬಳಲುತ್ತಿರುವ 12 ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕವಾಗಿ ಮೀಸಲಿಡಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ ಅವರು ತಿಳಿಸಿದರು.

ಅತಿಸಾರದ ಕಾರಣಗಳು ಮತ್ತು ಮುಂಜಾಗ್ರತೆಯ ಕ್ರಮಗಳು, ಚಿಕಿತ್ಸೆ ಕುರಿತಂತೆ ಮಕ್ಕಳ ತಜ್ಞ ವೈದ್ಯರಾದ ಡಾ.ಸಿ.ಎನ್. ನಾಡಗೌಡ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ.ಟಿ.ಎ. ಶೆಪೂರ, ಡಾ.ಪ್ರಸನ್ನ, ಡಾ.ವಿಕ್ರಮ ಗೌಡರ, ಡಾ.ಪೀರ್ದೊಷ ಖಾನ ಹಾಗೂ ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು, ರೋಗಿಗಳ ಸಂಬಂಧಿಕರು, ತಾಯಂದಿರು, ಪಾಲಕರು, ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.  

ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಸುಜಾತಾ ಹಸವಿಮಠ ಸ್ವಾಗತಿಸಿದರು. ಜರೀನಾ ಮುಲ್ಲಾನವರ ಪ್ರಾರ್ಥಿಸಿದರು. ರೇಣುಕಾ ಮಲ್ಲನಗೌಡರ ಕಾರ್ಯಕ್ರಮ ನಿರೂಪಿಸಿದರು. ಅಶೋಕ ಬೆಟದೂರ ವಂದಿಸಿದರು.
*************
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891
ನವೀನ ಹಳೆಯದು

نموذج الاتصال