ವಿಮೆ ಹಣ ನಿರಾಕರಿಸಿದ ವಿಮಾ ಕಂಪನಿಗೆ ರೂ. 2 ಲಕ್ಷ 40 ಸಾವಿರದಂಡ ವಿಧಿಸಿ, ದೂರುದಾರರಿಗೆ ಪರಿಹಾರ ನೀಡಲು ಆದೇಶ*

ವಿಮೆ ಹಣ ನಿರಾಕರಿಸಿದ ವಿಮಾ ಕಂಪನಿಗೆ ರೂ. 2 ಲಕ್ಷ 40 ಸಾವಿರ
ದಂಡ ವಿಧಿಸಿ, ದೂರುದಾರರಿಗೆ ಪರಿಹಾರ ನೀಡಲು ಆದೇಶ*
ಧಾರವಾಡ (ಕರ್ನಾಟಕ ವಾರ್ತೆ) ನ. ಗದಗ ಜಿಲ್ಲೆಯ ನರಗುಂದದ ಸುನೀಲ ದೋಂಗಡಿ ಅನ್ನುವವರು ಬುಲೆರೋ ಪಿಕ್‍ಅಪ್ ವಾಹನ ನಂ.ಕೆಎ-26-ಎ-4181 ಗೆ ಮಾಲೀಕರಾಗಿದ್ದರು. ಅವರು ಸದರಿ ವಾಹನಕ್ಕೆ ಹುಬ್ಬಳ್ಳಿಯ ವಿದ್ಯಾನಗರದ ಎಚ್.ಡಿ.ಎಪ್.ಸಿ.ಇರಗೋ ಜನರಲ್ ಇನ್ಸುರೆನ್ಸ್ ಕಂಪನಿಯಿಂದ ವಿಮೆ ಮಾಡಿಸಿದ್ದರು. ಆ ವಿಮೆ ಚಾಲ್ತಿಯಿರುವಾಗ ದಿ:27/09/2019 ರಂದು ಆ ವಾಹನ ನರಗುಂದದ ಹಿರೇಹಳ್ಳ ಹತ್ತಿರ ಅಪಘಾತಕ್ಕೀಡಾಗಿ ಜಖಂಗೊಂಡಿತ್ತು. ಆ ವಾಹನದ ರಿಪೇರಿಗಾಗಿ ರೂ.2,04,967/- ಆಗುತ್ತದೆ ಅಂತಾ ಅಧಿಕೃತ ಸರ್ವಿಸ್ ಸೆಂಟರನಿಂದ ಎಸ್ಟಿಮೇಷನ್ ಪಡೆದು ಆ ಮೊತ್ತದ ಹಣ ಪರಿಹಾರವಾಗಿ ಕೊಡುವಂತೆ ಎದುರುದಾರ ವಿಮಾ ಕಂಪನಿಯವರಿಗೆ ಎಲ್ಲ ದಾಖಲೆಗಳ ಸಮೇತ ಕೋರಿಕೊಂಡಿದ್ದರು. 

ಅಪಘಾತ ಕಾಲಕ್ಕೆ ಆ ವಾಹನಕ್ಕೆ ಫಿಟನೆಸ್ ಸರ್ಟಿಪಿಕೇಟ್ ಇಲ್ಲ ಅನ್ನುವ ಕಾರಣ ನೀಡಿ ವಿಮಾ ಕಂಪನಿಯವರು ದೂರುದಾರರ ಕ್ಲೇಮನ್ನು ತಿರಸ್ಕರಿಸಿದ್ದರು. ಅಪಘಾತವಾದ ನಂತರ ಆ ವಾಹನದ ಫಿಟನೆಸ ಸರ್ಟಿಪಿಕೇಟನ್ನು ದೂರುದಾರ ನವೀಕರಿಸಿ ಕ್ಲೇಮ್ ಅರ್ಜಿ ಸಲ್ಲಿಸಿದ್ದರೂ ವಿಮಾ ಕಂಪನಿಯವರು ಅವರ ಕ್ಲೇಮನ್ನು ಒಪ್ಪಲಿಲ್ಲ. ಅಂತಹ ವಿಮಾ ಕಂಪನಿಯವರ ನಡವಳಿಕೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ವಿಮಾ ಕಂಪನಿಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ದಿ:07/03/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. 

ಅಪಘಾತ ಕಾಲಕ್ಕೆ ಆ ವಾಹನಕ್ಕೆ ಅರ್ಹತಾ ಪತ್ರ ಇರಲಿಲ್ಲವಾದ್ದರಿಂದ ದೂರುದಾರ ಕ್ಲೇಮ ಪಡೆಯಲು ಅರ್ಹರಲ್ಲ ಅಂತಾ ಹೇಳಿ ಅವರ ದೂರನ್ನು ವಜಾ ಮಾಡುವಂತೆ ವಿಮಾ ಕಂಪನಿಯವರು ಆಕ್ಷೇಪಣೆ ಎತ್ತಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ,  ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ. ಹಿರೇಮಠ ಅವರು ವಾಹನದ ಮೇಲೆ ವಿಮೆ ಚಾಲ್ತಿಯಿದೆ ಮತ್ತು ಆ ವಾಹನ ಅಪಘಾತದಲ್ಲಿ ಜಖಂಗೊಂಡು ಹುಬ್ಬಳ್ಳಿಯ ಸುತಾರಿಯಾ ಅಟೋ ಸೆಂಟರನಲ್ಲಿ ದುರಸ್ತಿಯಾಗಿದೆ. ರಿಪೇರಿ ಮಾಡಿಸಲು ರೂ.2,04,967/- ಖರ್ಚು ಮಾಡಿದ್ದಾರೆ. ಅಪಘಾತವಾದ ನಂತರ ದೂರುದಾರ ಗದಗ ಆರ್.ಟಿ.ಓ. ಕಛೇರಿಯಿಂದ ಅರ್ಹತಾ ಪತ್ರ ನವೀಕರಿಸಿರುವುದರಿಂದ ಕರ್ನಾಟಕ ಹೈ ಕೋರ್ಟ್ ತೀರ್ಪಿನನ್ವಯ ಅಪಘಾತ ಕಾಲಕ್ಕೆ ಆ ವಾಹನಕ್ಕೆ ಅರ್ಹತಾ ಪತ್ರ ಇತ್ತು ಅಂತಾ ಪರಿಗಣಿಸಬೇಕಾಗುತ್ತದೆ. ಕಾರಣ ವಿಮಾ ಷರತ್ತಿನ ನಿಯಮದಂತೆ ವಾಹನ ದುರಸ್ತಿಗೆ ತಗುಲಿದ ವೆಚ್ಚವನ್ನು ಕೊಡುವುದು ವಿಮಾ ಕಂಪನಿಯವರ ಕರ್ತವ್ಯವಾಗಿದೆ. ಆ ರೀತಿ ವಿಮೆ ಹಣ ನೀಡಲು ಎದುರುದಾರ ವಿಮಾಕಂಪನಿಯವರು ನಿರಾಕರಿಸಿರುವುದರಿಂದ ಅಂತಹ ಅವರ ನಡಾವಳಿಕೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ವಾಹನದ ದುರಸ್ತಿ ವೆಚ್ಚ ರೂ.2,05,000/- ಹಾಗೂ ಅದರ ಮೇಲೆ ಕ್ಲೇಮ ತಿರಸ್ಕರಿಸಿದ ದಿನಾಂಕದಿಂದ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರನಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಣ ಸಂದಾಯ ಮಾಡುವಂತೆ ವಿಮಾ ಕಂಪನಿಗೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ರೂ.25,000/- ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ ರೂ.10,000/- ನೀಡುವಂತೆ ವಿಮಾ ಕಂಪನಿಗೆ ಆಯೋಗ ನಿರ್ದೇಶಿಸಿದೆ.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891
ನವೀನ ಹಳೆಯದು

نموذج الاتصال