ಏಳನೇ ವೇತನ ಆಯೋಗದ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಿದ ಗ್ರಾಮೀಣ ಶಿಕ್ಷಕರ ಸಂಘ

ಏಳನೇ ವೇತನ ಆಯೋಗದ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಿದ ಗ್ರಾಮೀಣ ಶಿಕ್ಷಕರ ಸಂಘ

ಆಯೊಗವು ಶೀಘ್ರ ವರದಿ ಸಲ್ಲಿಸುವ ವಿಶ್ವಾಸವಿದೆ -ಅಶೋಕ ಸಜ್ಜನ
ಧಾರವಾಡ : 
 7ನೇ ವೇತನ ಆಯೋಗ ಬೆಂಗಳೂರು ಇವರ  ಅಧಿಕೃತ ಆಹ್ವಾನದ  ಮೇರೆಗೆ ವೇತನ ಸಮಿತಿಯ  ಅಧ್ಯಕ್ಷರು, ಕಾರ್ಯದರ್ಶಿಗಳನ್ನೊಳಗೊಂಡ ಹಲವು ಅಧಿಕಾರಿಗಳ ಅಯೋಗದ  ಸಮ್ಮುಖದಲ್ಲಿ ರಾಜ್ಯದ ಸುಮಾರು ಒಂದು ಲಕ್ಷ ನಲ್ವತ್ತೈದು ಸಾವಿರ ಶಿಕ್ಷಕರನ್ನು ಪ್ರತಿನಿಧಿಸುವ  ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ), ರಾಜ್ಯ ಘಟಕ ಹುಬ್ಬಳ್ಳಿ, ಈ ಸಂಘದ ವತಿಯಿಂದ ಗ್ರಾಮೀಣ ಭತ್ಯೆ ಸೇರಿದಂತೆ ಹಲವು ಪ್ರಮುಖ ಬೇಡಿಕೆ, ಅಭಿಪ್ರಾಯಗಳನ್ನು ಮಂಡಿಸುವ ಮೂಲಕ ಹಲವು ಪ್ರಸ್ತಾವನೆಗಳನ್ನು ಸಲ್ಲಿಸಿ 7ನೇ ವೇತನ ಆಯೋಗ ತನ್ನ ವರದಿಯಲ್ಲಿ ಪರಿಗಣಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಶೋಕ ಎಂ ಸಜ್ಜನ ಮನವಿ ಮಾಡಿದರು.
    *ಗ್ರಾಮೀಣ ಪರಿಹಾರ ಭತ್ಯೆ*:
ಗ್ರಾಮೀಣ ಪ್ರದೇಶದಲ್ಲಿ, ವಾಹನ ಸೌಕರ್ಯವೇ ಇಲ್ಲದ ದುರ್ಗಮ ಪ್ರದೇಶ, ನಿರ್ಜನ ಪ್ರದೇಶ, ಅರಣ್ಯ ಪ್ರದೇಶ ಸೇರಿದಂತೆ ಸಾರಿಗೆ ವ್ಯವಸ್ಥೆಯೇ ಇಲ್ಲದ ರಸ್ತೆಗಳಲ್ಲಿ, ಹಳ್ಳಕೊಳ್ಳ, ನದಿ, ಬೆಟ್ಟಗುಡ್ಡ, ದಟ್ಟ ಅರಣ್ಯ ಪ್ರದೇಶ ದಾಟಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಕನಿಷ್ಠ ಐದು ಸಾವಿರ ರೂ. ಅಥವಾ ಮೂಲ ವೇತನನದ ಶೇಕಡ 10% ವಿಶೇಷ ಭತ್ಯೆ ಮಂಜೂರು ಮಾಡಲು ಸರ್ಕಾರಕ್ಕೆ ಶಿಫಾರಸ್ಸು  ಮಾಡಬೇಕೆಂದು ವಿನಂತಿಸಿದ ಅವರು,  ನಗರ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ನಗರ ಪರಿಹಾರ ಭತ್ಯೆ ನೀಡುವಂತೆ ಹಲವು ವೃತ್ತಿಪರ ತೊಂದರೆಗಳೊಂದಿಗೆ ನಾನಾ ಕಷ್ಟ ಕಾರ್ಪಣ್ಯ, ಎಡರು ತೊಡರುಗಳನ್ನು ಎದುರಿಸಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಮೂಲ ವೇತನನದ ಶೇಕಡ 10%ರಷ್ಟು ಅಥವಾ ಕನಿಷ್ಠ 5000/ರೂ.ಗ್ರಾಮೀಣ ಪರಿಹಾರ ಭತ್ಯೆ ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡುವಂತೆ ನಮ್ಮ ಮಾತೃ ಸಂಘ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಶಿಫಾರಸ್ಸು ಪತ್ರ ನೀಡಿದ್ದು ವೇತನ ಆಯೋಗ ಸಮಿತಿಯ ಮುಖ್ಯಸ್ಥರು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿದರು.

     *ಗಿರಿ ಭತ್ಯೆ*: 
 ಚಿಕ್ಕಮಗಳೂರು ಜಿಲ್ಲೆ, ಶಿವಮೊಗ್ಗ ಜಿಲ್ಲೆ, ಕೊಡಗು ಜಿಲ್ಲೆ, ಬೆಳಗಾವಿ ಜಿಲ್ಲೆ, ಮೈಸೂರು ಜಿಲ್ಲೆ ಹಾಗೂ ಜಿಲ್ಲೆಯ ಭಾಗಶಃ ಭಾಗಗಳಲ್ಲಿ ಬೆಟ್ಟ ಗುಡ್ಡ ಪರ್ವತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ 2000/ರೂ. ಗಿರಿ ಭತ್ಯೆ ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿದರು.

    *ಮನೆ ಬಾಡಿಗೆ ಭತ್ಯೆ ಪರಿಷ್ಕರಣೆಗೆ ಮನವಿ*:
ಕರ್ನಾಟಕ ರಾಜ್ಯ ಹಳ್ಳಿಗಳ ರಾಜ್ಯ. ಅತಿ ಹೆಚ್ಚು ಜನ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಾರೆ. ಮಹಾತ್ಮ ಗಾಂಧೀಜಿಯವರು ಹೇಳಿದಂತೆ "ಗ್ರಾಮಗಳ ಉದ್ಧಾರ ದೇಶದ ಆರ್ಥಿಕತೆಯ ಸಾಕಾರ" ಎಂಬ ನುಡಿಯಂತೆ ಹೀಗಿರುವ ಮನೆ ಬಾಡಿಗೆ ಭತ್ಯೆಯಿಂದ ಗ್ರಾಮೀಣ ಭಾಗದಲ್ಲಿ ಶಿಕ್ಷಕರು ಮತ್ತು ನೌಕರರು ಕಾರ್ಯನಿರ್ವಹಿಸಲು ನಿರಾಸಕ್ತಿ ಹೊಂದಿ ನಗರ ಪ್ರದೇಶಗಳಿಗೆ ಹೋಗಲು ಲಾಭಿ ನಡೆಸುವ ಸಂದರ್ಭ ಎದುರಾಗಿದ್ದು ಗ್ರಾಮೀಣ ಭಾಗದಲ್ಲಿ ಹೆಚ್ಚು ಖಾಲಿ ಹುದ್ದೆಗಳು ಉಳಿಯಲು ಕಾರಣವಾಗಿದೆ. ಆದ್ದರಿಂದ ಜನಸಂಖ್ಯೆ ಆಧಾರದ ಮೇಲೆ ಪರಿಷ್ಕರಿಸಬೇಕಿದೆ.
     ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೇಕಡ 35%; ಜಿಲ್ಲಾ ಕೇಂದ್ರ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಶೇಕಡ 30% ಹಾಗೂ ತಾಲ್ಲೂಕು ಕೇಂದ್ರ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇಕಡ 25%  ಮನೆ ಬಾಡಿಗೆ ಭತ್ಯೆ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ವಿನಂತಿಸಿದರು. 

    *ವೈದ್ಯಕೀಯ ಭತ್ಯೆ*: 
ಈಗಿರುವ ವೈದ್ಯಕೀಯ ಭತ್ಯೆಯನ್ನು 200/ರೂ.ಗಳಿಂದ 1000/ರೂ.ಗಳಿಗೆ ಹೆಚ್ಚಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಮನವಿ ಮಾಡಿದರು.

     ಬೈಸಿಕಲ್, ಮೋಟಾರು ವಾಹನ, ಗೃಹ ನಿರ್ಮಾಣ, ಗೃಹ ರಿಪೇರಿಗೆ ನೀಡುತ್ತಿರುವ ಮುಂಗಡ ಹಣವನ್ನು 3 ರಿಂದ 4 ಪಟ್ಟು ಹೆಚ್ಚಿಸಬೇಕು, ಹಾಗೂ ವಾಹನ ಖರೀದಿಸಲು 5 ರಿಂದ 10%ರಿಯಾಯಿತಿ ನೀಡುವಂತೆ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವಂತೆ ವಿನಂತಿಸಿದ ಅವರು ಆಗಾಗ ಇಲಾಖೆ ಆಯೋಜಿಸುವ ಸಭೆಗಳಿಗೆ ಭಾಗವಿಸಲಿರುವ ಶಿಕ್ಷಕರಿಗೆ ಸಭಾ ಭತ್ಯೆ, ಪ್ರವಾಸ ಭತ್ಯೆ ನೀಡಲು ಶಿಫಾರಸ್ಸು ಮಾಡುವಂತೆ ಮನವಿ ಮಾಡಿದರು. 

ಬೋಧಕೇತರ ಸಿಬ್ಬಂಧಿಯ ಮಾದರಿಯಲ್ಲಿ ಈಗಿರುವ ಗಳಿಕೆ ರಜೆಯ ಪ್ರಮಾಣವನ್ನು 10 ರಿಂದ 30ಕ್ಕೆ ಹೆಚ್ಚಿಸಬೇಕು ಎಂದು ಮನವಿ ಮಾಡಿದ ಅವರು, ನೌಕರರಿಗೆ ಮರಣ ಶಾಸನವಾಗಿರುವ ಎನ್.ಪಿ.ಎಸ್ ರದ್ದುಗೊಳಿಸಿ ಓ.ಪಿ.ಎಸ್ ಜಾರಿಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ವಿನಂತಿಸಿದರು.

ಕೆ. ಜಿ. ಐ. ಡಿ. ಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಜಿ. ಪಿ. ಎಫ್. ಮಾದರಿಯಲ್ಲಿ ಬಡ್ಡಿ ದರ ಹೆಚ್ಚಿಸಿ ಪ್ರತಿ ತಿಂಗಳು ಸ್ಟೇಟ್ ಮೆಂಟ್ ನೀಡುವಂತೆ ಹಾಗೂ ಭಾಗಶಃ ಮುಂಗಡ ಹಣ ಪಡೆಯುವ ಅವಕಾಶ ಕಲ್ಪಿಸಿ ಬೋನಸ್ ದರ ಹೆಚ್ಚಿಸಬೇಕೆಂದು ಮನವಿ ಮಾಡಿದರು.

ಶಿಕ್ಷಕರಿಗೆ ಅಂತರ ರಾಜ್ಯ ಶೈಕ್ಷಣಿಕ ಪ್ರವಾಸಕ್ಕೆ ಅನುವು ಮಾಡಿಕೊಡುವ ಜೊತೆಗೆ, ಶಿಕ್ಷಕರ ಮಕ್ಕಳಿಗೆ ಬಡ್ಡಿರಹಿತ ಶೈಕ್ಷಣಿಕ ಸಾಲ ಒದಗಿಸಿಕೊಡುವ ಜೊತೆಗೆ ಶೈಕ್ಷಣಿಕ ಪ್ರೋತ್ಸಾಹಧನ ಹೆಚ್ಚಿಸುವಂತೆ ವಿನಂತಿಸಿದರು.

*ಮುಂಬಡ್ತಿಗೆ ಮನವಿ*:
ಶಿಕ್ಷಣ ಇಲಾಖೆಯು ಅತಿ ಹೆಚ್ಚು ನೌಕರರನ್ನು ಹೊಂದಿರುವ ಇಲಾಖೆಯಾಗಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆ ಸರಿಸುಮಾರು 1ಲಕ್ಷದ 80ಸಾವಿರಕ್ಕೂ ಹೆಚ್ಚಿದ್ದು ಮುಂಬಡ್ತಿ ಅವಕಾಶಗಳು ತುಂಬಾ ಕಡಿಮೆ ಇರುವುದರಿಂದ ಅನೇಕ ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಒಂದೂ ಬಡ್ತಿ ಇಲ್ಲದೇ ನಿವೃತ್ತಿ ಹೊಂದುತ್ತಿರುವ ಸಂದರ್ಭ ನಿರ್ಮಾಣವಾಗಿದೆ. 
ಆದ್ದರಿಂದ ಶಿಕ್ಷಣ ಇಲಾಖೆಯಲ್ಲಿ 4ರಿಂದ 5ಬಡ್ತಿ ಕಲ್ಪಿಸಬೇಕು ಎಂದು ವಿವರಿಸಿದ ಅವರು ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹುದ್ದೆ (ಗ್ರೇಡ್- 3) ಹೊಸದಾಗಿ ಸೃಜಿಸಬೇಕು. ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು (ಗ್ರೇಡ್ -2), ಪದವೀಧರೇತರ ಮುಖ್ಯ ಶಿಕ್ಷಕರು (ಗ್ರೇಡ್ -1) ನಂತರ ಶಿಕ್ಷಣ ಸಂಯೋಜಕರು, ವಿಷಯ ಪರಿವೀಕ್ಷಕರು, ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರು, ನಿರ್ದೇಶಕರು ಈ ಮಾದರಿಯಲ್ಲಿ 10 ವರ್ಷ ಪೂರೈಸಿದ ಶಿಕ್ಷಕರಿಗೆ ಸೇವಾ ಜೇಷ್ಠತೆಯ ಅನುಸಾರ ಮುಂಬಡ್ತಿ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಗೌರವಾಧ್ಯಕ್ಷ ಎಲ್. ಐ. ಲಕ್ಕಮ್ಮನವರ, ಕಾರ್ಯಾಧ್ಯಕ್ಷ ಶರಣಪ್ಪಗೌಡ. ಆರ್. ಕೆ, ಶಿಸ್ತುಸಮಿತಿ ಅಧ್ಯಕ್ಷ ಹನುಮಂತಪ್ಪ ಮೇಟಿ, ಸಲಹಾಸಮಿತಿ ಅಧ್ಯಕ್ಷ ಗೋವಿಂದ ಜೂಜಾರೆ, ಪ್ರಚಾರಸಮಿತಿ ಅಧ್ಯಕ್ಷ ಡಾ. ನಾರಾಯಣಸ್ವಾಮಿ ಆರ್.ಚಿಂತಾಮಣಿ, ರಾಜ್ಯ ಮಹಾ ಪ್ರಧಾನಕಾರ್ಯದರ್ಶಿ ಮಲ್ಲಿಕಾರ್ಜುನ ಸಿ ಉಪ್ಪಿನ, ರಾಜ್ಯ ಉಪಾಧ್ಯಕ್ಷರಾದ ಶ್ರೀಧರ ಗಣಾಚಾರಿ, ಕೆ.ನಾಗರಾಜು, ಧರ್ಮಣ್ಣ ಎಸ್. ಭಜಂತ್ರಿ, ಆರ್. ಎಂ. ಕಮ್ಮಾರ,   ಎಂ. ಆರ್. ಮಲ್ಲಿಕಾರ್ಜುನ್ ನೆಲಮಂಗಲ, ಧಾರವಾಡ ಜಿಲ್ಲಾಧ್ಯಕ್ಷ ಅಕ್ಬರಲಿ ಸೊಲ್ಲಾಪುರ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ. ಎನ್. ಸೋಮಶೇಖರ್, ಮಹದೇಶ್.ಆರ್. ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರ. ಕಾರ್ಯದರ್ಶಿ ರವಿ. ಜಿ, ಸೇರಿದಂತೆ ಹಲವು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂರ್ಪಕಿಸಿರಿ: 9945564891
ನವೀನ ಹಳೆಯದು

نموذج الاتصال