ಅಂತರ್ಗತ ಗುಣಗಳ ಬಗ್ಗೆ ಅರಿವು ಹೊಂದಿರಲು ಯೋಗಾಭ್ಯಾಸ ಸಹಾಯ - ಸಮಾಜಿಕ ಕಾರ್ಯಕರ್ತ ಶಿವಾನಂದ ಕವಳಿ
ಅಂತರ್ಗತ ಗುಣಗಳ ಬಗ್ಗೆ ಅರಿವು ಹೊಂದಿರಲು ಯೋಗಾಭ್ಯಾಸ ಸಹಾಯ ಮಾಡುತ್ತದೆ: ಈ ಜಗತ್ತಿನಲ್ಲಿ ಪ್ರತೀ ವ್ಯಕ್ತಿಯೂ ಕೆಲವು ಅನನ್ಯ ಗುಣಗಳನ್ನು ಹೊಂದಿ ಜನಿಸಿರುತ್ತಾನೆ. ಕೆಲವೊಮ್ಮೆ ಅಂತಹ ಗುಣಗಳು, ಪ್ರತಿಭೆ ಬಹಿರಂಗವಾಗುವುದೇ ಇಲ್ಲ ಮತ್ತು ವ್ಯಕ್ತಿಗೂ ಅವು ತನ್ನಲ್ಲಿವೆ ಎಂಬ ಅರಿವು ಇರುವುದಿಲ್ಲ. ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ವ್ಯಕ್ತಿಯ ಸ್ವ-ಅರಿವು ವೃದ್ಧಿಸುತ್ತದೆ ಹಾಗೂ ಆತ ತನ್ನಲ್ಲಿರುವ ಪ್ರತಿಭೆ, ಗುಣಗಳ ಬಗ್ಗೆ ಅರಿವು ಬೆಳೆಸಿಕೊಳ್ಳುವುದರ ಮೂಲಕ ಇತರರಿಂದ ಭಿನ್ನವಾದ ಅನನ್ಯ ವ್ಯಕ್ತಿಯಾಗಿ ಮೂಡಿಬರುತ್ತಾನೆ ಎಂದು ಸಮಾಜಿಕ ಕಾರ್ಯಕರ್ತರಾದ ಶಿವಾನಂದ ಕವಳಿ ಹೇಳಿದರು.
ಅವರು ಸಾಂಸ್ಕೃತಿಕ ಲೋಕ ಆರ್ಟ್ ಆ್ಯಂಡ್ ಕಲ್ಚರಲ್ ಅಕಡೆಮಿ,ಧಾರವಾಡ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಯೋಗ ಅಧ್ಯಯನ ವಿಭಾಗದ ವತಿಯಿಂದ ಡ್ಯಾನ್ಸ್ ಕ್ಲಾಸನಲ್ಲಿ ಉಚಿತ ಯೋಗ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಅಂತರ್ಗತ ಗುಣ, ಪ್ರತಿಭೆಗಳ ಪರಿಚಯವಾದೊಡನೆ ಅವುಗಳನ್ನು ಪೋಷಿಸಿ ನಿರಂತರವಾಗಿ ಮುಂದುವರೆಸಲು ಯೋಗ ಸಹಾಯ ಮಾಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಾರ್ತಾಂಡಪ್ಪ ಕತ್ತಿ ಮಾತನಾಡಿ ಒತ್ತಡವನ್ನು ಕಳೆಯಲು ಯೋಗಾಭ್ಯಾಸ ಸಹಾಯ ಮಾಡುತ್ತದೆ: ಇವತ್ತಿನ ಬದುಕು ತಡೆದುಕೊಳ್ಳಲಾರದಂತಹ ಒತ್ತಡದಿಂದ ಕೂಡಿದೆ. ಕ್ಷಣಕಾಲ ನಿಂತು ಆಲೋಚಿಸಿ ಮುನ್ನಡೆಯುವಷ್ಟು ಸಮಯವು ಯಾರಿಗೂ ಇಲ್ಲ. ಎಲ್ಲರೂ ಯಂತ್ರಗಳಂತೆ ಆಗಿಬಿಟ್ಟಿದ್ದಾರೆ. ತಮ್ಮ ತಮ್ಮ ಕುಟುಂಬ, ಮಕ್ಕಳು ಬಿಡಿ, ಸ್ವಂತಕ್ಕೂ ವ್ಯಯಿಸಲು ಯಾರ ಬಳಿಯೂ ಸಮಯವಿಲ್ಲ ಎಂಬಂತಾಗಿದೆ. ಇಂತಹ ಜೀವನ ಶೈಲಿಯು ನಿಧಾನವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಿ ನಾನಾ ರೀತಿಯ ಅನಾರೋಗ್ಯಗಳನ್ನು ಉಂಟು ಮಾಡುತ್ತಿದೆ. ಯೋಗಾಭ್ಯಾಸವು ಮನಸ್ಸಿನ ಮೇಲೂ ಪರಿಣಾಮ ಬೀರಿ ಒತ್ತಡ ಮಟ್ಟವನ್ನು ಇಳಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ವೇದಿಕೆಯಲ್ಲಿ ಎಸ್.ಡಿ.ಎಮ್ ವೈದ್ಯಕೀಯ ಮಹಾವಿದ್ಯಾಲಯದ ಡಾ.ಅನುಸೂಯಾ ಭಂಡಾರಕರ, ಸಂಪನ್ಮೂಲ ವ್ಯಕ್ತಿ ಗೋರೆಸಾಬ ನದಾಫ, ಸುದರ್ಶನ ಮುಗದುಮ್ ಮಾತನಾಡಿದರು.
ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ, ಕಿರಣ ರಾಯಬಾಗಿ, ಸಂದೀಪ ಸಾದುರೆ, ನಿಂಗಪ್ಪ ಇಮ್ಮನ್ನವರ, ನಾಗೇಶ ಪಾಟೀಲ,ಪವಿತ್ರಾ ದಳವಾಯಿ ಯೋಗದ ಬಗ್ಗೆ ಕಲಿಸಿದ್ದಾರೆ.
ಸಾಂಸ್ಕೃತಿಕ ಲೋಕದ ವಿದ್ಯಾರ್ಥಿಗಳಾದ ಖುಷಿ ಮತ್ತು ಸಾನ್ವಿ ತಂಡದವರು ಪ್ರಾರ್ಥನೆ ಮಾಡಿದರು. ಸಾಂಸ್ಕೃತಿಕ ಲೋಕದ ಸಂಸ್ಥಾಪಕರಾದ ಸೈಯದ ಎ.ಎಮ್ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ಸ್ವಾಗತಿಸಿದರು. ಪ್ರಕಾಶ ಕಾಮಕರ ವಂದಿಸಿದರು.
ನಂತರ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿರಿ:9945564891