ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕವಿವಿ ಬಂದ್
ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯದಲ್ಲಿನ ಶಿಕ್ಷಕ ಶಿಕ್ಷಕೇತರ, ಗುತ್ತಿಗೆ ಆಧಾರಿತ ನೌಕರರು ಹಾಗೂ ಪದವಿ, ಸ್ನಾತಕೋತ್ತರ ಮತ್ತು ಸಂಶೋಧನ ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ವಿಶ್ವವಿದ್ಯಾಲಯ ಹೋರಾಟ ಸಮಿತಿಯಿಂದ ಉಗ್ರ ಹೋರಾಟ ಮಾಡುವ ಮೂಲಕ ಸಂಪೂರ್ಣ ಕವಿವಿ ಬಂದ್ ಮಾಡಲಾಗಿತ್ತು.
ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ನೌಕರರ ಪಿಂಚಣಿಯನ್ನು ಎಚ್.ಆರ್.ಎಂ.ಎಸ್ ದಲ್ಲಿ ಸೇರಿಸಬೇಕು ಹಾಗೂ 150 ಕೋಟಿ ಬಾಕಿ ಪಿಂಚಣಿ ಹಣವನ್ನು ಬಿಡುಗಡೆ ಮಾಡಬೇಕು. ದಿನಾಂಕ 01 ಎಪ್ರಿಲ್ 2006ಕ್ಕಿಂತ ಮುಂಚೆ ಹಳೆ ಪಿಂಚಣಿಯಲ್ಲಿ ನೇಮಕಗೊಂಡು ಸಮುಚ್ಚಿತ ಮಾರ್ಗದಲ್ಲಿ ಅರ್ಜಿ ಸಲ್ಲಿಸಿ ಹೊಸ ಹುದ್ದೆಗೆ ನೇಮಕಗೊಂಡ ವಿಶ್ವವಿದ್ಯಾಲಯದ ನೌಕರರಿಗೆ ರಾಜ್ಯ ಸರ್ಕಾರದ ನೌಕರರಂತೆ ಹಳೆ ಪಿಂಚಣಿಯನ್ನು ಮುಂದುವರೆಸುವುದಕ್ಕೆ ಅನುಮೋದನೆ ನೀಡಬೇಕು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ 650 ಶಿಕ್ಷಕರ ಹುದ್ದೆ ಹಾಗೂ 950 ಶಿಕ್ಷಕೇತರ ನೌಕರರ ಹುದ್ದೆಗಳಿಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ/ಸಹಾಯಕ ಉಪನ್ಯಾಸಕರನ್ನು ಹಾಗೂ ಹೊರಗುತ್ತಿಗೆ ನೌಕರರನ್ನು ಭರ್ತಿ ಮಾಡಬೇಕು. ಕವಿವಿ ಯ ಶಿಕ್ಷಕರ ಪದೋನ್ನತಿ ವೇತನ ಹಿಂಬಾಕಿ ಹಾಗೂ ಶಿಕ್ಷಕೇತರ ನೌಕರರಿಗೆ ಪ್ರತೀಶತ 17 ರಷ್ಟು ಮಧ್ಯ0ತರ ಪರಿಹಾರವನ್ನು ಸರ್ಕಾರವೇ ಭರಿಸಬೇಕು. ಎನ್.ಪಿ.ಎಸ್ ನೌಕರರ ಮೂಲವೇತನದ ಪ್ರತೀಶತ 14ರಷ್ಟು ಹಣವನ್ನು ಸರಕಾರವೇ ಭರಿಸಬೇಕು ಹಾಗೂ ಎನ್.ಪಿ.ಎಸ್ ರದ್ದುಗೊಳಿಸಿ ಓ.ಪಿ.ಎಸ್ ಜಾರಿಗೆ ತರಬೇಕು. ರಾಜ್ಯ ಸರ್ಕಾರವು ಕವಿವಿಯ ಎಲ್ಲಾ ಖಾಯಂ ನೌಕರರನ್ನು ಸರ್ಕಾರಿ ನೌಕರರಂತೆ ಪರಿಗಣಿಸಿ ಸರ್ಕಾರಿ ನೌಕರರಿಗೆ ಇರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು. ಕವಿವಿಯ ಎಲ್ಲಾ ಸ್ನಾತಕೋತ್ತರ ಪದವಿ ಮತ್ತು ಪಿ.ಎಚ್.ಡಿ., ಎಸ್.ಎಸ್.ಟಿ, ಪ್ರವರ್ಗ 1, ಒಬಿಸಿ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೂ ಲ್ಯಾಪ್ ಟಾಪ್ ನೀಡಬೇಕು. ಯು.ಆರ್.ಎಸ್ ಮಾಸಿಕ ಶಿಷ್ಯವೇತನವನ್ನು 10 ಸಾವಿರ ರೂ. ಗಳಿಂದ 25 ಸಾವಿರಕ್ಕೆ ಹೆಚ್ಚಿಸಬೇಕು. ಸ್ನಾತಕೋತ್ತರ ಮತ್ತು ಪಿ.ಎಚ್.ಡಿ ಪ್ರವೇಶ ಶುಲ್ಕವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಕಡಿಮೆಗೊಳಿಸಬೇಕು ಹಾಗೂ ಹಳೆಯ ಶುಲ್ಕ ಪದ್ದತಿಯನ್ನು ಜಾರಿಗೆ ತರಬೇಕು. ಕವಿವಿ ಮತ್ತು ಘಟಕ ಮಹಾವಿದ್ಯಾಲಯಗಳ ಸ್ನಾತಕ /ಸ್ನಾತಕೋತ್ತರ ಎಸ್.ಸಿ.ಎಸ್.ಟಿ/ಪ್ರವರ್ಗ 1 ವಿದ್ಯಾರ್ಥಿಗಳ ಮಾಸಿಕ ವೇತನವನ್ನು 2000 ರೂ. ಗಳಿಂದ 5000 ರೂ. ಗಳಿಗೆ ಹೆಚ್ಚಿಸಬೇಕು ಹಾಗೂ ಎಲ್ಲಾ ವರ್ಗದ ವಿದ್ಯಾರ್ಥಿಗಳ ಪ್ರವೇಶ/ಪರೀಕ್ಷಾ ಶುಲ್ಕಗಳನ್ನು ಕಡಿಮೆಗೊಳಿಸಬೇಕು. ಕವಿವಿ ಆವರಣದಲ್ಲಿ ತ್ವರಿತವಾಗಿ ಇಂದಿರಾ ಕ್ಯಾಂಟಿನ್ ಆರಂಭಿಸಬೇಕು. ಅತಿಥಿ /ಸಹಾಯಕ ಉಪನ್ಯಾಸಕರಿಗೆ ಹಾಗೂ ಹೊರಗುತ್ತಿಗೆ ಮಹಿಳಾ ನೌಕರರಿಗೆ ಹೆರಿಗೆ ರಜೆ ಮತ್ತು ಭತ್ತೆಯನ್ನು ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ. ಬಿ. ಗುಡಸಿ ಅವರಿಗೆ ಮನವಿ ನೀಡಲಾಯಿತು.
ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀ ಯಶಪಾಲ್ ಕ್ಷೀರಸಾಗರ ಅವರು ಮಾತನಾಡಿ ನಿಮ್ಮ ಬೇಡಿಕೆಗಳನ್ನು ಆದಷ್ಟು ಬೇಗನೇ ಈಡೇರಿಸುವಂತೆ ನಾವು ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ಕರ್ನಾಟಕ ವಿಶ್ವವಿದ್ಯಾಲಯದ ಎಸ್. ಸಿ/ಎಸ್. ಟಿ. ನೌಕರರ ಸಂಘ, ಸಂಶೋಧನಾ ವಿದ್ಯಾರ್ಥಿಗಳ ಸಂಘ, ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿದ್ಯಾರ್ಥಿಗಳ ಸಂಘ ಹೀಗೆ ಹಲವಾರು ಸಂಘಟನೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ವಿಶ್ವವಿದ್ಯಾಲಯದ ಎಲ್ಲಾ ಶಿಕ್ಷಕ ಶಿಕ್ಷಕೇತರರು,ಸಿಬ್ಬಂದಿ ವರ್ಗದವರು, ಕಾನೂನು ಪದವಿ ಮತ್ತು ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ: 9945564891