*ಸಾಮಾಜಿಕ ಸಮಸ್ಯೆಗಳ ವಿರುದ್ಧದ ಹೋರಾಟ ಬಲಪಡಿಸಲು ಎಸ್.ಯು.ಸಿ.ಐ (ಸಿ) ಬೆಂಬಲಿಸಿ: ರಾಮಾಂಜನಪ್ಪ*
ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಆಸ್ತಿ ಕಳೆದ ಐದು ವರ್ಷಗಳಲ್ಲಿ ಕೋಟ್ಯಾಂತರ ರೂಪಾಯಿ ಏರಿಕೆಯಾಗಿದೆ. ಇದೇನು ಬೆವರು ಸುರಿಸಿ ಗಳಿಸಿದ್ದಲ್ಲ. ಬದಲಿಗೆ ಜನರಿಂದ ಲೂಟಿ ಹೊಡೆದ ಹಣವಾಗಿದೆ ಎಂದು ಎಸ್‌ಯುಸಿಐ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ಕಾಮ್ರೇಡ್ ರಾಮಾಂಜನಪ್ಪ ಆಲ್ದಳ್ಳಿ ಹೇಳಿದರು.
ಅವರು ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್‌ಯುಸಿಐ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿ ಮಧುಲತಾ ಗೌಡರ ಅವರ ಪರವಾಗಿ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಏರ್ಪಡಿಸಿದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಈ ದೇಶದ ದೊಡ್ಡ ದೊಡ್ಡ ಬಂಡವಾಳಗಾರರು ಈ ಮೂರೂ ಪಕ್ಷಗಳನ್ನು ಸಾಕಿ ಸಲಹುತ್ತಿದ್ದಾರೆ. ಇ ಪಕ್ಷಗಳ ಅಭ್ಯರ್ಥಿಗಳು ಕೋಟ್ಯಾಂತರ ರೂಪಾಯಿಗಳನ್ನು ಚುನಾವಣೆಯಲ್ಲಿ ನೀರಿನಂತೆ ಖರ್ಚು ಮಾಡುತ್ತಾರೆ. ಇದಕ್ಕೆ ಪರ್ಯಾಯವಾಗಿ ಇನ್ನೊಂದು ರಾಜಕೀಯವಿದೆ. ಕಾರ್ಮಿಕರು, ರೈತರು, ಬಡವರ ಜೀವನದಲ್ಲಿ ಚುನಾವಣೆಯಿಂದ ಯಾವುದೇ ಬದಲಾವಣೆ ಬರುವುದಿಲ್ಲ. ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಎಲ್ಲಾ ಅಗತ್ಯ ವಸ್ತುಗಳ ಬೆಲೆಯೇರಿಕೆ ಆಗಿದೆ. ಅಡುಗೆ ಅನಿಲ ೮ ವರ್ಷಗಳ ಹಿಂದೆ ೪೨೦ರೂ ಇದ್ದದ್ದು ಇವತ್ತು ೧೨೦೦ರೂ ಆಗಿದೆ. ಆದರೂ ಈ ಪಕ್ಷಗಳಿಗೆ ಇವ್ಯಾವೂ ಚರ್ಚೆಯ ವಿಷಯವೇ ಅಲ್ಲ.
ಆದರೆ ನಮ್ಮ ಪಕ್ಷ ಎಸ್‌ಯುಸಿಐ ಕಮ್ಯೂನಿಸ್ಟ್ ಜನರ ನಡುವೆಯೇ ಇದ್ದು ಈ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಟಗಳನ್ನು ಬೆಳೆಸುತ್ತಿದೆ. ದುಡಿಯುವ ಕೈಗಳಿಗೆ ಕೆಲಸ ಸಿಗಬೇಕು. ಸಾರ್ವತ್ರಿಕ ಶಿಕ್ಷಣವನ್ನು ಬಲಪಡಿಸಬೇಕು. ಅಗತ್ಯವಸ್ತುಗಳ ಬೆಲೆಯನ್ನು ಇಳಿಸಬೇಕು. ಖಾಲಿಯಿರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು ಜನಚಳುವಳಿಗಳನ್ನು ಕಟ್ಟುತ್ತಿದೆ.
ಆದ್ದರಿಂದ ಸದನದಲ್ಲಿ ಹೋರಾಟದ ದನಿಯನ್ನು ಗಟ್ಟಿಯಾಗಿ ಮೊಳಗಿಸಲು ಹಾಗೂ ಸಮಾಜದಲ್ಲಿ ಮೂಲಭೂತ ಬದಲಾವಣೆಯ ಪ್ರಯತ್ನಕ್ಕೆ ಪಕ್ಷಕ್ಕೆ ಮತದಾರರು ಬೆಂಬಲಿಸಿ ಪ್ರಾಮಾಣಿಕ ಅಭ್ಯರ್ಥಿ ಮಧುಲತಾ ಗೌಡರ ಅವರನ್ನು ಗೆಲ್ಲಿಸಬೇಕೆಂದು ಅವರು ಮನವಿ ಮಾಡಿದರು.
ಪಕ್ಷದ ಅಭ್ಯರ್ಥಿ ಮಧುಲತಾ ಗೌಡರ್ ಮಾತನಾಡಿದರು, ನಂತರ ಬಸ್ ನಿಲ್ದಾಣದ ಸುತ್ತಮುತ್ತ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ನಾಯಕರಾದ ಭುವನಾ, ಶರಣು ಗೋನವಾರ, ಸಿಂಧೂ, ಮತ್ತು ಇತರ ಕಾರ್ಯಕರ್ತರು ಇದ್ದರು.