ಧಾರವಾಡ: ದಿವ್ಯಾಂಗರು ಕೀಳರಿಮೆ ತೊಡೆದು ಹಾಕಿ, ಸಾಧನೆ ಮಾಡುವ ಕನಸು ಕಾಣಬೇಕು.
ಕಂಡ ಕನಸು ನನಸಾಗಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡಲು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಕೆಂಪಲಿಂಗಣ್ಣವರ ಕವಿಮಾತು ಹೇಳಿದರು.
ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟ ಧಾರವಾಡ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಧನಾತ್ಮಕ ಚಿಂತನೆಗಳು ಬದುಕಿಗೆ ಸ್ಫೂರ್ತಿ ತುಂಬಲಿವೆ. ಹೀಗಾಗಿ ವಿಶಿಷ್ಟಚೇತನರು ಜೀವನದ ಬದಲಾವಣೆಗೆ ಧನಾತ್ಮಕ ಚಿಂತನೆ ಮಾಡಬೇಕು. ಸರ್ಕಾರ ಸಾಕಷ್ಟು ಯೋಜನೆ ಅನುಷ್ಠಾನಿಸಿದೆ. ಅವುಗಳ ಸದ್ಬಳಕೆಯಿಂದ ಮುಖ್ಯವಾಹಿನಿಗೆ ಬರಲು ಕರೆ ನೀಡಿದರು.
ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟ ಉತ್ತಮ ಧ್ಯೇಯೋದ್ದೇಶಗಳೊಂದಿಗೆ ಕಾರ್ಯ ಮಾಡುತ್ತಿದೆ. ಹೀಗಾಗಿ ಅಸಂಘಟಿತ ದಿವ್ಯಾಂಗರು ಒಕ್ಕೂಟದ ಮೂಲಕ ಸಂಘಟಿತರಾದಾಗ ಮಾತ್ರ ಸೌಲಭ್ಯಗಳನ್ನು ಪಡೆಯಲು ಸಹಾಯವಾಗಲಿದೆ ಎಂದು ತಿಳಿಸಿದರು.
ದಿವ್ಯಾಂಗರಿಗೆ 2016 ರಲ್ಲಿ ಕಾಯ್ದೆ ಜಾರಿಗೆ ಬಂದಿದೆ. ಇದರ ಬಗ್ಗೆ ಜ್ಞಾನವಿರಬೇಕು. ಅಲ್ಲದೇ, ಸರ್ಕಾರದ ಪ್ರತಿ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳು, ಅನುದಾನದ ಬಗ್ಗೆ ಮಾಹಿತಿ ಪಡೆದು, ಅದನ್ನು ಸದ್ಬಳಸಿಕೊಂಡು, ಆರ್ಥಿಕವಾಗಿ ಸದೃಢವಾಗಲು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ನೂತನ ಜಿಲ್ಲಾಧ್ಯಕ್ಷ ಮಹ್ಮದಗೌಸ್ ಕಳಸಾಪೂರ ಮಾತನಾಡಿ, ದಿವ್ಯಾಂಗರು ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು. ಇದಕ್ಕೆ ಬೇಕಾದ ಸಹಾಯ ಹಾಗೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಒಕ್ಕೂಟದ ರಾಜ್ಯ ಸಂಚಾಲಕ ಹಾಗೂ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೇಶವ ತೆಲಗು, ಕಳೆದ ಐದು ವರ್ಷಗಳಲ್ಲಿ ದಿವ್ಯಾಂಗರಿಗೆ ಸಾಕಷ್ಟು ಕೆಲಸ ಮಾಡಿದ್ದು, ಸಹಕಾರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದ ಅವರು, ಒಕ್ಕೂಟದ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.
ಇದೇ ವೇಳೆ ಒಕ್ಕೂಟದ ರಾಜ್ಯ ಸಂಚಾಲಕರಾಗಿ ನೇಮಕಗೊಂಡ ಕೇಶವ ತೆಲಗು, ಅಧ್ಯಕ್ಷ ಮಹ್ಮದಗೌಸ್ ಕಳಸಾಪೂರ, ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಕೆಂಪಲಿAಗಣ್ಣವರ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸುವ ಮೂಲಕ ಗೌರವಿಸಿತು.
ಕಾರ್ಯಕ್ರಮದಲ್ಲಿ 2021-22 ನೇ ಸಾಲಿನಲ್ಲಿ ಸೇವೆ ಸಲ್ಲಿಸಿದ ಒಕ್ಕೂಟದ ಪದಾಧಿಕಾರಿಗಳಿಗೆ ಅತ್ಯುತ್ತಮ ಸೇವಾ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿತು.
ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಬಸವರಾಜ ಉಪ್ಪಾರ, ಶ್ರೀಶೈಲ ಸವದತ್ತಿ,ಸಂತೋಷ ಹಿರೇಮಠ, ಮಹೇಶ ಗೂಳಪ್ಪನವರ, ಉಮೇಶ ಚೌಡಣ್ಣವರ, ವಿಠ್ಠಲ ಲಾಡೆರ, ಸತೀಶ ಹೆಗ್ಗಣ್ಣವರ, ಮಂಗಳಾ ಬೆಟಗೇರಿ, ಈರಮ್ಮ ಹಳವೂರ, ಅಬ್ದುಲ್ ಇದ್ದರು.
(M) 9945564891