*ಪಂ. ವೆಂಕಟೇಶ ಗೋಡಖಿಂಡಿ ಸಂಸ್ಮರಣೆ* *‘ಸ್ವರ ಶ್ರದ್ಧಾಂಜಲಿ’ ಸಂಗೀತ ಸಂಜೆ ಎ. 16 ರಂದು*
ಧಾರವಾಡ 11 : ಖ್ಯಾತ ಸಂಗೀತಗಾರ, ಕೊಳಲುವಾದಕ ಪಂ. ವೆಂಕಟೇಶ ಗೋಡಖಿಂಡಿಯವರ ಸಂಸ್ಮರಣೆಯ ಅಂಗವಾಗಿ ‘ಸೃಜನಾ’ ಡಾ. ಅಣ್ಣಾಜಿರಾವ್ ಸಿರೂರ ರಂಗಮಂದಿರದಲ್ಲಿ ಎಪ್ರಿಲ್ 16 ರವಿವಾರದಂದು ಸಂಜೆ 5 ಗಂಟೆಯಿಂದ ನಡೆಯುವ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಿಂದ ಗಾಯನ-ವಾದನಗಳ ನಿನಾದ ಹರಿದುಬರಲಿದೆ.
ಪಂ. ಪ್ರವೀಣ ಗೋಡಖಿಂಡಿ ಸಾರಥ್ಯದ ಬೆಂಗಳೂರಿನ ಸಂಜೋಗ ಚಾರಿಟೇಬಲ್ ಟ್ರಸ್ಟ್, ಧಾರವಾಡದ ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ವಿದುಷಿ ಕಲ್ಪನಾ ಝೋಕರಕರ ಹಾಗೂ ಪುತ್ರಿ ಅನುಜಾ ಝೋಕರಕರ ಅವರ ಸಹಗಾಯನ, ಪಂ. ಪ್ರವೀಣ ಗೋಡಖಿಂಡಿ ಹಾಗೂ ಷಡಜ ಗೋಡಖಿಂಡಿ ದ್ವಂದ್ವ ಕೊಳಲುವಾದನ ಮೂಡಿಬರಲಿದೆ. ಅಲ್ಲದೇ ಸಂಜೋಗ ಬಾನ್ಸುರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಸುನೀಲ ಡಿ.ಎ. ಮತ್ತು ಸಮೀರ ಜಿ. ಅವರ ಬಾನ್ಸುರಿ ವಾದನದ ನಿನಾದ ಹರಿದುಬರಲಿದೆ. ಶ್ರೀಧರ ಮಾಂಡ್ರೆ, ಕಿರಣ ಗೋಡಖಿಂಡಿ ಕಿರಣ ಯಾವಗಲ್ಲ ತಬಲಾ ಹಾಗೂ ಗುರುಪ್ರಸಾದ ಹೆಗಡೆ ಸಂವಾದಿನಿ ಸಾಥ್ ಸಂಗತ್ ಮಾಡಲಿದ್ದಾರೆ.
ಎಲ್ಲ ಸಂಗೀತಪ್ರೇಮಿಗಳಿಗೂ ಉಚಿತ ಪ್ರವೇಶವಿದೆ.
*ವಿದುಷಿ ಕಲ್ಪನಾ ಝೋಕರಕರ್* (ಗಾಯನ)
ದೇಶದ ಪ್ರಬುದ್ಧ ಗಾಯಕಿಯರಲ್ಲಿ ಒಬ್ಬರಾದ ಕಲ್ಪನಾ ಝೋಕರಕರ್ ಜನಿಸಿದ್ದು ಮಧ್ಯಪ್ರದೇಶದ ಇಂದೋರ್‌ನಲ್ಲಿ. ಸುಮಧರ ಕಂಠದ ವಿದುಷಿ ಕಲ್ಪನಾ ಅವರದು ಸಂಗೀತಗಾರರ ಮನೆತನ. ತಂದೆ ಹಾಗೂ ಗುರು ಪಂ. ಕೃಷ್ಣರಾವ್ ಮುಜುಮದಾರ್. ತಂದೆಯವರ ಪದತಲದಲ್ಲಿ ಕುಳಿತು ಆಳವಾದ, ಕಠಿಣತಮ ರಿಯಾಜ್‌ನೊಂದಿಗೆ ಸಂಗೀತಾಧ್ಯಯನಗೈದರು. ನಂತರ ದಿ. ಡಾ. ಸುಶೀಲಾ ಪೋಹಣಕರ ಹಾಗೂ ಪಂ. ವಿ.ಯು. ರಾಜೂರಕರ ಅವರಲ್ಲಿ ಉನ್ನತ ಮಾರ್ಗದರ್ಶನ ಪಡೆದು ಉದಯೋನ್ಮುಖ ಗಾಯಕಿಯಾಗಿ ಹೊರಹೊಮ್ಮಿದರು.
ಖ್ಯಾಲ್ ಗಾಯನವಲ್ಲದೇ ಠುಮರಿ, ಟಪ್ಪಾ, ತರಾನಾ, ಹೋರಿ, ದಾದ್ರಾ, ಭಜನ್ ಹೀಗೆ ವಿವಿಧ ಸಂಗೀತ ಶೈಲಿಗಳ ಪ್ರಸ್ತುತಿಯಲ್ಲಿ ಪ್ರಾವೀಣ್ಯತೆ ಸಾಧಿಸಿದ್ದಾರೆ. ವಿದುಷಿ ಕಲ್ಪನಾ ಝೋಕರಕರ್ ಅವರು ವತ್ಸಲಾತಾಯಿ ಪುರಸ್ಕಾರ, ಕೃಷ್ಟಾ ಹಾನಗಲ್ ಪ್ರಶಸ್ತಿ, ಅಭಿನವ ಕಲಾ ಸಮ್ಮಾನ, ಮಧ್ಯಪ್ರದೇಶ ಗೌರವ ಪುರಸ್ಕಾರ, ಅಭಿನವ ಕಲಾ ಸಮ್ಮಾನ್, ಆಲಾಪ ಗುರು ವಂದನ ಸಮ್ಮಾನ್, ಮಹಾಂಕಾಲ್ ಸಮ್ಮಾನ ಇತ್ಯಾದಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನದ ಕಲಾವಿದೆಯಾಗಿರುವ ವಿದುಷಿ ಕಲ್ಪನಾ ಅವರು ದೇಶದ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ ಅಲ್ಲದೇ ಅಮೆರಿಕ, ಇಂಗ್ಲೆಂಡ್, ಕುವೈತ್, ಮಸ್ಕತ್, ಆಫ್ರಿಕಾ, ಸಿಂಗಾಪೂರ ಹೀಗೆ ವಿವಿಧೆಡೆಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಹರಿಸಿದ್ದಾರೆ.
*ಅನುಜಾ ಝೋಕರಕರ್ *
(ಗಾಯನ)
ಸಂಗೀತಗಾರರ ಮನೆತನದ ಹಿನ್ನೆಲೆಯುಳ್ಳ ಅನುಜಾ ಝೋಕರಕರ್ ದೇಶದ ಯುವ ಪ್ರತಿಭಾವಂತ ಗಾಯಕಿಯರಲ್ಲಿ ಒಬ್ಬರು. ತಾಯಿ ವಿದುಷಿ ಕಲ್ಪನಾ ಝೋಕರಕರ್. ಸಹಜವಾಗಿ ಸಂಗೀತಮಯ ಪರಿಸರದಲ್ಲಿ ಜನಿಸಿದ ಅನುಜಾ ಅವರಿಗೆ ಬಾಲ್ಯದಲ್ಲಿಯೇ ಸಂಗೀತದತ್ತ ಒಲವು ಮೂಡಿತು. ತಾಯಿಯ ಪದತಲದಲ್ಲಿ ಕುಳಿತು ಆಳವಾದ ಅಧ್ಯಯನ ಮಾಡಿದರು; ಮಾಡುತ್ತಲಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಓರ್ವ ಯುವ ಪ್ರತಿಭಾವಂತ ಗಾಯಕಿಯಾಗಿ ರೂಪುಗೊಂಡಿದ್ದಾರೆ.
ವಡೋದರಾದ ಸ್ವರವಿಲಾಸ ಸಂಸ್ಥೆಯು ಹಮ್ಮಿಕೊಂಡ ಅಖಿಲ ಭಾರತ ಶಾಸ್ತೀಯ ಸಂಗೀತದ ಸ್ಪರ್ಧೆಯಲ್ಲಿ ಅನುಜಾ ಪ್ರಥಮ ಸ್ಥಾನ ಪಡೆದರು. ಆಕಾಶವಾಣಿಯ ರಾಷ್ಟಿಯ ಸಂಗೀತ ಸ್ಪರ್ಧೆಯಲ್ಲಿ ಗಜಲ್ ಗಾಯನದಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡರು. ಶಾಸ್ತಿçÃಯ-ಉಪಶಾಸ್ತಿçÃಯ ಹಾಗೂ ಗಜಲ್ ಗಾಯನದಲ್ಲಿ ಬಿ ಹೈ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. ಮುಂಬೈನ ಎಸ್.ಎನ್.ಡಿ.ಟಿ ಯಿಂದ ಗಾಯನದ ಪದವಿ ಪಡೆದಿದ್ದಾರೆ. ಪುಣೆ ಭಾರತೀಯ ವಿದ್ಯಾಪೀಠದಿಂದ ಸ್ನಾತಕೋತ್ತರ ಪದವಿಯಲ್ಲಿ ಬಂಗಾರದ ಪದಕ ಗಳಿಸಿದರು. ಠುಮರಿ, ದಾದರಾ, ಟಪ್ಪಾ, ಕಜರಿ, ಝೂಲಾ, ಗಜಲ್ ಹಾಗೂ ಭಜನ್‌ಗಳನ್ನು ಪ್ರಸ್ತುತಪಡಿಸುವಲ್ಲಿ ಸಿದ್ಧಹಸ್ತರೆನಿಸಿಕೊಂಡಿರುವ ಅನುಜಾ ಝೋಕರಕರ್ ಮುಂಬೈ, ಭೋಪಾಲ್, ಗೋವಾ, ಸಾಂಗಲಿ, ಪುಣೆ, ಜಬಲಪುರ, ವಾರಣಾಸಿ, ದಿಲ್ಲಿ ಇಂದೋರ್ ಹೀಗೆ ದೇಶ ವಿವಿಧೆಡೆಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಹರಿಸಿದ್ದಾರೆ.
*ಪಂ. ಪ್ರವೀಣ ಗೋಡಖಿಂಡಿ, ಬೆಂಗಳೂರು* (ಬಾನ್ಸುರಿ ವಾದನ)
ಸಂಗೀತಗಾರರ ಮನೆತನದಲ್ಲಿ ಜನಿಸಿದ ಪ್ರವೀಣ ಗೋಡಖಿಂಡಿ, ಬಾನ್ಸುರಿ ವಾದನದ ಪ್ರಬುದ್ಧ ಪ್ರತಿಭೆ. ತಮ್ಮ ೩ನೇ ವರ್ಷದಿಂದಲೇ ಬಾನ್ಸುರಿಯೊಂದಿಗೆ ಅವಿನಾಭಾವ ಸಂಬAಧವಿರಿಸಿಕೊAಡಿರುವ ಪ್ರವೀಣಗೆ ತಂದೆ ಪಂ. ವೆಂಕಟೇಶ ಗೋಡಖಿಂಡಿ ಅವರು ಏಕೈಕ ಗುರು. ಹೀಗಾಗಿ ಪ್ರವೀಣಗೆ ಬಾಲ್ಯದಿಂದಲೇ ಸಂಗೀತ ಓತಪ್ರೋತ. ತಮ್ಮ ೬ನೇ ವಯಸ್ಸಿನಲ್ಲಿಯೇ ಪ್ರಥಮ ಸಾರ್ವಜನಿಕ ಕಾರ್ಯಕ್ರಮ ನೀಡಿದ ಕೀರ್ತಿ ಪ್ರವೀಣ ಅವರದು.
ಕಿರಾನಾ ಘರಾಣೆಯ ಗಾಯಕಿ ಶೈಲಿಯಲ್ಲಿ ಬಾನ್ಸುರಿ ನುಡಿಸುವ ಪ್ರವೀಣ, ಗತಕಾರಿ ಅಥವಾ ತಂತ್ರಕಾರಿ ಎಂಬ ವಿನೂತನ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಪಾಶ್ಚಿಮಾತ್ಯ ಶಾಸ್ತೀಯ ಸಂಗೀತ ಹಾಗೂ ಕರ್ನಾಟಕಿ ಸಂಗೀತ ಶೈಲಿಯಲ್ಲಿ ಬಾನ್ಸುರಿಯನ್ನು ನುಡಿಸುವ ಪ್ರವೀಣಗೆ ಮುಂಬೈನ ಸುರ್ ಸಿಂಗಾರ್ ಸಂಸದದಿಂದ ಸುರಮಣಿ ಪ್ರಶಸ್ತಿ ನೀಡಿ ಗೌರವಿಸಿದೆ. ಆಕಾಶವಾಣಿಯು ಪ್ರವೀಣಗೆ ಎ ಗ್ರೇಡ್ ಕಲಾಕಾರರೆಂದು ಮಾನ್ಯತೆ ನೀಡಿದೆ. ನಾದನಿಧಿ ಹಾಗೂ ಆರ್ಯಭಟ ಪ್ರಶಸ್ತಿ ಪಡೆದ ಪ್ರವೀಣ, ದೇಶ-ವಿದೇಶಗಳಲ್ಲಿ ಬಾನ್ಸುರಿ ಸೋಲೊ ಹಾಗೂ ಫ್ಯೂಜನ್ ಸಂಗೀತದ ನಾದಲಹರಿಯನ್ನು ಹರಿಸಿದ ಕೀರ್ತಿ ಇವರದು.
*ಷಡ್ಜ್ ಗೋಡಖಿಂಡಿ, ಬೆಂಗಳೂರು* (ಬಾನ್ಸುರಿ ವಾದನ)
ಗೋಡಖಿಂಡಿ ಕುಟುಂಬದ ಬಾನ್ಸುರಿ ಸಂಗೀತ ಪರಂಪರೆಯಲ್ಲಿ ಯಶಸ್ವಿಯಾಗಿ ಸಾಗುತ್ತಿರುವ ಯುವ ಬಾನ್ಸುರಿ ವಾದಕ ಷಡಜ ಗೋಡಖಿಂಡಿ. ಅಜ್ಜ ಪಂ. ವೆಂಕಟೇಶ ಹಾಗೂ ತಂದೆ ಪ್ರವೀಣ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿರುವ ಷಡ್ಜ್ ನಾಡಿನ ಪ್ರತಿಭಾನ್ವಿತ ಕಲಾವಿದ. ಅಜ್ಜ-ತಂದೆಯರ ವಿದ್ಯಾರ್ಥಿಗಳ ಜೊತೆ ಕುಳಿತು ಪಾಠ ಕೇಳುತ್ತಲೇ ಬೆಳೆದು ಅತ್ಯಂತ ಕಡಿಮೆ ವಯಸ್ಸಿನಲ್ಲಿ ವೇದಿಕೆಯನ್ನೇರಿದ ಪ್ರತಿಭೆ ಷಡ್ಜ್. ತಂದೆಯೊಂದಿಗೆ ಯುಗಳ ವಾದನವನ್ನು ಅತ್ಯುತ್ತಮವಾಗಿ ನುಡಿಸುವ ಷಡ್ಜ್ ಅವರು ಗೋಡಖಿಂಡಿ ಮನೆತನದ ಮೂರನೇ ತಲೆಮಾರಿನ ಬಾನ್ಸುರಿ ವಾದಕರಾಗಿದ್ದಾರೆ. ಆಕಾಶವಾಣಿಯ ಕಲಾವಿದರಾಗಿರುವ ಷಡ್ಜ್ ಅಮೆರಿಕ, ಕತಾರ್, ದುಬೈ, ಹಾಂಕಾಂಗ್, ದೇಶದ ವಿವಿಧೆಡೆಗಳಲ್ಲಿ ತಮ್ಮ ಬಾನ್ಸುರಿಯ ನಿನಾದವನ್ನು ಹರಿಸಿದ್ದಾರೆ.