ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ತಕ್ಷಣವೇ ಖಾಯಂ ಸ್ವರೂಪದಲ್ಲಿ ಭರ್ತಿ ಮಾಡಲು ಎಐಯುವೈಎಸ್‌ಸಿ ಆಗ್ರಹ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ತಕ್ಷಣವೇ ಭರ್ತಿಮಾಡಿಕೊಳ್ಳಲು ಆಗ್ರಹಿಸಿ ಇಂದು ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿ(ಎಐಯುವೈಎಸ್‌ಸಿ) ಧಾರವಾಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಪ್ರಧಾನಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ದೇಶದ ನಿರುದ್ಯೋಗ ಪ್ರಮಾಣವು ದಿನೇದಿನೇ ಏರಿಕೆಯಾಗುತ್ತಲೇ ಇದೆ. ಕಳೆದ ನವೆಂಬರ್‌ನಲ್ಲಿ ಶೇಕಡಾ 8.96 ಇದ್ದ ನಗರ ಪ್ರದೇಶದ ನಿರುದ್ಯೋಗವು ಈ ವರ್ಷಾರಂಭದ ಹೊತ್ತಿಗೆ 10.96ಕ್ಕೆ ತಲುಪಿದೆ. ಗ್ರಾಮೀಣ ಪ್ರದೇಶದಲ್ಲಿ ಅದು ಶೇಕಡಾ 6.48 ರಿಂದ 7.23ಕ್ಕೆ ತಲುಪಿದೆ! ಒಟ್ಟಾರೆ ಶೇಕಡಾ 8.30ಕ್ಕೆ ಏರಿಕೆಯಾಗಿದ್ದು, ಕಳೆದ 16 ತಿಂಗಳಲ್ಲಿಯೇ ಅತ್ಯಂತ ಗರಿಷ್ಠ ಮಟ್ಟ ತಲುಪಿದೆ. ಪ್ರಧಾನಿಮಂತ್ರಿಗಳು ಕಳೆದ ವರ್ಷ ನೀಡಿದ 10 ಲಕ್ಷ ಉದ್ಯೋಗಗಳ ಭರ್ತಿ ಭರವಸೆಯು ಕಾರ್ಯರೂಪಕ್ಕೆ ಬಂದಿಲ್ಲ. ಅಲ್ಲದೇ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿದರೂ ಸಹ ಲಕ್ಷಾಂತರ ನಿರುದ್ಯೋಗಗಳಿಗೆ ಉದ್ಯೋಗ ಕೊಡಬಹುದು. ಆದರೆ ಸರ್ಕಾರ ಇತ್ತ ಕಡೆ ಗಮನಹರಿಸುತ್ತಿಲ್ಲ. ಅಲ್ಲದೆ ಕೇಂದ್ರ ಸರ್ಕಾರ ಈ ಬಾರಿ ಬಜೆಟ್ಟಿನಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗಾಗಿ ಕೇವಲ ರೂ. 60,000 ಕೋಟಿಗಳಷ್ಟು ಅನುದಾನವನ್ನು ಮೀಸಲಿಟ್ಟಿದ್ದು, ಕಳೆದ ಬಾರಿಗಿಂತ ರೂ. 13,000 ಕೋಟಿಗಳಷ್ಟನ್ನು ಕಡಿತಗೊಳಿಸಿದೆ. ಕಳೆದ ೫ ವರ್ಷಗಳಲ್ಲೇ ಇದು ಈ ಯೋಜನೆಗಾಗಿ ನೀಡಿದ ಅತ್ಯಂತ ಕಡಿಮೆ ಅನುದಾನವಾಗಿದೆ. ಇದು ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗದ ಹೆಚ್ಚಳಕ್ಕೆ ಕಾರಣವಾಗಲಿದೆ.
ಇನ್ನು ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.52 ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡುವ ಬದಲಿಗೆ, ಖಾಯಂ ಸ್ವರೂಪದ ಹುದ್ದೆಗಳೆಲ್ಲವನ್ನೂ ಬಹುತೇಕ ಗುತ್ತಿಗೆ - ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಾ, ಖಾಯಂ ಉದ್ಯೋಗದ ಪರಿಕಲ್ಪನೆಯನ್ನೇ ಅಳಿಸಿ ಹಾಕಲಾಗುತ್ತಿದೆ. ಕನಿಷ್ಠ ಸೇವಾಭದ್ರತೆಯಿರುವ ಒಂದು ಉದ್ಯೋಗಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಯುವಜನರಿಗೆ ಪದವಿ ಮುಗಿದು ಮೂರು ವರ್ಷಗಳಾದರೂ ಕೆಲಸ ಸಿಗದಿದ್ದರೆ ಅಂಥವರಿಗೆ ಒಂದು ಬಾರಿ ಮಾತ್ರ 2,000/- ರೂ.ಗಳ ಪರಿಹಾರ ನೀಡುವುದಾಗಿ ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವ ಮುಖ್ಯಮಂತ್ರಿಗಳ ಮಾತು ಉದ್ಯೋಗಾಕಾಂಕ್ಷಿ ಯುವಜನರನ್ನು ಅವಮಾನಿಸಿದಂತಿದೆ! ದೇಶದ ಭವಿಷ್ಯವೇ ಯುವಜನರು ಎಂಬುದನ್ನರಿತು ಅವರಲ್ಲಿನ ಉತ್ಪಾದಕ ಶಕ್ತಿಯನ್ನು ಸದುಪಯೋಗಪಡಿಸಿಕೊಂಡು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಮೊದಲು ಯುವಜನರಿಗೆ ಅವರ ಅರ್ಹತೆಗೆ ತಕ್ಕಂತ ಉದ್ಯೋಗವನ್ನು ಕೊಡಬೇಕೆಂದು ಈ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಲಾಯಿತು.
ಈ ಹಿನ್ನೆಲೆಯಲ್ಲಿ ಇದೇ ಮಾರ್ಚ್ 1 ರಿಂದ 7 ರವರೆಗೆ ನಮ್ಮ ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿಯ ಕರೆಯ ಮೇರೆಗೆ ನಿರುದ್ಯೋಗದ ವಿರುದ್ಧ ಪ್ರತಿಭಟನಾ ಸಪ್ತಾಹವನ್ನು ಹಮ್ಮಿಕೊಂಡಿದ್ದು, ಧಾರವಾಡ ಜಿಲ್ಲೆಯ ನಿರುದ್ಯೋಗಿ ಯುವಜನರ ಹಕ್ಕೊತ್ತಾಯಗಳ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಿ, ಹೊಸ ಉದ್ಯೋಗಗಳನ್ನು ಸೃಷ್ಟಿಸಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು, ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿಯನ್ನು ಕೈ ಬಿಟ್ಟು ಎಲ್ಲಾ ಹುದ್ದೆಗಳನ್ನು ಖಾಯಂ ಸ್ವರೂಪದಲ್ಲಿ ನೇಮಕ ಮಾಡಿಕೊಳ್ಳಬೇಕು ಹಾಗೂ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಯಿತು.
ನಿಯೋಗದಲ್ಲಿ ಎಐಯುವೈಎಸ್‌ಸಿ ಜಿಲ್ಲಾ ಸಂಚಾಲಕರಾದ ಭವಾನಿಶಂಕರ್ ಎಸ್.ಗೌಡ, ಅಕ್ಷಯ ಊರಮುಂದಿನ, ಪ್ರೀತಿ ಸಿಂಗಾಡೆ, ಕಲ್ಮೇಶ ಮುತ್ತಗಿ ಮುಂತಾದವರು ಭಾಗವಹಿಸಿದ್ದರು.