ಒಳಗೊಳ್ಳುವಿಕೆಯಿಂದ ಭಾರತ ವಿಶ್ವಗುರು ಆಗಲು ಸಾಧ್ಯ ; ಪ್ರೊ.ಸದಾನಂದ ಸುಗಂಧಿ.
.ಧಾರವಾಡ:--ಬಹುಸಂಸ್ಕೃತಿಯ ಬಹುಜನರಿಂದ ತುಂಬಿಕೊಂಡಿರುವ ಭಾರತ ದೇಶವು ಸರ್ವರೂ ಒಳಗೊಳ್ಳುವಂಥಹ ಕಲ್ಯಾಣ ಕೆಲಸಗಳನ್ನು ಹಮ್ಮಿಕೊಳ್ಳುವುದು ಅಗತ್ಯವಾಗಿದೆ. ಹೀಗೆ ಸರ್ವರ ಒಳಗೊಳ್ಳುವಿಕೆಯಿಂದ ಮಾತ್ರ ಇಂದಿನ ಕಾಲದಲ್ಲಿಯೂ ಸಹ ಭಾರತ ವಿಶ್ವಗುರು ಆಗಲು ಸಾಧ್ಯವಿದೆ ಎಂದು ಕವಿವಿ ಮಾನವಶಾಸ್ತ್ರ ವಿಭಾಗದ ಪ್ರೊ.ಸದಾನಂದ ಸುಗಂಧಿಯವರು ಅಭಿಪ್ರಾಯಪಟ್ಟರು.
ಅವರು ಧಾರವಾಡದ ಗಣಕರಂಗ ಸಂಸ್ಥೆಯು ಕರ್ನಾಟಕ ವಿದ್ಯಾವರ್ಧಕ ಸಂಘದ ರಾಹದೇ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ೨೦೫ನೇಯ ಕೋರೆಗಾಂವ ವಿಜಯೋತ್ಸವ ಮತ್ತು ಕೋರೆಗಾಂವ ವಿಜಯಸ್ತಂಭ ಲೇಖನ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಿದ್ದರು. ಇತಿಹಾಸದ ಪುಟಗಳಿಂದ ನಾವು ಧನಾತ್ಮಕ ವಿಚಾರಗಳನ್ನು ಮಾತ್ರ ಪಡೆದುಕೊಳ್ಳಬೇಕು. ಅದರಿಂದ ಭವಿಷ್ಯದಲ್ಲಿ ನಾವು ದೇಶವನ್ನು ಕಟ್ಟುವ ಕುರಿತು ಧನಾತ್ಮಕ, ಜೀವಾತ್ಮಕ, ಗುಣಾತ್ಮಕವಾಗಿ ಆಲೋಚಿಸಲು ಪ್ರೇರಣೆ ಸಿಕ್ಕಂತಾಗುವುದು. ಗೊಂದಲ ಸೃಷ್ಟಿಸುವುದರಿಂದ ವಿನಾಕಾರಣ ಅನರ್ಥಗಳು ಸಂಭವಿಸುತ್ತವೆ ಹೊರತು ದೇಶಕ್ಕೆ ಯಾವುದೇ ಲಾಭವಿಲ್ಲ. ಸಾಮ್ರಾಟ್ ಅಶೋಕನ ಕಾಲದಲ್ಲಿ ಎಲ್ಲರ ಒಳಗೊಳ್ಳುವಿಕೆಯಿಂದ ಪ್ರಾಚೀನ ಭಾರತವು ವಿಶ್ವಗುರುವಾಗಿ ರಾರಾಜಿಸಿದ್ದನ್ನು ನೆನಪಿಸಿಕೊಳ್ಳಬಹುದು. ಇಂದಿನ ಕಾಲದ ಆಧುನಿಕ ಸಮಾಜದಲ್ಲಿರುವ ಅನಿಷ್ಟ ಆಚರಣೆಯಾಗಿರುವ ಜಾತಿ ವ್ಯವಸ್ಥೆ, ಮತ್ತು ಜಾತಿಗಳ ನಡುವಿನ ಅಂತರ ಹೋಗಬೇಕಾಗಿದೆ. ಸಮಾಜದ ಋಣವನ್ನು ತೀರಿಸುವ ದಿಶೆಯಲ್ಲಿ ಮತ್ತು ಐತಿಹಾಸಿಕ ಘಟನೆಯ ವಿಜಯೋತ್ಸವದ ಆಚರಣೆಯೊಂದಿಗೆ ಐತಿಹಾಸಿಕ ಪ್ರಜ್ಞೆ ಮೂಡಿಸುವಲ್ಲಿ ಗಣಕರಂಗ ಸಂಸ್ಥೆಯವರು ಮಾಡುತ್ತಿರುವ ಪ್ರಯತ್ನ ಮೆಚ್ಚುವಂಥದ್ದು ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರು ಸಾಧಕರಾದ ಡಾ.ಬಸು ಬೇವಿನಗಿಡದ (ಸಾಹಿತ್ಯ), ಡಾ.ಇಸೆಬೆಲ್ಲಾ ದಾಸ (ಸಾಮಾಜಿಕ), ವೈ.ಜಿ.ಭಗವತಿ (ಮಕ್ಕಳ ಜಾಗೃತಿ), ರಾಜು ಕರಣಿ (ಪತ್ರಿಕೋಧ್ಯಮ) ಮತ್ತು ವೀರಪ್ಪ ತಾಳದವರ (ಶಿಕ್ಷಣ) ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನಿತರು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಯುವಸಾಹಿತಿ ಗಣಪತಿ ಗೋ. ಚಲವಾದಿ ಸ್ವಾಗತಿಸಿದರು. ಕಾರ‍್ಯಕ್ರಮದ ಆರಂಭದಲ್ಲಿ ಶರೀಫ್ ಮಾಕಪ್ಪನವರ ಮತ್ತು ಸಂಗಡಿಗರು ಹೋರಾಟದ ಹಾಡುಗಳನ್ನು ಪ್ರಸ್ತುತಪಡಿಸಿದರು. ಗಣಕರಂಗದ ಅಧ್ಯಕ್ಷ ಮತ್ತು ರಂಗಕರ್ಮಿ ಸಿದ್ಧರಾಮ ಹಿಪ್ಪರಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇತ್ತೀಚೆಗೆ ಹಮ್ಮಿಕೊಂಡಿದ್ದ ಕೋರೆಗಾಂವ ವಿಜಯಸ್ತಂಭ ಲೇಖನ ಸ್ಪರ್ಧೆಯಲ್ಲಿ ವಿಜೇತರಾದ ರಾಯಚೂರಿನ ಸುರೇಶಬಾಬು ಜಂಬಲದಿನ್ನಿ, ಮಂಡ್ಯದ ಸುಮನ್ ರಾವ್, ದೊಡ್ಡಬಳ್ಳಾಪುರದ ರಮೇಶ ಸಂಕ್ರಾಂತಿ, ಹೊಸಪೇಟೆಯ ರೇಖಾ ಕನ್ನಡತಿ ಅವರಿಗೆ ಬಹುಮಾನ ನೀಡಿ ಗೌರವಿಸಿ, ಸನ್ಮಾನಿಸಲಾಯಿತು. ಕೊನೆಯಲ್ಲಿ ಲೇಖನ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ, ಸ್ಪರ್ಧಾ ಸಂಯೋಜಕರಿಗೆ, ಕಾರ್ಯಕ್ರಮ ನಿರೂಪಕರಿಗೆ ನೆನಪಿನ ಕಾಣಿಕೆ, ಪ್ರಮಾಣಪತ್ರ ವಿತರಿಸಲಾಯಿತು. ಕವಿಮಿತ್ರ ರವಿ ಚಲವಾದಿಯವರು ನಿರೂಪಿಸಿ, ವಂದಿಸಿದರು.
SUBSCRIBE OUR STAR 74 NEWS CHANNEL LIKE & SUBSCRIBE. (M) 9945564891.