ವಿದ್ಯೆಯ ಜೊತೆಗೆ ಉನ್ನತ ವ್ಯಕ್ತಿತ್ವ ಸಂಪಾದಿಸಿ ಖ್ಯಾತ ಚಲನಚಿತ್ರ ನಟ, ನಿರ್ಮಾಪಕ ಬಸಂತಕುಮಾರ ಪಾಟೀಲ ಕಿವಿಮಾತು

ವಿದ್ಯೆಯ ಜೊತೆಗೆ ಉನ್ನತ ವ್ಯಕ್ತಿತ್ವ ಸಂಪಾದಿಸಿ ಖ್ಯಾತ ಚಲನಚಿತ್ರ ನಟ, ನಿರ್ಮಾಪಕ ಬಸಂತಕುಮಾರ ಪಾಟೀಲ ಕಿವಿಮಾತು
 ಧಾರವಾಡ : ವಿದ್ಯಾರ್ಥಿಗಳು ತಮ್ಮ ಕಲಿಕೆಯೊಂದಿಗೆ ಸಂಪಾದಿಸುವ ವಿಭಿನ್ನ ನೆಲೆಯ ವಿದ್ಯೆಯ ಜೊತೆಗೆ ಶ್ರೇಷ್ಠ ಸಂಸ್ಕಾರದ ಉತ್ಕೃಷ್ಟ ಜೀವನ ಮೌಲ್ಯಗಳ ಅನುಪಾಲನೆಗೆ ತೆರೆದುಕೊಂಡು ಉನ್ನತ ವ್ಯಕ್ತಿತ್ವವನ್ನೂ ಸಂಪಾದಿಸಬೇಕೆಂದು ಖ್ಯಾತ ಹಿರಿಯ ಚಲನಚಿತ್ರ ನಟ, ನಿರ್ಮಾಪಕ ಬಸಂತಕುಮಾರ ಪಾಟೀಲ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅವರು ನಗರದ ಕಾಮನಕಟ್ಟಿ ಬಳಿ ಇರುವ ಶ್ರೀಮತಿ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ‘ಆರೋಹಣ’ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಬದುಕೆಂದರೆ ಅದೊಂದು ತಪಸ್ಸು ಇದ್ದಂತೆ, ಅಲ್ಲಿ ಎಲ್ಲವೂ ನಿಖರವಾಗಿಯೇ ನಡೆಯಬೇಕು. ಅಧ್ಯಯನದ ತನ್ಮಯತೆ ಇದ್ದಾಗ ಹೊಸತು ಕಲಿಕೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಮತ್ತು ವಿನಯವನ್ನು ರೂಢಿಸಿಕೊಳ್ಳಬೇಕು. ಜನ್ಮ ನೀಡಿದ ತಂದೆ-ತಾಯಿಗಳಲ್ಲಿ ಭಕ್ತಿ, ಶೃದ್ಧೆ ಮತ್ತು ಗೌರವವನ್ನು ಹೊಂದಿದಾಗ ಗಳಿಸಿದ ವಿದ್ಯೆಗೆ ಬೆಲೆ ಬರುತ್ತದೆ ಎಂದರು.
 ತಂತ್ರಾಂಶ ಬಳಕೆ ಪ್ರಸ್ತುತ ಅಖಂಡ ಜಗತ್ತು ಭಾರತದತ್ತ ನೋಡುವಂತಾಗಿದೆ. ಭಾರತವು ಅಭಿವೃದ್ಧಿಪಡಿಸಿದ ತಂತ್ರಾಂಶ (ಸಾಫ್ಟವೇರ್)ಗಳನ್ನು ಇಡೀ ವಿಶ್ವವೇ ಬಳಕೆ ಮಾಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ನಮ್ಮ ದೇಶ ಸಿದ್ಧಪಡಿಸಿದ ರೋಗನಿರೋಧಕ ಲಸಿಕೆಯನ್ನು ಪ್ರಪಂಚದ ಇತರೇ ದೇಶಗಳೂ ಬಳಸಿದ್ದನ್ನು ನೋಡಿದರೆ ಭಾರತದ ಘನತೆ ಅರಿವಿಗೆ ಬರುತ್ತದೆ ಎಂದ ಬಸಂತಕುಮಾರ ಪಾಟೀಲ, ಈ ನಿಟ್ಟಿನಲ್ಲಿ ಲೀಲಾವತಿ ಚರಂತಿಮಠ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ಹೊಸ ಪ್ರಯೋಗಗಳನ್ನು ಅಳವಡಿಸಿ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ ಎಂದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ಎಂ.ಬಿ. ಸಬರದ ಮಾತನಾಡಿ, ಪಾಲಕರು ಮತ್ತು ಪೋಷಕರು ತಮ್ಮ ಮಕ್ಕಳಿಗೆ ಪ್ರೀತಿಯ ನೆಲೆಯಲ್ಲಿ ಬದುಕಿನ ಧನಾತ್ಮಕ ಚಿಂತನೆಯನ್ನು ರೂಡಿಸಬೇಕು. ಇದರಿಂದ ಮಕ್ಕಳ ಬುದ್ಧಿಮತ್ತೆಯು   ವಿಸ್ತೃತಗೊಳ್ಳುತ್ತದೆ ಎಂದರು.

ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಅರುಣ ಚರಂತಿಮಠ ಮಾತನಾಡಿ, ಶಾಲಾ ವಿದ್ಯಾರ್ಥಿಗಳನ್ನು ಕೇವಲ ತರಗತಿ ಬೋಧನೆಯ ಕಲಿಕಾ ಚಟುವಟಿಕೆಗಳಿಗಷ್ಟೇ ಸೀಮಿತಗೊಳಿಸದೇ, ಅವರಲ್ಲಿ ವೈಜ್ಞಾನಿಕ ಅನ್ವೇಷಣೆ, ಕ್ರೀಡಾ ಮತ್ತು ಸಾಂಸ್ಕೃತಿಕ ವ್ಯಕ್ತಿತ್ವ ನಿರ್ಮಾಣಕ್ಕೆ ನಿಖರ ವಾತಾವರಣವನ್ನು ಶಾಲಾ ಆವರಣದಲ್ಲಿ ನಿರ್ಮಾಣ ಮಾಡಲು ಶ್ರಮವಹಿಸಲಾಗಿದೆ ಎಂದರು.

  ಕನ್ನಡ ಪತ್ರಿಕೋದ್ಯಮದ ಹಿರಿಯ ನಿಯತಕಾಲಿಕ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ಯುಸ್ರೋ ಮಾಜಿ ಅಧ್ಯಕ್ಷ ಪ್ರೊ.ಎ.ಎಸ್. ಕಿರಣಕುಮಾರ ಅವರನ್ನು ಶಾಲೆಗೆ ಆಹ್ವಾನಿಸಿ ನಗರದ ವಿದ್ಯಾರ್ಥಿಗಳು ಶ್ರೀಹರಿಕೋಟಾಕ್ಕೆ ಭೇಟಿ ನೀಡಿ ಉಪಗ್ರಹ ಉಡಾವಣೆಯ ಅಪೂರ್ವ ಕ್ಷಣಗಳನ್ನು ನೋಡಲು ಅವಕಾಶ ಪ್ರಾಪ್ತವಾಗಿರುವುದು ಈ ಶಾಲೆಯ ವಿಶೇಷ ಸಾಧನೆಯಾಗಿದೆ ಎಂದರು.

 ವರ್ಷದ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ  ಋತ್ವಿಕ್ ನಾಯಕ ಹಾಗೂ ಸಾದಿಯಾ ತಾಡಪತ್ರಿ ಅವರಿಗೆ ಕ್ರಮವಾಗಿ ವರ್ಷದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಾಧನೆ ಮಾಡಿದ ವಿಶೇಷ ಚೇತನ ಮಗು ವಿನಯಕುಮಾರ ಬೆಳ್ಳಿಗಟ್ಟಿ ಗೌರವಿಸಲಾಯಿತು.  ಪ್ರೇರಿತಾ ಚರಂತಿಮಠ, ಸೋಮೇಶ ಗಂಗಣ್ಣವರ, ಅಶ್ವಿನಿ ದೊಡ್ಡಬಳ್ಳಾಪೂರ,ಅಮಿತಕುಮಾರ ಮಂಡಲ ಇದ್ದರು.  ವಿನಾಯಕ ಡೊಂಬರಕೊಪ್ಪ ಹಾಗೂ ಸಂಸ್ಕೃತಿ ನರಸಾಲಿ ನಿರೂಪಿಸಿದರು. ನಂತರ ಶಾಲಾ ಮಕ್ಕಳು ಗುಂಪು ನೃತ್ಯ, ಹಾಡು, ರೂಪಕ, ಹಾಸ್ಯ, ವಿಭಿನ್ನ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.ವಕೀಲ ಭೈರವ ಚರಂತಿಮಠ ವಂದಿಸಿದರು.

SUBSCRIBE OUR STAR 74 NEWS CHANNEL
ನವೀನ ಹಳೆಯದು

نموذج الاتصال