ಧಾರವಾಡ ತಹಸಿಲ್ದಾರ ಕಚೇರಿಗೆ ಬೇಟಿ; ಸಾರ್ವಜನಿಕರಿಂದ ಅಹವಾಲು ಸ್ವೀಕಾರ;**ಕಚೇರಿ ಕೆಲಸದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ.*

*ಧಾರವಾಡ ತಹಸಿಲ್ದಾರ ಕಚೇರಿಗೆ ಬೇಟಿ; ಸಾರ್ವಜನಿಕರಿಂದ ಅಹವಾಲು ಸ್ವೀಕಾರ;*
*ಕಚೇರಿ ಕೆಲಸದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ.*
*ಧಾರವಾಡ (ಕ.ವಾ) ನ.15:* ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಇಂದು ಸಂಜೆ ಧಾರವಾಡ ತಾಲೂಕು ದಂಡಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ವಿವಿಧ ಗ್ರಾಮಗಳ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಪ್ರತಿಯೊಬ್ಬರಿಂದ ಖುದ್ದು ಅರ್ಜಿ ಪಡೆದು, ವಿವರವಾಗಿ ಮಾಹಿತಿ ಪಡೆದು ಪರಿಹಾರ ತಿಳಿಸಿದರು.

ಮಾದನಭಾವಿ ಗ್ರಾಮದಲ್ಲಿ ಗ್ರಾಮಸೇವಕ ಮನೆಹಾನಿ ಕುರಿತು ಫಲಾನುಭವಿಗಳಿಗೆ ಕೆಟಗೇರಿ ಮಾಡಿಸುತ್ತೇನೆ ಎಂದು ಹೇಳಿ ಹಣ ಪಡೆದು, ನಂತರ ಅವನು ಹೇಳಿದ ಕೆಟಗೇರಿ ಆಗದಿದ್ದರಿಂದ ಮರಳಿ ಫಲಾನುಭವಿಗೆ ಹಣ ವಾಪಸ್ ನೀಡಿರುವ ಕುರಿತು ದೂರು ಬಂದಿದ್ದು, ಅದನ್ನು ಅಧಿಕಾರಿಗಳಿಂದ ತನಿಖೆ ಮಾಡಲಾಗುವುದು. ತಪ್ಪು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು. 
ಸಾರ್ವಜನಿಕರು ಸಲ್ಲಿಸುವ ಎಲ್ಲ ಅರ್ಜಿಗಳನ್ನು ಸಕಾಲದಲ್ಲಿ ನಿಗಿಧಿಪಡಿಸಿದ ಅವಧಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಭೂಮಿ ವಿಭಾಗದಲ್ಲಿ ಧಾರವಾಡ ಜಿಲ್ಲೆ ಸತತವಾಗಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ವಿಳಂಬತೆ ಕುರಿತು ದೂರು ಬಂದಲ್ಲಿ‌ ಪರಿಶೀಲಿಸಲಾಗುವುದು ಎಂದರು.
   
ಮಳೆಹಾನಿಯಿಂದ ಮನೆಹಾನಿ ಹಾಗೂ ಪರಿಹಾರ ಜಮೆ ಕುರಿತು ಯಾದವಾಡ, ಮುಳಮುತ್ತಲ, ಮಾದನಭಾವಿ, ನಿಗದಿ, ಹೆಬ್ಬಳ್ಳಿ, ಅಮ್ಮಿನಭಾವಿ ಮತ್ತು  ಕೊಪ್ಪದಕೇರಿಯಲ್ಲಿರುವ ಪಾಲಿಕೆ ಉದ್ಯಾನವನಕ್ಕೆ ಮೂಲ ಸೌಕರ್ಯ  ಕಲ್ಪಿಸುವುದು, ಹೊಸಯಲ್ಲಾಪುರ ವ್ಯಾಪ್ತಿಯಲ್ಲಿ ಪೋಡಿ ಮಾಡುವಲ್ಲಿನ ವಿಳಂಬತೆ ಕುರಿತು, ಕಲ್ಲೆ ಗ್ರಾಮ ಸರ್ವೆ ನಂಬರಗಳ ದಾಖಲೆ ಸರಿಪಡಿಸುವ ಕುರಿತು, ರಾಜೀವಗಾಂಧಿ ಕುಟುಂಬ ಕಲ್ಯಾಣ ಯೋಜನೆ ಪರಿಹಾರ ವಿಳಂಬತೆ, ಜಮೀನು ಖಾತಾ ಬದಲಾವಣೆ ಮುಂತಾದ ವಿಷಯಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು.
ವಿವಿಧ ಗ್ರಾಮಗಳ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಕಂದಾಯ ಹಾಗೂ ಇತರ ವಿಷಯಗಳ ಕುರಿತು ಅಹವಾಲು ಸಲ್ಲಿಸಿದರು. ಪರಿಶೀಲಿಸಿ, ಸೂಕ್ತ ಕ್ರಮ ಜರುಗಿರುವ ಮತ್ತು ಪರಿಹರಿಸುವ ಕುರಿತು ಜಿಲ್ಲಾಧಿಕಾರಿಗಳು ತಿಳಿಸಿದರು.

ನಂತರ ಅವರು ತಹಸಿಲ್ದಾರ ಕಚೇರಿಯ ವಿವಿಧ ಶಾಖೆಗಳಿಗೆ ಭೇಟಿ ನೀಡಿ, ವಿವಿಧ ಯೋಜನೆಗಳ ಕಡತ ಪರಿಶೀಲಿಸಿದರು. ವಿಷಯ ನಿರ್ವಾಹಕರಿಂದ ಮಾಹಿತಿ ಪಡೆದು, ವಿಷಯ ನಿರ್ವಹಣೆ, ಕಾರ್ಯದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಮತ್ತು ತಹಸಿಲ್ದಾರ ಸಂತೋಷ ಹಿರೇಮಠ ಹಾಗೂ ಕಚೇರಿ ಸಿಬ್ಬಂದಿಯನ್ನು ಅಭಿನಂದಿಸಿದರು.

 ಸಾರ್ವಜನಿಕರ ಸಮಸ್ಯೆ, ಅಹವಾಲುಗಳಿಗೆ ತಕ್ಷಣ ಸ್ಪಂದಿಸಿ, ಜಿಲ್ಲಾ ಹಾಗೂ ತಾಲೂಕು ಆಡಳಿದ ಬಗ್ಗೆ ಸಾರ್ವಜನಿಕರ ವಿಶ್ವಾರ್ಹತೆಯನ್ನು ಇನ್ನಷ್ಟು ಹೆಚ್ಚಿಸಲು ಪ್ರಯತ್ನಿಸಬೇಕೆಂದು ಸಿಬ್ಬಂದಿಗಳಿಗೆ ತಿಳಿಸಿದರು.

ತಹಸಿಲ್ದಾರ ಸಂತೋಷ ಹಿರೇಮಠ ಅವರು ಸಾರ್ವಜನಿಕ ಅಹವಾಲು ಸಲ್ಲಿಕೆ ಮತ್ತು ಕಚೇರಿ ಕಾರ್ಯಗಳ, ವಿವಿಧ  ಯೋಜನೆಗಳ ಪ್ರಗತಿ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದರು. ಪ್ರೊಬೇಷನರಿ ಎಸಿ ಅನುರಾಧಾ ವಸ್ರ್ತದ, ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕಿ ತನ್ವಿನ್ ಡಾಂಗಿ, ಸರ್ವೆ ಸಹಾಯಕ ಬಿ.ಎಚ್.ಮಾರುತಿ, ತಹಸಿಲ್ದಾರ ಕಚೇರಿ ಗ್ರೇಡ್ 2 ತಹಸಿಲ್ದಾರ ಹಣಮಂತ ಕೊಚ್ಚರಗಿ ಭಾಗವಹಿಸಿದ್ದರು.

ತಹಸಿಲ್ದಾರ ಕಚೇರಿಯ ಉಪ ತಹಸಿಲ್ದಾರರಾದ ಮಂಜುನಾಥ ಗೂಳಪ್ಪನವರ, ರಮೇಶ ಬಂಡಿ, ಕಚೇರಿ ಶಿರಸ್ತೆದಾರ ಪ್ರವೀಣ ಪೂಜಾರ, ಕಂದಾಯ ನಿರೀಕ್ಷಕರಾದ ಗುರು ಸುಣಗಾರ, ಸಂಪತ್ತಕುಮಾರ  ಗುರುವಡೆಯರ, ಐ.ಎಪ್.ಐಯ್ಯನಗೌಡರ  ಸೇರಿದಂತೆ ತಹಸಿಲ್ದಾರ ಕಚೇರಿಯ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.
ನವೀನ ಹಳೆಯದು

نموذج الاتصال