ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಅನಾರೋಗ್ಯದ ಕುರಿತು ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಧಾರವಾಡ: ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಅವರ ಅನಾರೋಗ್ಯದ ವಿಚಾರ ನನಗೆ ಮೊನ್ನೆಯಷ್ಟೆ ಗೊತ್ತಾಗಿದೆ. ಈಗ ಅವರ ಅನಾರೋಗ್ಯದ ಕುರಿತು ಸೊಸಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳನ್ನು ಹರಿಬೀಡಲಾಗುತ್ತಿದ್ದು, ಹೀಗೆ ಮಾಡುವುದು ಸರಿಯಲ್ಲ. ಟ್ರೋಲ್ ಮಾಡುವುದು ಹಾಗೂ ವದಂತಿಗಳನ್ನು ಹಬ್ಬಿಸುವುದನ್ನು ಯಾರು ಕೂಡಾ ಮಾಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಕೂಡಾ ಮಾಮನಿಯವರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದ್ದೇನೆ. ಆದರೆ, ಅವರ ಮೊಬೈಲ್ ಸ್ವಿಚ್ ಆಫ್ ಇದೆ. ಅವರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡುತ್ತೇನೆ. ಜೊತೆಗೆ ಈಗಾಗಲೇ ಮಾಮನಿಯವರು ತಮ್ಮ ಆರೋಗ್ಯದ ಕುರಿತು ಹೇಳಿಕೆ ನೀಡಿ ಸ್ಪಷ್ಟಪಡಿಸಿದ್ದಾರೆ. ಯಾರಿಗೆ ಯಾವಾಗ ಏನು ಆಗುತ್ತದೆಯೋ ಗೊತ್ತಿಲ್ಲ. ಚೆನ್ನಾಗಿದ್ದವರೇ ಕುಸಿದು ಬಿದ್ದು ತೊಂದರೆಯಾಗಿರುವ ಹಲವು ಉದಾಹರಣೆಗಳು ಇವೆ. ನಾವು ಕೂಡ ಮಾಮನಿ ಅವರ ಆರೋಗ್ಯ ಸುಧಾರಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋಣ ಎಂದರು.
ಉಮೇಶ್ ಕತ್ತಿ ಅವರ ಅಕಾಲಿಕ ನಿಧನ ಆಘಾತ ತಂದಿದೆ. ಅವರೊಬ್ಬ ಉತ್ತರ ಕರ್ನಾಟಕದ ಬಗ್ಗೆ ಕಳಕಳಿ ಹೆಚ್ಚಿನ ಕಾಳಜಿ ಇದ್ದಂತಹ ವ್ಯಕ್ತಿಯಾಗಿದ್ದರು. ಅವರ ಅಗಲಿಕೆಯಿಂದ ನಮ್ಮ ಪಕ್ಷಕ್ಕೆ, ಹಾಗೂ ಆ ಭಾಗಕ್ಕೆ ತೀವ್ರ ನಷ್ಟ ಉಂಟಾಗಿದೆ. ಅವರ ಜಾಗಕ್ಕೆ ನಾವು ಒಳ್ಳೆಯ ಕಾರ್ಯಕರ್ತರನ್ನು ಹುಡುಕುತ್ತೇವೆ. ಅಭಿವೃದ್ಧಿ ವಿಷಯದಲ್ಲಿ ಕತ್ತಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಂತಹ ವ್ಯಕ್ತಿಯನ್ನೇ ನಾವು ಹುಡುಕುತ್ತೇವೆ. ಟಿಕೆಟ್ ಕೊಡುವ ವಿಚಾರದ ಬಗ್ಗೆ ಇಷ್ಟು ಬೇಗ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಬಗ್ಗೆ ನಾನು ಸಿಎಂ ಜೊತೆಗೆ ಮಾತನಾಡಿದ್ದೇನೆ. ಬಡವರ ಮನೆಯಷ್ಟೇ ತೆರವು ಮಾಡುತ್ತಿದ್ದಾರೆ ಎಂದು ದೂರು ಇದ್ದಲ್ಲಿ ಬಿಬಿಎಂಪಿಗೆ ದೂರು ಕೊಡಲಿ. ಸರ್ಕಾರ ಹಾಗೂ ಬಿಬಿಎಂಪಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.