ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿಜ್ಞಾನ ತಂತ್ರಜ್ಞಾನಕ್ಕೆ ಒತ್ತು*:*ರಾಷ್ಟ್ರಪತಿ ದ್ರೌಪದಿ ಮುರ್ಮು*

*ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿಜ್ಞಾನ ತಂತ್ರಜ್ಞಾನಕ್ಕೆ ಒತ್ತು*
:*ರಾಷ್ಟ್ರಪತಿ ದ್ರೌಪದಿ ಮುರ್ಮು*
*ಧಾರವಾಡ (ಕರ್ನಾಟಕ ವಾರ್ತೆ)ಸೆ.26*: ಸದೃಢ ಭಾರತ ನಿರ್ಮಾಣಕ್ಕಾಗಿ ಯುವ ಪೀಳಿಗೆಗೆ ಅನುಕೂಲವಾಗುವಂತೆ 2020 ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು ಕೃತಕ ಬುದ್ಧಿಮತ್ತೆ, ಐಟಿಬಿಟಿ, ನ್ಯಾನೊ ತಂತ್ರಜ್ಞಾನ ಸಂಶೋಧನಾ ಅಭಿವೃದ್ಧಿಯಿಂದಾಗಿ ದೇಶವು ಜಾಗತಿಕ ಮಟ್ಟದಲ್ಲಿ ಸಮೃದ್ಧವಾಗಲಿದೆ ಎಂದು ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ತಿಳಿಸಿದರು.
ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಐಐಐಟಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಬೆಂಗಳೂರಿನ ಸಿಲಿಕಾನ್ ಸಿಟಿ ಸಮೀಪವಿರುವ ಧಾರವಾಡದ ಐಐಐಟಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ತಂತ್ರಜ್ಞಾನಿಗಳನ್ನು ರೂಪಿಸಲೆಂದು ಆಶಯ ವ್ಯಕ್ತಪಡಿಸಿದರು. ಜ್ಞಾನದಿಂದ ವಿಕಾಸ ಪ್ರಗತಿ ಸಾಧ್ಯವೆಂದ ರಾಷ್ಟ್ರಪತಿಗಳು ಭಾರತವು ವಿಶ್ವಗುರು ಸ್ಥಾನ ಪಡೆಯಲಿದೆ ಎಂದರು. ಈ ಹಿನ್ನಲೆಯಲ್ಲಿ ಯುವಜನಾಂಗಕ್ಕೆ ಕೌಶಲ್ಯಭರಿತ ತಂತ್ರಜ್ಞಾನವನ್ನು ಒದಗಿಸುವ ಅಗತ್ಯವಿದೆ. ಜಾಗತಿಕ ಮಟ್ಟದಲ್ಲಿ ಅನೇಕ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕೆಂದೆ ಡಾಟಾ ವಿಜ್ಞಾನ, ಕೃತಕ ಬುದ್ಧಿಮತ್ತೆಯಂತಹ ಹೊಸ ಆವಿಷ್ಕಾರ ಸಂಶೋಧನೆಗಳಿಂದ ದೇಶವು ಅಭಿವೃದ್ಧಿಯತ್ತ ಸಾಗಲಿದೆ ಎಂದರು.
ಧಾರವಾಡದ ಐಐಐಟಿ ಈಗಾಗಲೇ ಹುಮನಾಯ್ಡ ರೋಬೋಟ್ ತಯಾರಿಸುತ್ತಿದ್ದು, ವಿವಿಧ ಭಾಷಾ ಅನುವಾದ ಮಾಡುತ್ತಿರುವ ಬಗ್ಗೆ ಕೇಳಿ ಸಂತಸ ವ್ಯಕ್ತಪಡಿಸಿದರು. ಸುಧಾಮೂರ್ತಿಯವರು ಅಧ್ಯಕ್ಷೆಯಾಗಿರುವ ಈ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳಿಗೂ ಉನ್ನತ ಶಿಕ್ಷಣ ಹಾಗೂ ಸ್ಥಾನಮಾನ ದೊರೆಯುತ್ತಿರುವುದು ಸಂತಸ ತಂದಿದೆ ಎಂದು ರಾಷ್ಟ್ರಪತಿ ಮುರ್ಮು ಅವರು ತಿಳಿಸಿದರು. 
ರಾಜ್ಯಪಾಲರಾದ ಥಾವರಚಂದ ಗೆಹ್ಲೊಟ್ ಮಾತನಾಡಿ, ಇತರೆ ತಂತ್ರಜ್ಞಾನಗಳಂತೆ ಮಾಹಿತಿ ತಂತ್ರಜ್ಞಾನವು ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚಿನ ಮಹತ್ವ ಪಡೆದಿದೆ. ಕರ್ನಾಟಕ ರಾಜ್ಯವು ದೇಶದ ಐಟಿ-ಹಬ್ ಎಂದೇ ಕರೆಯಲಾಗುತ್ತಿದೆ. ಧಾರವಾಡದಲ್ಲಿ ಕೃಷಿ, ಮೆಡಿಕಲ್, ಇಂಜಿನಿಯರಿಂಗ್ ಸೇರಿದಂತೆ ಮಾಹಿತಿ ತಂತ್ರಜ್ಞಾನವು ಸಹ ದಾಪುಗಾಲು ಹಾಕುತ್ತಿರುವುದು ಪ್ರಶಂಸನೀಯ ಎಂದರು. 
ಮಾಹಿತಿ ತಂತ್ರಜ್ಞಾನ ಸಮಾಜದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಪುರಾತನ ಕಾಲದಲ್ಲಿ ಭಾರತವು ವಿಶ್ವಗುರುವಾಗಿತ್ತು. ಈಗ ಮತ್ತೆ ವಿಶ್ವಗುರು ಎನಿಸಿಕೊಳ್ಳುವಲ್ಲಿ ಪ್ರಧಾನಮಂತ್ರಿ ಮೋದಿಜಿಯವರ ಸಾರಥ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು. ಆತ್ಮನಿರ್ಭರ ಭಾರತ ಮಾಡುವಲ್ಲಿ ನಾವೆಲ್ಲರೂ ಪಾಲ್ಗೊಳ್ಳಬೇಕಾಗಿದೆ. ಶ್ರೇಷ್ಠ ಭಾರತ ನಿರ್ಮಿಸುವಲ್ಲಿ ಮೋದಿಜಿಯವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕೆಂದರು. ವಸುದೈವ ಕುಟುಂಬಕಂ, ಸರ್ವೇ ಜನ ಸುಖಿನೋ ಭವಂತು ಎಂಬ ಬುನಾದಿ ಹಾಕಿದ ಭಾರತೀಯ ಸಂಸ್ಕøತಿಕ ಪರಂಪರೆ ಧ್ಯಾನ, ಯೋಗಜ್ಞಾನ, ವಿಜ್ಞಾನ ತಂತ್ರಜ್ಞಾನದಿಂದ ಅಭಿವೃದ್ಧಿಯಾಗಲಿದೆ ಎಂದು ರಾಜ್ಯಪಾಲರು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಭಾರತ ದೇಶ ಹಾಗೂ ಕನ್ನಡ ನಾಡಿಗೆ ಇಂದು ರಾಷ್ಟ್ರಪತಿಯವರು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು ಲೋಕಾರ್ಪಣೆ ಮಾಡಿರುವುದು ಐತಿಹಾಸಿಕ ಸಂಗತಿಯಾಗಿದೆ. ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ತಮ್ಮ ಆದರ್ಶದಿಂದಲೇ ರಾಷ್ಟ್ರಪತಿಯಂತಹ ಉನ್ನತ ಹುದ್ದೆಗೆ ಏರಿದ್ದರೆ ಇದು ನಮಗೆಲ್ಲರಿಗೂ ಪ್ರೇರಣಾದಾಯಕವಾಗಿದೆ. ವಿಜ್ಞಾನವು ಮಾನವನ ಅಭಿವೃದ್ಧಿ, ಮಾನವೀಯತೆ ಗುಣಗಳಿಗೆ ಪ್ರೋತ್ಸಾಹ ನೀಡಬೇಕು. ಸಂಶೋಧನೆಗಳು ಮಾನವ ಕುಲದ ಅಭಿವೃದ್ಧಿಗೆ ಪೂರಕವಾಗಿರಬೇಕು. ಮಾನವ ತಂತ್ರಜ್ಞಾನ ಭಾವನೆಗಳು ಎಲ್ಲ ತಂತ್ರಜ್ಞಾನಗಳಿಗೆ ಮೂಲಬೇರು. ಭಾವನೆಗಳಿಂದ ಉದ್ಘಾರ, ಭಾಷೆ, ಸಾಹಿತ್ಯ, ಜ್ಞಾನ, ವಿಜ್ಞಾನ, ತಂತ್ರಜ್ಞಾನ, ತಂತ್ರಾಂಶ ಜ್ಞಾನ, ಹಂತ ಹಂತವಾಗಿ ವಿಕಸನಗೊಂಡಿದೆ. ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ ಮೊದಲಾದ ವೈಜ್ಞಾನಿಕ ಸಂಶೋಧನೆಗಳು ನಮ್ಮ ಬದುಕಿನ ಸರ್ವಾಂಗೀಣ ಸುಧಾರಣೆಗೆ ಸಹಕಾರಿ. ಅಭಿವೃದ್ಧಿಶೀಲ ಭಾರತದ ಸಾಮಥ್ರ್ಯ ಮಾನವ ಸಂಪನ್ಮೂಲವೇ ಆಗಿದೆ. ಈ ಸಾಮಥ್ರ್ಯ ಬಲಪಡಿಸಬೇಕು. ಪ್ರಧಾನಮಂತ್ರಿಯವರು ಈ ನಿಟ್ಟಿನಲ್ಲಿ ಸಾಕಷ್ಟು ಆದ್ಯತೆ ನೀಡಿದ್ದಾರೆ. ಜನಸಂಖ್ಯೆಯನ್ನು ವರವಾಗಿ ಪರಿವರ್ತಿಸಿಕೊಳ್ಳಬೇಕು. ಶೇ.46 ಯುವ ಜನರ ಶಕ್ತಿ ನಮ್ಮಲ್ಲಿದೆ. ಐಐಐಟಿ ಭಾರತದ ಭವಿಷ್ಯವಾಗಿದೆ. ದೇಶದ ಅತ್ಯುತ್ತಮ ಸಂಸ್ಥೆಗಳಲ್ಲಿ ಇದು ಒಂದಾಗಿ ಬೆಳೆಯಬೇಕು. ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಬೇಕು ಎಂದರು.
ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡಿ, 2015ರಲ್ಲಿ ಧಾರವಾಡ ಐಐಐಟಿಗೆ ಮಂಜೂರಿ ಪಡೆಯಲಾಗಿತ್ತು. 2016ರಿಂದ ಕ್ಲಾಸ್‍ಗಳು ಆರಂಭಗೊಂಡಿದ್ದವು. ಸುಧಾಮೂರ್ತಿಯವರು ಇನ್ಫೋಸಿಸ್‍ನಿಂದಲೂ ದೇಣಿಗೆ ನೀಡಿದ್ದಾರೆ. ಶಾಶ್ವತ ಕ್ಯಾಂಪಸ್‍ಗಾಗಿ ಇಲ್ಲಿನ ರೈತರು ಸಹಕಾರ ನೀಡಿದ್ದಾರೆ. 2019ರಲ್ಲಿ ಪ್ರಧಾನ ಮಂತ್ರಿಗಳು ಧಾರವಾಡ ಐಐಐಟಿ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿದ್ದರು. ನಾವು ಶಿಲಾನ್ಯಾಸ ಮಾಡಿದ್ದು, ನಮ್ಮ ಐದು ವರ್ಷದ ಅವಧಿಯಲ್ಲೇ ಉದ್ಘಾಟನೆ ಆಗಬೇಕು ಅಂತಾ ಪ್ರಧಾನಿ ಹೇಳಿದ್ದರು. ಐಐಐಟಿ ಜೊತೆಗೆ ಧಾರವಾಡ ಐಐಟಿಗೂ ಪ್ರಧಾನಿ ಶಿಲಾನ್ಯಾಸ ಮಾಡಿದ್ದರು. ಇದೇ ಡಿಸೆಂಬರ್‍ನಲ್ಲಿ ನಾವು ಐಐಟಿ ಸಹ ಉದ್ಘಾಟನೆ ಮಾಡುತ್ತೇವೆ ಎಂದು ಅವರು ಹೇಳಿದರು.
ದೇಶಕ್ಕೆ ಗುಣಮಟ್ಟದ ಶಿಕ್ಷಣ ಸಂಸ್ಥೆ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಧ್ಯೇಯ. ಮೊದಲು 9 ಐಐಐಟಿ ಇದ್ದವು ಈಗ 25 ಐಐಐಟಿಗಳಾಗಿವೆ. ಮೊದಲು 16 ಐಐಟಿ ಇದ್ದವು ಈಗ 23 ಐಐಟಿ ಆಗಿವೆ. ಇದೇ ರೀತಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನೂ ಬೆಳೆಸುತ್ತಿದ್ದೇವೆ. ಹಳ್ಳಿ ಹಳ್ಳಿಗೂ ನಾವು ಮಾಹಿತಿ ತಂತ್ರಜ್ಞಾನ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. ಮತ್ತು ನಾವು ಸಾಮಾಜಿಕ ಸೇವೆಗಳನ್ನು ನೇರವಾಗಿ ನೀಡುತ್ತಿದ್ದೇವೆ. ಇದೇ ತಂತ್ರಜ್ಞಾನ ಮೂಲ. ನೇರವಾಗಿ ಫಲಾನುಭವಿಗಳಿಗೆ ಸೇವೆ ನೀಡುತ್ತಿದ್ದೇವೆ. ಈಗ ದೇಶದಲ್ಲಿ ಮಾಹಿತಿ ತಂತ್ರಜ್ಞಾನದಿಂದ ಬದಲಾವಣೆ ಆಗುತ್ತಿದೆ. ಕೋವಿಡ್ ಬಳಿಕ ಅರ್ಥಿಕ ನಿರ್ವಹಣೆಯಲ್ಲಿ ನಮ್ಮ ದೇಶ ಸಾಧನೆ ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಧಾರವಾಡ ಐಐಐಟಿಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷೆ ಡಾ.ಸುಧಾ ಮೂರ್ತಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ,  ಧಾರವಾಡದ ಹಿರಿಮೆಗೆ ಮತ್ತೊಂದು ಗರಿ ಪ್ರತಿಷ್ಠಿತ ರಾಷ್ಟ್ರ ಮಟ್ಟದ ಶಿಕ್ಷಣ ಸಂಸ್ಥೆಯಾದ ಧಾರವಾಡ ಭಾರತೀಯ ಮಾಹಿತಿ ತಂತ್ರಜ್ಞಾನ  ಸಂಸ್ಥೆ (ಐಐಐಟಿ) ಆಗಿದೆ. 2015ರಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಿಪಿಪಿ) ಆಧಾರದ ಮೇಲೆ ಸ್ಥಾಪನೆಯಾಗಿರುವ ಈ ಐಐಐಟಿಗೆ ಒಟ್ಟು ರು. 128 ಕೋಟಿ ವೆಚ್ಚದಲ್ಲಿ ನೂತನ ಕ್ಯಾಂಪಸ್ ನಿರ್ಮಾಣವಾಗಿದೆ. ಒಟ್ಟು 1200 ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಎಲ್ಲ ಸೌಕರ್ಯ ನಿರ್ಮಿಸಲಾಗಿದೆ. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಡಾಟಾ ಸೈನ್ಸ್ ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್‍ನಲ್ಲಿ ಬಿ.ಟೆಕ್ ಕೋರ್ಸುಗಳು ಕ್ರಮವಾಗಿ 150, 75 ಹಾಗೂ 75 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ, ಪಿಎಚ್ ಡಿ ವಿದ್ಯಾರ್ಥಿಗಳಿಗೂ ಅವಕಾಶ ನೀಡಲಾಗಿದೆ. ಸುಮಾರು 61 ಎಕರೆ ಭೂಮಿಯಲ್ಲಿ ಸುಸಜ್ಜಿತ ಕ್ಯಾಂಪಸ್, ಗ್ರಂಥಾಲಯ, ವಿದ್ಯಾರ್ಥಿನಿಯರ ಹಾಸ್ಟೇಲ್ ನಿರ್ಮಿಸಲಾಗಿದೆ. ಸಂಸ್ಥೆಯಲ್ಲಿ ಉನ್ನತ ಅರ್ಹತೆ ಹೊಂದಿರುವ 36 ಬೋಧಕರು ಹಾಗೂ 29 ಶಿಕ್ಷಕೇತರ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ಧಾರವಾಡ ಐಐಐಟಿ ಸ್ಥಾಪನೆಯಾಗಿ ಅಗಾಧವಾಗಿ ಬೆಳೆಯಲು ತಮ್ಮದೆ ಆದ ಕೊಡುಗೆ ನೀಡಿರುವ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಮತ್ತು ಸ್ಥಳೀಯ ಜಿಲ್ಲಾಡಳಿತವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ ಬಸಪ್ಪ, ಸಕ್ಕರೆ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ರೈತರು, ವಿವಿಧ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ವಿಶ್ವ ವಿದ್ಯಾಲಯಗಳ ಪ್ರಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

**********
ನವೀನ ಹಳೆಯದು

نموذج الاتصال