*ಶಿಕ್ಷಕ ವೃತ್ತಿ ಶ್ರೇಷ್ಠ; ಎಲ್ಲರೂ ಸಮರ್ಪಣಾ ಭಾವದಿಂದ ತೊಡಗಿಸಿಕೊಂಡು ಸದೃಡ ರಾಷ್ಟ್ರ ನಿರ್ಮಾಣಕ್ಕೆ ತಮ್ಮ ಸೇವೆ ಸಲ್ಲಿಸಬೇಕು: ಬಸವರಾಜ ಹೊರಟ್ಟಿ*
*ಧಾರವಾಡ (ಕ.ವಾ)ಸೆ.05:* ಸದೃಡ, ಸುಸಂಸ್ಕೃತ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಕರ ಪಾತ್ರ ಮುಖ್ಯವಾಗಿದೆ. ಪ್ರತಿಯೊಬ್ಬ ಶಿಕ್ಷಕರು ಸಮರ್ಪಣಾ ಭಾವದಿಂದ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ಹಾಲಿ ಸದಸ್ಯರಾಗಿರುವ ಬಸವರಾಜ ಹೊರಟ್ಟಿ ಅವರು ಹೇಳಿದರು.
ಅವರು ಇಂದು ಸಂಜೆ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಶಿಕ್ಷಕರ ದಿನೋತ್ಸವ ಸಮಿತಿಯ ಸಂಯುಕ್ತವಾಗಿ ಆಯೋಜಿಸಿದ್ದ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನೋತ್ಸವ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು.
ಸಾಧಕ ಶಿಕ್ಷಕರನ್ನು ಒಂದೆಡೆ ಸೇರುವ ಸುಸಂದರ್ಭ ಸೃಷ್ಟಿ ಮಾಡಿದ ಕೀರ್ತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಸಲ್ಲುತ್ತದೆ. ಭಾರತದ ಶೈಕ್ಷಣಿಕ ಚರಿತ್ರೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್, ಮಾತೆ ಸಾವಿತ್ರಿಬಾಯಿ ಪುಲೆ ಮತ್ತು ಪಾತಿಮಾ ಅವರು ಹೆಸರು ಚಿರಾಯುವಾಗಿದೆ.
ಶಿಕ್ಷಕ ವೃತ್ತಿ ಶ್ರೇಷ್ಠ ವಾದದ್ದು. ಸದೃಡ, ಸುಸಂಸ್ಕೃತ ರಾಷ್ಟ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ವೃತ್ತಿಗೆ ಕಳಂಕ ಬರದಂತೆ ಶಿಕ್ಷಕ ಸಮುದಾಯ ಸೇವೆ ಸಲ್ಲಿಸಬೇಕು ಎಂದು ಬಸವರಾಜ ಹೊರಟ್ಟಿ ಅವರು ಹೇಳಿದರು.
ಸರಕಾರಗಳು ಶಿಕ್ಷಕ ಸಮುದಾಯ ನೆಮ್ನದಿ, ಸುಖ, ಸಂತೋಷದಿಂದ ಕರ್ತವ್ಯ ನಿರ್ವಹಿಸುವ ವಾತಾವರಣ ಮೂಡಿಸಬೇಕು. ಅವರಿಗೆ ಸಿಗುವ ಸೌಲಭ್ಯಗಳನ್ನು ಕಾಲಕಾಲಕ್ಕೆ ನೀಡಬೇಕೆಂದು ಅಚರು ಹೇಳಿದರು.
ರಾಜ್ಯದಲ್ಲಿ 90 ಸಾವಿರ ಡಿ,ಎಡ್, 32 ಸಾವಿರ ಬಿ.ಎಡ್,12 ಸಾವಿರ ಎಮ್.ಪಿಎಡ್,ಬಿಪಿಎಡ್ ಪದವಿಧರರು ನಿರುದ್ಯೋಗಿಗಳಾಗಿದ್ದಾರೆ. ಇಂತದರಲ್ಲಿ ತಾವು ಶಿಕ್ಷಕ ವೃತ್ತಿಗೆ ಸೇರಿ, ಸೇವೆ ಸಲ್ಲಿಸುತ್ತಿರುವುದು ಸುದೈವ. ಆದ್ದರಿಂದ ಎಲ್ಲ ಶಿಕ್ಷಕರು ಗುಣಮಟ್ಟದ ಮತ್ತು ನೈತಿಕ ಶಿಕ್ಷಣಕ್ಕೆ ಮತ್ತು ನೂತನ ಕೌಶಲ್ಯಗಳಿಗೆ ಆದ್ಯತೆ ನೀಡಿ ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ಅವರು ಮಾತನಾಡಿ, ಶಿಕ್ಷಕರು ಸಮರ್ಪಣಾ ಭಾವದಿಂದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳನ್ನು ರಾಷ್ಟ್ರಕ್ಕೆ ಆದರ್ಶ ವ್ಯಕ್ತಿಯಾಗಿ, ಮಾದರಿ ನಾಗರಿಕರನ್ನಾಗಿ ರೂಪಿಸಿ ನೀಡಬೇಕು ಎಂದರು.
ಶಿಕ್ಷಕರಿಗೆ ಅಧ್ಯಯನ, ಬೋಧನಾ ಕೌಶಲ್ಯ, ತಾಂತ್ರಿಕ ನೈಪುಣ್ಯತೆ ಇರಬೇಕು. ರಾಜ್ಯ ಸರಕಾರವು ಶಿಕ್ಷಣ ಇಲಾಖೆಗೆ ಹೆಚ್ಚು ಆದ್ಯತೆ ನೀಡಿದೆ. ರೈತರ ಮಕ್ಕಳಿಗೆ ಶಿಷ್ಯವೇತನ, ಬಡ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ, ಶಿಕ್ಷಕರ ನೇಮಕಾತಿ ಸೇರಿದಂತೆ ಅನೇಕ ಪೂರಕ ಕ್ರಮಗಳನ್ನು ಕೈಗೊಂಡಿದೆ ಎಂದರು.
ಕೇಂದ್ರ ಸರಕಾರದ ರಂಗರಾಜನ್ ಶಿಕ್ಷಣ ಸುಧಾರಣಾ ವರದಿ ಪ್ರಕಾರ ರಾಜ್ಯದಲ್ಲಿ ಪ್ರಸಕ್ತ ಸಾಲಿನಿಂದ ಹಂತಹಂತವಾಗಿ ನೂತನ ಶಿಕ್ಷಣ ನೀತಿ ಜಾರಿ ಮಾಡುತ್ತಿದೆ. ಶಿಕ್ಷಕರ ಹಾಗೂ ಸರಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ವೇತನ ಪರಿಷ್ಕರಣೆಗಾಗಿ ನೂತನ ವೇತನ ಆಯೋಗ ರಚನೆ ಮತ್ತು ಎನ್.ಪಿ.ಎಸ್. ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕೆಂಬುದು ನ್ಯಾಯುತವಾಗಿದೆ. ಇದನ್ನು ಜನಪ್ರತಿನಿಧಿಗಳಾಗಿ ನಾವು ಸಹ ಬೆಂಬಲಿಸುತ್ತವೆ. ಈಗಾಗಲೇ ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಕ್ರಮವಹಿಸುತ್ತಿದ್ದಾರೆ ಎಂದು ಎಸ್.ವ್ಹಿ.ಸಂಕನೂರ ಅವರು ಹೇಳಿದರು.
ಕಾರ್ಯಕ್ರಮದ ಸಾನಿದ್ಯವಹಿಸಿದ್ದ ಮುರಘಾಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡೈಟ್ ಪ್ರಾಂಶುಪಾಲರಾದ ಶ್ರೀಮತಿ ಎನ್.ಕೆ.ಸಾವುಕಾರ, ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ,ರವಿಕುಮಾರ ಬಾರಾಟಾಕೆ,ಜಿಲ್ಲಾ ಉಪ ಸಮನ್ವಯಾಧಿಕಾರಿ ಎಸ್.ಎಂ.ಹುಡೆದಮನಿ, ಗಿರೀಶ ಮಠಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ, ಜಿಲ್ಕಾ ವಯಸ್ಜರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಯು.ಎಫ್. ಚುಳಕಿ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ಪ್ರೌಡಶಾಲಾ ಸಹ ಶಿಕ್ಷಕರ ಅಧ್ಯಕ್ಷ ಎಫ್.ವ್ಹಿ.ಮಂಜನ್ನವರ, ಕಾರ್ಯದರ್ಶಿ ಬಿ.ಜಿ.ಬಸೆಟ್ಟಿ, ತಾಲೂಕಾ ಅಧ್ಯಕ್ಷೆ ಶಾಂತಾ ಶೀಲವಂತರ ಸೇರಿದಂತೆ ಶಿಕ್ಷಕರ ಸಂಘದ ವಿವಿಧ ಪದಾಧಿಕಾರಿಗಳು, ಇಲಾಖೆ ಅಧಿಕಾರಿಗಳು, ಶಿಕ್ಷಕ,ಶಿಕ್ಷಕಿಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಹಾಗೂ 2020-21 ನೇ ಸಾಲಿನ ರಾಜ್ಯ ಪ್ರಶಸ್ತಿ ವಿಜೇತ ಮಾರುತಿ ಹಣಮಂತಪ್ಪ ಭಜಂತ್ರಿ, ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೆತರನ್ನು ಹಾಗೂ 2021-22ನೇ ಸಾಲಿನಲ್ಲಿ ನಿವೃತ್ತರಾದ ಉಪನ್ಯಾಸಕರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಹೆಮಂತ ಲಮಾಣಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ರೇಖಾ ಎನ್.ಭಜಂತ್ರಿ ಹಾಗೂ ಪ್ರಕಾಶ ಭೂತಾಳಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ ವಂದಿಸಿದರು.