ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಉಚಿತ ಕಾನೂನು ಅರಿವು- ನೆರವು ನೀಡುವ ಕಾರ್ಯಕ್ರಮ

*ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ*
             *ಪ್ಯಾನಲ್ ವಕೀಲರು ಪ್ರಾಧಿಕಾರದ ಪಂಚೆಂದ್ರೀಯ ಇದ್ದಂತೆ;*
       *ಬಡವರ ಬಾಗಿಲಿಗೆ ನ್ಯಾಯದೇವತೆ ತಲುಪಿಸುವ ಬದ್ದತೆ ಇರಲಿ:* 
      - *ನ್ಯಾಯಾಧೀಶ ಕೆ.ಸಿ.ಸದಾನಂದಸ್ವಾಮಿ*
*ಧಾರವಾಡ (ಕರ್ನಾಟಕ ವಾರ್ತೆ) ಆ.09:*  ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಉಚಿತ ಕಾನೂನು ಅರಿವು- ನೆರವು ನೀಡುವ ಕಾರ್ಯಕ್ರಮ ಅತ್ಯಂತ ವಿಶಿಷ್ಟ ಮತ್ತು ಆದರ್ಶವಾಗಿದೆ. ಪ್ಯಾನಲ್ ವಕೀಲರು ಕಾನೂನು ಸೇವೆಗಳ ಪ್ರಾಧಿಕಾರದ ಪಂಚೆಂದ್ರೀಯಗಳಿದ್ದಂತೆ, ನ್ಯಾಯದೇವತೆಯನ್ನು ಬಡವರ, ಅಸಹಾಯಕರ ಮನೆ ಬಾಗಿಲಿಗೆ ತಲುಪಿಸುವ ಬದ್ದತೆ ಪ್ಯಾನಲ್ ವಕೀಲರಿಗೆ ಇರಬೇಕೆಂದು ಎರಡನೇಯ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಕೆ.ಸಿ.ಸದಾನಂದಸ್ವಾಮಿ ಅವರು ಹೇಳಿದರು.

ಅವರು ನಿನ್ನೆ ದಿನ ( ಆ.8) ಬೆಳಿಗ್ಗೆ ನಗರದ ಅಂಬೇಡ್ಕರ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ವಕೀಲರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ವಿವಿಧ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಲು ನೂತನವಾಗಿ ಆಯ್ಜೆಯಾದ ಪ್ಯಾನಲ್ ವಕೀಲರಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.

ಪ್ಯಾನಲ್ ವಕೀಲರಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ಸುದೈವ. ಬಡವರ, ಅಸಹಾಯಕರ ಸೇವೆಗೆ ಒಂದು ಉತ್ತಮ ಅವಕಾಶ. ಬಡವರ, ಅಬಲೆಯರ ಪರವಾಗಿ ನ್ಯಾಯಲಯದಲ್ಲಿ ಪ್ರಕರಣ ದಾಖಲಿಸುವ ಪ್ಯಾನಲ್ ವಕೀಲರು ಕಾಳಜಿ, ಕಳಕಳಿಯಿಂದ ಕೇಸ್ ನಡೆಸಬೇಕು. ಯಾವುದೇ ಹಣ, ಒತ್ತಡ, ಆಮಿಷಗಳಿಗೆ ಒಳಗಾಗದೆ ತಮ್ಮನ್ನು ನಂಬಿರುವ ಕಕ್ಷಿದಾರರಿಗೆ ನ್ಯಾಯ ಕೊಡಿಸಲು ಮುಕ್ತ ಮನಸ್ಸಿನಿಂದ ಪ್ರಯತ್ನಿಸಬೇಕು ಎಂದರು.

 ಪ್ರಾಧಿಕಾರವು ನ್ಯಾಯಾಲಯಗಳಲ್ಲಿ ಕೇಸ್ ನಡೆಸಲು ಗೌರವಧನ ನೀಡುತ್ತದೆ. ಉಳಿದಂತೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪಡೆದು ದಾಖಲಿಸುವ ಕೇಸ್ ಗಳಿಗೆ ಯಾವುದೇ ರೀತಿಯ ಕೊರ್ಟ್ ಫೀ, ಇತರೆ ವೆಚ್ಚ ಇರುವದಿಲ್ಲ. ಆದ್ದರಿಂದ ಕಕ್ಷಿದಾರನ ಅಸಹಾಯಕತೆ, ಮುಗ್ದತೆಯನ್ನು ದುರುಪಯೋಗ ಮಾಡಿಕೊಳ್ಳದೆ ಪ್ರಾಧಿಕಾರ ನೀಡಿರುವ ಅವಕಾಶ ಬಳಸಿಕೊಂಡು ಪ್ರಾಮಾಣಿಕವಾಗಿ ಬಡವರ, ಅಸಹಾಯಕರ ಸೇವೆ ಮಾಡಬೇಕೆಂದು ನ್ಯಾಯಾಧೀಶ ಕೆ.ಸಿ.ಸದಾನಂದಸ್ವಾಮಿ ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೌಟಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶೆ ಎಸ್.ನಾಗಶ್ರೀ ಅವರು ಮಾತನಾಡಿ, ಪ್ಯಾನಲ್ ವಕೀಲರು ಸಾರ್ವಜನಿಕರಿಗೆ ಸೇವಾ ಪ್ರಾಧಿಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಮುಖವಾಗಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಬೇಕು. ನ್ಯಾಯವಾದಿಗಳು ಪ್ರಕರಣದ ವಿಚಾರಣೆಗಳಲ್ಲಿ ತೋರುವ ಆಸಕ್ತಿ, ಚಾಣಾಕ್ಷತೆ ಮತ್ತು ಗಂಭಿರತೆಯು ನ್ಯಾಯಾಲಯದ ವಿಶ್ವಾಸರ್ಹತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

ಅನೇಕರು ನ್ಯಾಯಲಯದ ವೆಚ್ಚದ ಭಯ, ತಿಳುವಳಿಕೆ ಕೊರತೆ ಹಾಗೂ ಇತರ ಕಾರಣಗಳಿಂದ ತಮಗೆ ಆಗುವ ಅನ್ಯಾಯ, ದೌರ್ಜನ್ಯ ಸಹಿಸಿಕೊಂಡು ಸುಮ್ಮನಿರುತ್ತಾರೆ. ಅಂತವರಿಗೆ ನ್ಯಾಯ ಕೊಡಿಸುವ ಮಹತ್ವದ ಜವಾಬ್ದರಿ ಪ್ಯಾನಲ್ ವಕೀಲರ ಮೇಲಿದೆ ಎಂದು ನ್ಯಾಯಾಧೀಶೆ ಎಸ್.ನಾಗಶ್ರೀ ಅವರು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಸದಸ್ಯ ಕಾರ್ಯದರ್ಶಿ ಪುಷ್ಪಲತ ಸಿ.ಎಮ್. ಅವರು ಅವರ ಪ್ರಾಸ್ತಾವಿಕವಾಗಿ ಮಾತನಾಡಿ, ಧಾರವಾಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯ ಹಾಗೂ ವಿವಿಧ ತಾಲೂಕು ನ್ಯಾಯಾಲಯಗಳ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ 125 ಜನ ಪುರುಷ ಹಾಗೂ ಮಹಿಳಾ ನ್ಯಾಯವಾದಿಗಳನ್ನು ಪ್ಯಾನಲ್ ವಕೀಲರಾಗಿ ನೇಮಿಸಿಕೊಳ್ಳ ಲಾಗಿದೆ. 

ಕಾನೂನು ಸೇವಾ ಪ್ರಾಧಿಕಾರದ ಧ್ಯೇಯಗಳನ್ನು ಈಡೇರಿಸುವ ಜವಾಬ್ದರಿ ತಮ್ಮ ಮೇಲೂ ಇದೆ. ನ್ಯಾಯ ಬಯಸುವ ಪ್ರತಿಯೊಬ್ಬರಿಗೂ ನ್ಯಾಯ ಸೀಗುವಂತೆ ಮಾಡುವ ಕಾರ್ಯ ಆಗಬೇಕು. ರಾಜ್ಯದಲ್ಲಿ ಧಾರವಾಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಉತ್ತಮ ಹೆಸರಿದೆ. ಹೆಚ್ಚು ಜನ ಬಡವರು, ಅಸಹಾಯಕರಿಗೆ, ಅಬಲೆಯರಿಗೆ ನ್ಯಾಯ ಕೊಡಿಸುವ ಮೂಲಕ ನ್ಯಾಯಾಂಗದ ಘನತೆಯನ್ನು ಹೆಚ್ಚಿಸೋಣ ಎಂದು ಅವರು ಹೇಳಿದರು.

ಹಿರಿಯ ನ್ಯಾಯವಾದಿ ಸೋಮಶೇಖರ ಜಾಡರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ತರಬೇತಿ ಕಾರ್ಯಾಗಾರದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಸ್.ಬಳ್ಳೊಳ್ಳಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಗಿರೀಶ ಆರ್.ಬಿ., 2ನೇ ಅಧಿಕ ಸಿವಿಲ್ ನ್ಯಾಯಾಧೀಶ ಮೋಹಿತ ಬಿ.ಎಮ್., 3ನೇ ಅಧಿಕ ಸಿವಿಲ್ ನ್ಯಾಯಾಧೀಶ ಇಸ್ಮಾಯಿಲ್ ಜಬಿವುಲ್ಲಾ ಹಾಗೂ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್.ಪೆÇಲೀಸ್ ಪಾಟೀಲ ಅವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿ, ಪ್ಯಾನಲ್ ವಕೀಲರೊಂದಿಗೆ ಸಂವಾದ ನಡೆಸಿದರು.
ತರಬೇತಿ ಕಾರ್ಯಾಗಾರದಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಪ್ಯಾನಲ್ ವಕೀಲರು, ನ್ಯಾಯವಾದಿಗಳು, ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಗಳು ಭಾಗವಹಿಸಿದ್ದರು.
ನವೀನ ಹಳೆಯದು

نموذج الاتصال