*ಹೆಸ್ಕಾಂ ಗ್ರಾಹಕರಿಗೆ ಸೈಬರ್ ವಂಚಕರಿಂದ ನಕಲಿ ಸಂದೇಶಗಳು ಬರುತ್ತಿವೆ; ಪ್ರತಿಕ್ರಿಯಿಸದೇ ಜಾಗೃತರಾಗಲು ಹೆಸ್ಕಾಂ ಮನವಿ*
*ಧಾರವಾಡ(ಕರ್ನಾಟಕ ವಾರ್ತೆ)ಆ.25*: ವಿದ್ಯುತ್ ಬಿಲ್ ಪಾವತಿಸುವಂತೆ ಸಾರ್ವಜನಿಕರಿಗೆ ವಾಟ್ಸ್‍ಪ್ ಮೂಲಕ ಸಂದೇಶಗಳು ಬರುತ್ತಿರುವ ಕುರಿತು ದೂರುಗಳು ಬಂದಿದ್ದು, ಯಾವುದೇ ನಕಲಿ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಹೆಸ್ಕಾಂ ತನ್ನ ಗ್ರಾಹಕರಿಗೆ ಮನವಿ ಮಾಡಿದೆ.
ಈ ಕುರಿತು ಪ್ರಕಟಣೆ ನೀಡಿರುವ ಹೆಸ್ಕಾಂನ ಹುಬ್ಬಳ್ಳಿ ವಿಭಾಗದ ಅಧೀಕ್ಷಕ ಅಭಿಯಂತರರು, ಸೈಬರ್ ವಂಚಕರು ಕಳೆದ ತಿಂಗಳ ನಿಮ್ಮ ವಿದ್ಯುತ್ ಬಿಲ್ ಅಪ್ಡೇಟ್ ಆಗದ ಕಾರಣ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ವಾಟ್ಸ್‍ಪ್ ಮೂಲಕ ತಾವು ನಮೂದಿಸಿರುವ ಸಂಖ್ಯೆಯನ್ನು ಸಂಪರ್ಕಿಸಿ ಎಂದು ನಕಲಿ ಸಂದೇಶ ಕಳುಹಿಸಿ, ವಂಚಿಸುತ್ತಿರುವ ಕುರಿತು ಹೆಸ್ಕಾಂ ಗಮನಕ್ಕೆ ಬಂದಿದೆ. ಸೈಬರ್ ವಂಚಕರು ಆನ್‍ಲೈನ್ ವಹಿವಾಟಿನ ಮೂಲಕ ವಿದ್ಯುತ್ ಬಿಲ್ ಪಾವತಿಸಲು ಗ್ರಾಹಕರ ಮೊಬೈಲ್ ಸಂಖ್ಯೆಗೆ ನಕಲಿ ಲಿಂಕ್ ಕಳುಹಿಸಲಾಗುತ್ತಿದ್ದಾರೆ. ಗ್ರಾಹಕರು ತಮ್ಮ ವಿದ್ಯುತ್ ಬಿಲ್ಲುಗಳನ್ನು ಪಾವತಿಸಲು ಅಪ್ಲಿಕೇಶನ್‍ಗಳನ್ನು ಡೌನ್ಲೋಡ್ ಮಾಡಲು ಸಹ ಕೇಳುತ್ತಿದ್ದಾರೆ. ಗ್ರಾಹಕರು ಪ್ರತಿಕ್ರಿಯಿಸಿದರೆ, ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಜೊತೆಗೆ ಅವರ ಕಂಪ್ಯೂಟರ್, ಮೊಬೈಲ್‍ಗಳನ್ನು ಹ್ಯಾಕ್ ಮಾಡಿ ವಂಚಿಸುತ್ತಾರೆ.
ಹೆಸ್ಕಾಂ ಅಧಿಕಾರಿಗಳು ಅಥವಾ ನೌಕರರು, ಗ್ರಾಹಕರ ಯಾವುದೇ ಬ್ಯಾಂಕ್ ಖಾತೆ, ಡೆಬಿಟ್ ಕಾರ್ಡ್‍ಗಳ ಅಥವಾ ಕ್ರೆಡಿಟ್ ಕಾರ್ಡ್‍ಗಳ ವಿವರಗಳನ್ನು ಎಂದಿಗೂ ಸಂಗ್ರಹಿಸುವುದಿಲ್ಲ. ಬಿಲ್ಲುಗಳ ಪಾವತಿಗಾಗಿ ಕಂಪನಿಯು ಯಾವುದೇ ವೆಬ್‍ಸೈಟ್ ಲಿಂಕ್‍ಗಳನ್ನು ಎಸ್‍ಎಂಎಸ್ ಅಥವಾ ವಾಟ್ಸ್‍ಪ್ ಮೂಲಕ ಕಳುಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಸೈಬರ್ ವಂಚಕರು ಕಳುಹಿಸಿದ ನಕಲಿ ಸಂದೇಶದಲ್ಲಿ ನಮೂದಿಸಲಾದ ಯಾವುದೇ ಸಂಖ್ಯೆಯನ್ನು ಡಯಲ್ ಮಾಡುವುದಾಗಲೀ ಅಥವಾ ಸೈಬರ್ ವಂಚಕರು ಸೂಚಿಸುವ ಯಾವುದೇ ಅಪ್ಲಿಕೇಶನ್ ಡೌನ್ಲೋಡ್ ಆಗಲಿ ಮಾಡಬಾರದು. ಜನರು ಈ ಕುರಿತು ಜಾಗೃತವಹಿಸಬೇಕು ಮತ್ತು ಹೆಸ್ಕಾಂ ಹೆಸರಿನಲ್ಲಿ ಅಪರಿಚಿತ ಮೂಲಗಳಿಂದ ಬಂದ ಯಾವುದೇ ನಕಲಿ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು ಮತ್ತು ಇಂತಹ ಲಿಂಕ್‍ಗಳನ್ನು ಜನರು ಸಂಪೂರ್ಣವಾಗಿ ನಿರ್ಲಕ್ಷಿಸಬೇಕೆಂದು ಗ್ರಾಹಕರಲ್ಲಿ ಅವರು ವಿನಂತಿಸಿದ್ದಾರೆ.
ಗ್ರಾಹಕರು ಆನ್‍ಲೈನ್ ವಿದ್ಯುತ್ ಪಾವತಿಸಲು ಹೆಸ್ಕಾಂನ ಅಧೀಕೃತ ಜಾಲತಾಣದಲ್ಲಿ ನಮೂದಿಸಿದ ಬಿಲ್ ಪಾವತಿ ಮೂಲಕ ಅಥವಾ ಬಿಬಿಪಿಎಸ್ ಅಪ್ಲಿಕೇಶನ್‍ಗಳು ಅಂದರೆ ಪೇಟಿಎಂ, ಫೆÇೀನ್-ಪೇ, ಗೂಗಲ್-ಪೇ ಹಾಗೂ ಅಮೆಜಾನ್-ಪೇ ಮುಖಾಂತರ ಬಿಲ್ಲುಗಳನ್ನು ಪಾವತಿಸಬಹುದು ಎಂದು ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
****************