.ಧಾರವಾಡ: ಸ್ಮಶಾನ ಅಭಿವೃದ್ಧಿ ಕಾಮಗಾರಿ ಆರಂಭಿಸಲು ವಿಳಂಬ ಮಾಡಲಾಗುತ್ತಿದೆ ಎಂದು ಅಸಮಾಧಾನ ಗೊಂಡ ನವಲೂರ ಗ್ರಾಮಸ್ಥರು ಇಂದಿನಿಂದ ಸ್ಮಶಾನದಲ್ಲಿಯೇ ಅನಿರ್ಧಿಷ್ಟ ಧರಣಿ ಆರಂಭಿಸಿದರು.
ಸುಮಾರು ಮೂವತ್ತು ಸಾವಿರ ಜನಸಂಖ್ಯೆ ಇರುವ ನವಲೂರು ಗ್ರಾಮಕ್ಕೆ ಸುಸಜ್ಜಿತ ರುದ್ರಭೂಮಿ ಇಲ್ಲದಾಗಿದೆ. 12 ಎಕರೆ ಜಾಗ ಹಾಗೂ 50ಲಕ್ಷ ಅನುದಾನ ನೀಡಿದ್ದರೂ ಸ್ಮಶಾನದ ಅಭಿವೃದ್ಧಿಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ.
ಗ್ರಾಮದ ಜನರ ಬೇಡಿಕೆಗೆ ಸ್ಪಂದಿಸಿ
2017ರಲ್ಲಿ ಅಂದು ಸಚಿವರಾಗಿದ್ದ ಎಚ್.ಕೆ.ಪಾಟೀಲ ಹಾಗೂ ರುದ್ರಪ್ಪ ಲಮಾಣಿ ಅವರು ಗ್ರಾಮಕ್ಕೆ ಅಗತ್ಯವಾಗಿ ಬೇಕಿರುವ ರುದ್ರಭೂಮಿಗೆ ಜಾಗ ಮಂಜೂರು ಮಾಡಿದ್ದರು. ಬಳಿಕ 50 ಲಕ್ಷ ರೂಪಾಯಿ ಅನುದಾನವನ್ನೂ ಬಿಡುಗಡೆ ಮಾಡಿದ್ದರು. ಗುತ್ತಿಗೆಯನ್ನೂ ನೀಡಿ ಕಾಮಗಾರಿ ಆರಂಭಿಸಬೇಕಿತ್ತು. ಆದರೆ ಎಂಜಿನಿಯರ್‌ಗಳು ಸ್ಥಳದ ಗಡಿಯನ್ನು ಗುರುತಿಸದ ಕಾರಣ ಕಾಮಗಾರಿ ಆರಂಭಗೊಂಡಿಲ್ಲ.
ಸ್ಥಳೀಯ ಶಾಸಕರ ರಾಜಕೀಯದಿಂದ ಅಧಿಕಾರಿಗಳು ಕಾಮಗಾರಿ ಆರಂಭಿಸಲು ವಿಳಂಬ ಮಾಡುತಿದ್ದಾರೆ.
ಈ ಧೋರಣೆಯನ್ನು ಖಂಡಿಸಿ ಧರಣಿ ಆರಂಭಿಸಿದ್ದು, 3-4 ದಿನಗಳಲ್ಲಿ ಕಾಮಗಾರಿ ಆರಂಭಿಸದಿದ್ದರೆ ರಸ್ತೆ ತಡೆ, ಅಮರಣಾಂತ ಉಪವಾಸ ಆರಂಭಿಸುವುದಾಗಿ ಧರಣಿ ನೇತೃತ್ವ ವಹಿಸಿರುವ ಗ್ರಾಮದ ಹಿರಿಯ ಮಹಾವೀರ ಜೈನ್ ಎಚ್ಷರಿಸಿದರು.
ಧರಣಿಯಲ್ಲಿ ಪಾಲ್ಗೊಂಡಿದ್ದ ಪಾಲಿಕೆ ಸದಸ್ಯ ಡಾ.ಮಯೂರ ಮೋರೆ ಮಾತನಾಡಿ,
ಕ್ಷೇತ್ರದ ಶಾಸಕ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವೇನು ಎಂಬುದು ಗೊತ್ತಿಲ್ಲ. ಆದರೆ ಇವರ ಅಲಕ್ಷ್ಯದಿಂದ ಇಡೀ ಗ್ರಾಮದ ಜನರು ಪರದಾಡುವಂತಾಗಿದೆ. ಮುಳ್ಳು, ಕಂಟಿ ಬೆಳೆದ ಈ ಜಾಗದಲ್ಲಿ ಮೃತಪಟ್ಟವರನ್ನು ಹೊತ್ತು ಸಾಗುವುದೇ ದುಸ್ತರ. ಈ ಎಲ್ಲಾ ಸಮಸ್ಯೆಗಳು ಗೊತ್ತಿದ್ದರೂ ಯಾರೊಬ್ಬರೂ ಗ್ರಾಮದ ಅಭಿವೃದ್ಧಿಗೆ ಮುಂದಾಗುತ್ತಿಲ್ಲ.
ಇದೇ ಪರಿಸ್ಥಿತಿ ಮುಂದುವರೆದರೆ ಹೋರಾಟ ತೀವ್ರಗೊಳಿಸುವುದಾಗಿ ಹೇಳಿದರು.
ಅಬ್ದುಲಕರೀಮ ಧಾರವಾಡ,
ರಾಘು ಘಾಟಗೆ, ಮಹ್ಮದಹನೀಫ್ ಮಟ್ಟೆಸಾಬನವರ,
ಹಾಸೀಮಸಾಬ ಖಾನ್,ಗಿರೀಶ ಬಡಕುರಿ, ರಾಮಣ್ಣ ಘಾಟಗೆ, ಸುನಂದಾ ಯಡಳ್ಳಿ, ಯಲ್ಲಮ್ಮ ನಿಗದಿ ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.