*ಅ.15 ರಂದು 76 ನೇ ಸ್ವಾತಂತ್ರ್ಯ ದಿನಾಚರಣೆ*
ಧಾರವಾಡ(ಕರ್ನಾಟಕ ವಾರ್ತೆ) ಅ.11:
ಭಾರತ ದೇಶವು ಸ್ವಾತಂತ್ರ್ಯಗಳಿಸಿ ಇದೇ ಅಗಸ್ಟ್ 15 ಕ್ಕೆ 75 ವರ್ಷಗಳು ಪೂರ್ಣಗೊಳ್ಳಲಿವೆ. ಅಂದು 76 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಕಳೆದ ವರ್ಷ 2021 ರ ಅಗಸ್ಟ್ 15 ರಂದು 75 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ, ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ವರ್ಷದುದ್ದಕ್ಕೂ ಈ ಅಮೃತ ಮಹೋತ್ಸವದ ಸವಿನೆನಪಿಗೆ ಅನೇಕ ರಾಷ್ಟ್ರೀಯ ವಿಧಾಯಕ ಕಾರ್ಯಕ್ರಮಗಳನ್ನು ಆಚರಿಸಲಾಗಿದೆ. ಭಾರತ ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯಾದ್ಯಂತ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಜಿಲ್ಲೆಯಾದ್ಯಂತ ಎಲ್ಲ ಮನೆಗಳ ಮೇಲೆಯೂ ಅಗಸ್ಟ್ 13 ರ ಬೆಳಿಗ್ಗೆಯಿಂದ ಅಗಸ್ಟ್ 15 ರ ಸೂರ್ಯಾಸ್ತದವರೆಗೆ ನಿರಂತರವಾಗಿ ಧ್ವಜಾರೋಹಣ ಮಾಡಲು ಜನತೆಗೆ ಮನವಿ ಮಾಡಲಾಗಿದೆ.ಸರ್ಕಾರಿ ಕಟ್ಟಡಗಳ ಮೇಲೆ ಅ.13 ರಿಂದ 15 ರವರೆಗೆ ಪ್ರತಿದಿನ ಬೆಳಿಗ್ಗೆ ಧ್ಜಜಾರೋಹಣ ಸಂಜೆ ಇಳಿಸಲು ಸೂಚಿಸಲಾಗಿದೆ.
1947 ರ ಅಗಸ್ಟ 15 ರಂದು ದೇಶವು ಮೊದಲ ಸ್ವಾತಂತ್ರ್ಯ ದಿನ ಆಚರಿಸಿತು.ಈಗ 75 ವರ್ಷಗಳು ಪೂರ್ಣಗೊಂಡಿವೆ. 2022 ರ ಅಗಸ್ಟ್ 15 ರಂದು 76 ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.