*ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ*
*ಜು.16 ರಂದು ಜಿಲ್ಲೆಯ ವಿವಿಧ ಗ್ರಾಮಗಳಿಗೆ ತಹಶಿಲ್ದಾರ ನೇತೃತ್ವದಲ್ಲಿ ಅಧಿಕಾರಿಗಳ ಭೇಟಿ, ಅಹವಾಲು ಆಲಿಕೆ*: *ಜಿಲ್ಲಾಧಿಕಾರಿ ಗುರುದತ್ತ ಹೆಗಡೆ*
*ಧಾರವಾಡ(ಕ.ವಾ)ಜು.14:* ಸರಕಾರದ ನಿರ್ದೇಶನದಂತೆ ಪ್ರತಿ ತಿಂಗಳ ಮೂರನೇಯ ಶನಿವಾರ ಆಯೋಜಿಸುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಬರುವ ಜುಲೈ 16 ರಂದು ಹಮ್ಮಿಕೊಂಡಿದ್ದು, ತಹಶಿಲ್ದಾರರ ನೇತೃತ್ವದಲ್ಲಿ ಅಧಿಕಾರಿಗಳು ಕಾರ್ಯಕ್ರಮಕ್ಕೆ ಆಯ್ಕೆ ಮಾಡಿರುವ ಗ್ರಾಮಕ್ಕೆ ತೆರಳಿ, ಜನರ ಅಹವಾಲು ಆಲಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಯಶಸ್ವಗೊಳಿಸಲು ಕಂದಾಯ ಸೇರಿದಂತೆ ಎಲ್ಲ ಇಲಾಖೆ ಹಾಗೂ ನಿಗಮ, ಮಂಡಳಿಗಳ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ, ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ, ತಮ್ಮ ಅಹವಾಲು,, ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರುವ ಮೂಲಕ ಕಾರ್ಯಕ್ರಮ ಸದುಪಯೋಗ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
ಗ್ರಾಮ ಭೇಟಿ ಸಂದರ್ಭದಲ್ಲಿ ಜನರು ಸಲ್ಲಿಸುವ ಅಹವಾಲುಗಳನ್ಬು ಸಂಭದಿಸಿದ ಇಲಾಖೆ ಅಧಿಕಾರಿಗಳು ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸಬೇಕು ಮತ್ತು ಸ್ಥಳದಲ್ಲಿಯೇ ಸಾಧ್ಯವಾದಷ್ಟು ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಆದ್ಯತೆ ನೀಡಬೇಕು. ಮೇಲಾಧಿಕಾರಿಗಳ ಅನುಮತಿ ಅಥವಾ ಇಲಾಖಾ ಹಂತದ ಕ್ರಮಗಳ ಅಗತ್ಯವಿದ್ದಲ್ಲಿ ಆ ಕುರಿತು ಮನವಿದಾರರಿಗೆ ಮನವರಿಕೆ ಮಾಡಬೇಕು ಮತ್ತು ಸಮಸ್ಯೆ ಪರಿಹರಿಸಲು ತಕ್ಷಣ ಸೂಕ್ತ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದ್ದಾರೆ.
ಆಯಾ ತಾಲೂಕಿನ ತಹಶಿಲ್ದಾರರ ತಮ್ಮ ವ್ಯಾಪ್ತಿಗೆ ಒಳಪಡುವ ಗ್ರಾಮ ಒಂದನ್ನು ಜುಲೈ ತಿಂಗಳಲ್ಲಿ ಆಯೋಜಿಸುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಆಯ್ಜೆ ಮಾಡಿಕೊಂಡಿದ್ದಾರೆ. ಆಯಾ ತಾಲೂಕಿನ ತಹಶೀಲ್ದಾರರೊಂದಿಗೆ ಎಲ್ಲ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಯೋಜನೆ ಹಾಗೂ ಅಗತ್ಯ ಮಾಹಿತಿಯೊಂದಿಗೆ ಖುದ್ದಾಗಿ ಹಾಜರಿದ್ದು ಸಾರ್ವಜನಿಕರ ಅಹವಾಲುಗಳಿಗೆ, ಬೇಡಿಕೆಗಳಿಗೆ ಸ್ಥಳದಲ್ಲಿಯೇ ಕಾರ್ಯಸೂಚಿಗಳನ್ವಯ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಪೂರ್ಣಗೊಳಿಸಿ ಸಂಬಂಧಿಸಿದ ಫಲಾನುಭವಿಗಳಿಗೆ ಪರಿಹಾರ ನೀಡಲು ಕ್ರಮವಹಿಬೇಕು.
ತಮ್ಮ ಇಲಾಖಾ ಕಾರ್ಯಕ್ರಮ, ಯೋಜನೆಗಳ ಕುರಿತು ಜಾಗೃತಿ ಮೂಡಿಸುವದರೊಂದಿಗೆ, ಜನರಿಂದ ತಮ್ಮ ಇಲಾಖೆಗೆ ಸಂಭಂದಿಸಿದ ದೂರು, ಅಹವಾಲು ಬಂದಲ್ಲಿ ಸೂಕ್ತವಾಗಿ ಸ್ಪಂದಿಸಿ, ಪರಿಹರಿಸಬೇಕು.
ಅಗತ್ಯವಿರುವ ಕಡೆ ಜಿಲ್ಲಾಮಟ್ಟದ ಅಧಿಕಾರಿಗಳು ಸಹ ಭಾಗವಹಿಸಬೇಕು. ಒಟ್ಟಾರೆ ಕಾರ್ಯಕ್ರಮ ದಿನದಂದು ಎಲ್ಲ ಅಧಿಕಾರಿಗಳು ಕ್ಷೇತ್ರಮಟ್ಟದಲ್ಲಿದ್ದು, ಜನರ ಅಹವಾಲುಗಳಿಗೆ ಸ್ಪಂದಿಸಬೇಂದು ಅವರು ತಿಳಿಸಿದ್ದಾರೆ.
ತಹಶಿಲ್ದಾರರು, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಯೋಜಿಸಬೇಕು. ಜನರಿಂದ ಸಲ್ಲಿಕೆಯಾದ ಅಹವಾಲುಗಳು, ಪರಿಹರಿಸಿದ ಅಹವಾಲುಗಳು, ಉನ್ನತ ಹಂತದಲ್ಲಿ ಪರಿಹರಿಸಬಹುದಾದ ಅಹವಾಲುಗಳ ಕುರಿತು ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ತಹಸಿಲ್ದಾರರು ಸಲ್ಲಿಸಬೇಕೆಂದು ಅವರು ಸೂಚಿಸಿದ್ದಾರೆ.
*ಜಿಲ್ಲಾ ಅಧಿಕಾರಿಗಳ ನಡೆಗಳ ಕಡೆ ಕಾರ್ಯಕ್ರಮ ನಡೆಯುವ ಗ್ರಾಮಗಳು:* ಅಣ್ಣಿಗೇರಿ ತಾಲೂಕಿನ ಸೈದಾಪೂರ ಗ್ರಾಮ, ಕಲಘಟಗಿ ತಾಲೂಕಿನ ದ್ಯಾಮಾಪೂರ, ಧಾರವಾಡ ತಾಲ್ಲೂಕಿನ ಮಾವಿನಕೊಪ್ಪ, ಹುಬ್ಬಳ್ಳಿ ತಾಲೂಕಿನ ಹಳ್ಯಾಳ, ನವಲಗುಂದ ತಾಲೂಕಿನ ಹಾಳಕುಸುಗಲ್, ಕುಂದಗೋಳ ತಾಲೂಕಿನ ಬಸಾಪೂರ, ಅಳ್ಳಾವರ ತಾಲೂಕಿನ ಕುಂಬಾರಕೊಪ್ಪ ಗ್ರಾಮಗಳಲ್ಲಿ ಆಯಾ ತಾಲೂಕಿನ ತಹಶೀಲ್ದಾರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಯಲಿದೆ. ಜುಲೈ 16 ರಂದು ಮಾನ್ಯ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುತ್ತಿರುವುದರಿಂದ, ಅವರ ಕಾರ್ಯಕ್ರಮದ ನಂತರ ಒಂದು ತಾಲೂಕಿನ ಕಾರ್ಯಕ್ರಮಕ್ಕೆ ತಾವು ಭೇಟಿ ನೀಡಿ, ಭಾಗವಹಿಸಲು ಪ್ರಯತ್ನಿಸುವದಾಗಿ ಅಥವಾ ಮುಂದಿನ ದಿನಗಳಲ್ಲಿ ಸದರಿ ಕಾರ್ಯಕ್ರಮವನ್ನು ತಾವು ಹಮ್ಮಿಕೊಳ್ಳುವದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.