ಕನ್ನಡ ನಾಡಿನ ಸಾವಿತ್ರಿ ಬಾಯಿ ಬಾಪುಲೆ ಈ ಸಾಧಕಿ, ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ.

ಕನ್ನಡ ನಾಡಿನ ಸಾವಿತ್ರಿ ಬಾಯಿ ಪುಲೆ ಈ ಸಾಧಕಿ, ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ.



ಇವರು ಲಕ್ಷ ಲಕ್ಷ ರೂಪಾಯಿಗಳನ್ನು ಸರಕಾರಿ ಶಾಲೆಗೆ ದತ್ತಿ ನೀಡಿದ್ದಾರೆ. ಹಾಗಂತ  ಇವರು ಕೋಟ್ಯಾಧೀಶರಲ್ಲ. ಇವರು ಸಾವಿರಾರು ಮಕ್ಕಳ ತಾಯಿ. ಒಬ್ಬರು ಸ್ವಂತ ಮಗುವಲ್ಲ. ಮನೆಗೆ ಬಂದರೆ ಹತ್ತಾರು ಮಂದಿ ಕೂಡದ ವಾಸದ ಮನೆ ಇವರದು. ಆದರೆ ಸಾವಿರಾರು ಜನದ ಮನದಲ್ಲಿ ಶಾಶ್ವತ ಸ್ಥಾನ ಪಡೆದವರಿವರು. ಹುಟ್ಟಿದ್ದು ಕೃಷ್ಣನ ನಾಡು ಉಡುಪಿ ಜಿಲ್ಲೆಯಾದರೂ ಸಾಧನಗೈದದ್ದು ಬೇಂದ್ರೆಯವರ ಧಾರವಾಡದಲ್ಲಿ. ಜನಿಸಿದ್ದು ಕ್ರೈಸ್ಥ ಧರ್ಮದಲ್ಲಾದರೂ ಸಾಧಿಸಿದ್ದು ಎಲ್ಲಾ ಧರ್ಮದವರ ಜೊತೆಗೂಡಿ. ದಿಕ್ಕಿಲ್ಲದೇ ಬದುಕುತ್ತಿದ್ದ ಇವರು. ಇಂದು ಸಾವಿರಾರು ಜನರಿಗೆ ದಿಕ್ಕಾಗಿದ್ದಾರೆ. ಬೇಕು ಬೇಕು ಎನ್ನುವರ ನಡುವೆ ಇವರು ಸಾಕು ಸಾಕು ಎನ್ನುತಾ ಶ್ರೀಮಂತೆ ಎನಿಸಿದ್ದಾರೆ. ಇವರದು ಹೃದಯ ಶ್ರೀಮಂತಿಕೆ.. ಅಂದು ಸಾವಿತ್ರಿ ಬಾಪುಲೆ ಅನೇಕ ಕಷ್ಟ ಎದುರಿಸಿ ಶಿಕ್ಷಣಕ್ಕಾಗಿ ಶ್ರಮಿಸಿ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಂತೆ ಇಂದು ಈ ಮಾತೆ ನಿಸ್ವಾರ್ಥ ಸೇವೆಯಿಂದ ಜನರ ಪ್ರೀತಿ ಪಡೆದಿದ್ದಾರೆ. ಇವರ ಬದುಕಿನ ತಿರುವುಗಳು ಯಾವ ಸಿನಿಮಾ ಗಳಿಗಿಂತ ಕಡಿಮೆ ಏನಿಲ್ಲ. ಆ ಕಷ್ಟಗಳ ಸುಳಿಯಲ್ಲಿ ಸಿಲುಕಿ ಗೆದ್ದು ಬಂದ ಎದ್ದು ಬಂದ ಇವರ ಜೀವನ ಸಾಧನೆ ನಮಗೆಲ್ಲಾ ಮಾದರಿ ಯಾರಿವರು ? ಏನಿವರ ಸಾಧನೆ ಎಂಬ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಸುಳಿಯುತ್ತಿರಬಹುದಲ್ವೇ ? ಹಾಗಾದರೆ ಮುಂದೆ ಓದಿ . ಓದಿದ ನಂತರ ಮನದಲ್ಲಿ ಈ ಮಾತೆಗೆ ನಮನ ಸಲ್ಲಿಸುವಿರಿ.

ಇವರ ಹೆಸರು ಲೂಸಿ ಸಾಲ್ಡಾನ್ . ಉಡುಪಿ ಜಿಲ್ಲೆಯ ಬೈಲೂರಿನಲ್ಲಿ ಕ್ಯಾಥೋಲಿಕ್ ಮನೆತನದಲ್ಲಿ 4-6-1948 ರಲ್ಲಿ ಜನಿಸಿದವರು .ಆರಂಭದಲ್ಲಿ ಎಲ್ಲಾ ಚೆನ್ನಾಗಿತ್ತು.. ಸಾಧಾರಣ ಮನೆತನ. ಅಮ್ಮ ಗೃಹಿಣಿ. ಅಪ್ಪ ಸಣ್ಣ ಉದ್ಯೋಗದಲ್ಲಿ ಇದ್ದವರು. ಅಲ್ಪ ಸ್ವಲ್ಪ ಆಸ್ತಿ ಇತ್ತು. ಹೀಗಿರಲು ಒಂದನೆಯ ತರಗತಿ ಇದ್ದಾಗ ಸಂಬಂಧಿಕರನ್ನು ಭೇಟಿಯಾಗಲು ಎಳೆಯ ಕಂದಮ್ಮ ಮನೆ ಮಂದಿ ಜೊತೆ, 11-4-1951 ರಲ್ಲಿ ರೈಲು ಏರಿ ಮುಂಬೈಗೆ ಹೊರಟಳು. ನಡು ರಾತ್ರಿ ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ಬಂದಾಗ ಎಲ್ಲರೂ ನಿದ್ರೆಗೆ ಶರಣಾಗಿದ್ದಾಗ ಏನೂ ಅರಿಯದ ಈ ಬಾಲೆ ಬಾಗಿಲಿನಿಂದ  ಇಳಿದು ನೀರು ಕುಡಿಯಲು ನಳದ ಬಳಿ ಹೋಯಿತು. ಅಷ್ಟರಲ್ಲಿ ರೈಲು ಹೋಗಿಯೇ  ಬಿಟ್ಟಿತು. ಅಲ್ಲಿಯೇ ಇದ್ದ ರೈಲು ನೌಕರರಾದ ಮಹದೇವ ಹಾಗೂ ಅವರ ಇಬ್ಬರೂ  ಗೆಳೆಯರು ಬಂದು ಈ ಮಗುವನ್ನು ವಿಚಾರಿಸಿದರು. ಈ ಮಗುವಿಗೆ ಕನ್ನಡ ಬಾರದು. ಆ ರೈಲು ನೌಕರರಿಗೆ ಕೊಂಕಣಿ ಬಾರದು. ಮಹದೇವನಿಗೆ ದಾರಿ ತೋಚದೇ ಈ ಮಗುವಿನ ತಂದೆ ತಾಯಿ ಸಿಗುವರೆಗೆ ತಮ್ಮ ಬಳಿ ಇರಲೆಂದು ತಮ್ಮ ಕೊಠಡಿಯಲ್ಲಿ ಉಳಿಸಿಕೊಂಡು ಮುನ್ನಡೆದರು. ಗೆಳೆಯರ ಸಹಕಾರ ದೊರೆಯಿತು. ಹೀಗಿರಲು ಹಲವು ವರ್ಷದ ನಂತರ ಇವಳ ಬಗ್ಗೆ ತಂದೆ ತಾಯಿಗೆ ತಿಳಿದು ಕರೆಯಲು ಬಂದರು ಮಗಳು ಹೋಗಲಿಲ್ಲ. ಹೀಗೆ ಮಗು ಬೆಳೆಯುತ್ತಾ ಹೋಯಿತು. ಜೊತೆಗೆ ಶಾಲೆ ಕಲಿಯುತ್ತಾ ಹೋಯಿತು. ಹೀಗಿರಲು ಮಹದೇವ ಈ ಹುಡುಗಿಯನ್ನೇ ವಿವಾಹವಾಗಲು ಬಯಸಿದರು.. ಹಲವರ ವಿರೋಧದ ನಡುವೆ ಮದುವೆ ಆದರೂ ಕೂಡಾ. ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯಿತು ಎಂಬಂತೆ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಮಹದೇವಪ್ಪ ತೀರಿಹೋದರು

. ಲೂಸಿ ಬಾಲ ವಿಧವೆಯಾದಳು. ಜೀವನದ ಪ್ರತಿಕ್ಷಣ ಸಂಕಷ್ಟ ಪಟ್ಟಳು. ಹೀಗಿರಲು ಮಾವನ ಮನೆಯಲ್ಲಿ ಇದ್ದು ನೆರೆ ಹೊರೆಯವರ ಸಹಕಾರ ಪಡೆದು ಓದು ಮುಂದುವರೆಸಿದಳು. ಗುರುಗಳ ಮಾರ್ಗದರ್ಶನದಲ್ಲಿ ಓದಿ ಉನ್ನತ ದರ್ಜೆಯಲ್ಲಿ ಪಾಸಾದಳು. ಹುಬ್ಬಳ್ಳಿ ಮಹಿಳಾ ವಿದ್ಯಾಪೀಠದಲ್ಲಿ ಕಲಿತಳು. ನಿಷ್ಟೆಯಿಂದ ಓದಿ ಗುರುಗಳ ಪ್ರೀತಿಗೆ ಪಾತ್ರಳಾಗಿ ಕುಮಟಾದಲ್ಲಿ ಬಿ.ಇಡಿ ಓದಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನೇಮಕವಾದರು. ಆರಂಭದಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಎಂಬಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಇವರು. ತದನಂತರ ಧಾರವಾಡ ಜಿಲ್ಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಘಟಗಿಯಲ್ಲಿ ಸರಕಾರಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ ಇವರು ಮಕ್ಕಳೇ ನನ್ನ ಸರ್ವಸ್ವ. ಶಾಲೆಗಳೇ ತನ್ನ ಉಸಿರು ಎಂಬಂತೆ ಸೇವೆ ಸಲ್ಲಿಸಿದರು. ತದನಂತರ ಧಾರವಾಡ ತಾಲೂಕಿನ ಹೆಬ್ಬಳ್ಳಿ , ಲೋಕೂರ , ಮುಗದ , ಅಳ್ನಾವರ ಇತರೆಡೆ ಶಿಕ್ಷಕಿಯಾಗಿ ಮಕ್ಕಳಿಗೆ ಪ್ರೀತಿ ಪಾತ್ರರಾದರು.





       ಇಷ್ಟೇ ಆಗಿದ್ದರೆ ಇವರದು ಇತರರಂತೆ ಸಾಮಾನ್ಯ ಸಾಧನೆ ಎನಿಸುತ್ರಿತ್ತು. ಆದರೆ ಈ ಮಹಿಳೆ ತನಗೋಸ್ಕರ ಏನನ್ನು ಗಳಿಸಲಿಲ್ಲ. ಮರು ಮದುವೆ ಮಾಡಿಕೊಳ್ಳಲಿಲ್ಲ. ತಮಗೆ ಬರುವ ವೇತನದಲ್ಲಿ ಖರ್ಚಿಗೆ ಬೇಕಾಗುವಷ್ಟು ಪಡೆದು ಉಳಿದಿದ್ದನ್ನು ಸರಕಾರಿ ಶಾಲಾ ಬಡ ಮಕ್ಕಳಿಗೆ ಅಧ್ಯಯನ ಸಾಮಗ್ರಿ ಪಡೆಯಲು ನೀಡಿದಳು. ಭರ್ತಿ ಮೂವ್ವತ್ತು ವರ್ಷ ಮಕ್ಕಳಿಗೆ ಧನಸಹಾಯ , ಶಾಲೆಗಳಿಗೆ ದತ್ತಿ ನೀಡುವುದು. ಕಟ್ಟಡಗಳ ದುರಸ್ತಿ ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳಿಗೆ ಧನ ವಿನಿಯೋಗಿಸಿದರು. ಮೊಟ್ಟ ಮೊದಲು ಹೆಬ್ಬಳ್ಳಿಯ ಸರಕಾರಿ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಸರಕಾರಿ  ಹಿರಿಯ ಪ್ರಾಥಮಿಕ ಶಾಲೆಗಳಿಗೆ ೨೨,೦೦೦ ಸಾವಿರ ರೂಪಾಯಿ ದತ್ತಿ ದಾನ ಮಾಡಿದರು. ಅಲ್ಲಿಂದ ಪ್ರಾರಂಭವಾದ ಅವರ ದತ್ತಿ ದಾನ ಇಂದಿಗೂ ನಿರಂತರವಾಗಿ ನಡೆದಿದೆ.ಅವರಿಂದ ದತ್ತಿ ದಾನ ಪಡೆದ ಶಾಲೆಗಳು - ಸಂಸ್ಥೆಗಳು ಇಂತಿವೆ.

 ಐವ್ವತ್ತು ಸಾವಿರ ರೂಪಾಯಿಗಳ ದತ್ತಿ ದಾನ ಪಡೆದ ಶಾಲೆಗಳು - ಸದ್ಗುರು ವಾಸುದೇವ ಪ್ರೌಢಶಾಲೆ ಹೆಬ್ಬಳ್ಳಿ. .ಕೆ.ವಿ.ಜಿ.ಬಿ.ಶಾಲೆ.ಅಳ್ನಾವರ.ಕರ್ನಾಟಕ ವಿದ್ಯಾವರ್ಧಕ ಸಂಘ, ಪ್ರೀಮಿಯರ್ ಸಿಟಿಜನ್ ಕ್ಲಬ್, ಉತ್ತರ ಕರ್ನಾಟಕ ಲೇಖಕಿಯರ ಸಂಘ , ಗುಬ್ಬಚ್ಚಿ ಗೂಡು ಶಾಲೆ ಮಾಳಾಪೂರ ಧಾರವಾಡ . 30000 ಸಾವಿರಕ್ಕಿಂತ ಹೆಚ್ಚು ದತ್ತಿ ದಾನ ಪಡೆದ ಶಾಲೆಗಳು ಕೂಡಾ ಹಲವು ಇವೆ..ಸ.ಹಿ.ಪ್ರಾ.ಶಾಲೆ ಸಲಕಿನಕೊಪ್ಪ, .ಸ.ಹಿ.ಪ್ರಾ.ಶಾಲೆ ಮುಗದ . ಇಷ್ಟೇ ಅಲ್ಲದೇ ಇಪ್ಪೈತ್ತೈದು ಸಾವಿರ , ಇಪ್ಪತ್ತು ಸಾವಿರ , ಹದಿನೈದು ,ಹತ್ತು , ಐದು ಸಾವಿರ ದತ್ತಿ ದಾನ ಪಡೆದ ಶಾಲೆ ಸಂಸ್ಥೆಗಳು ನೂರಾರು ಅವುಗಳಲ್ಲಿ ಇಲ್ಲಿ ಕೆಲವನ್ನು ಹೆಸರಿಸಬಹುದು.ನೆಹರು ಪ್ರೌಢಶಾಲೆ ಹೆಬ್ಬಳ್ಳಿ ,ನೆಹರು ಪದವಿಪೂರ್ವ ಕಾಲೇಜು ಹೆಬ್ಬಳ್ಳಿ ಸ.ಹಿ.ಪ್ರಾ.ಶಾಲೆ ಜೀರಿಗವಾಡ ,ಬಾಲ ಬಳಗ ಶಾಲೆ ಧಾರವಾಡ, ಸ.ಹಿ.ಪ್ರಾ.ಶಾಲೆ ಆನಂದನಗರ ಹುಬ್ಬಳ್ಳಿ ,  ಮದಿಹಾಳ , ಬಾಡ , ತಡಕೋಡ ,  ವೆಂಕಟಾಪುರ, ಸೇಂಟ್ ಥೆರೆಸಾ ಶಾಲೆ ಅಳ್ನಾವರ, ಬೇರುಗಂಡಿ ಬೃಹನ್ಮಠ ಚಿಕ್ಕಮಗಳೂರು, ಆದರ್ಶ ವಿದ್ಯಾಲಯ ಧಾರವಾಡ, ವನಿತಾ ಸೇವಾ ಸಮಾಜ ಧಾರವಾಡ, ರಂಗಾಯಣ ಧಾರವಾಡ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದುರ್ಗಾಕಾಲನಿ ಧಾರವಾಡ. ನಂಜಯ್ಯಗಾರನಹಳ್ಳಿ ಗೌರಿಬಿದನೂರು ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ.,ಸ.ಹಿ.ಪ್ರಾ.ಶಾಲೆ ಮುಮ್ಮಿಗಟ್ಟಿ, ಮುಗಳಿ, ದುಬ್ಬನಮರಡಿ, ಭೈರಿದೇವರಕೊಪ್ಪ , ಗರಗ, ಮಡಕಿಹೊನ್ನಳ್ಳಿ,.ಕಡಬಗಟ್ಟಿ,.ಖಾನಾಪುರ  ನರೇಂದ್ರ,,.ಸುಳ್ಳ, ಸವದತ್ತಿ , ಮುಗದ , ಗೋವನಕೊಪ್ಪ, ವರವಿನಾಗಲಾವಿ , ಕೋಟೂರ ,ಕಲಕೇರಿ ,ಮಾರಡಗಿ , ಸೋಮಾಪುರ , ಲೋಕುರ ,ಬೇಗೂರ , ಕುರುಬಗಟ್ಟಿ ,ಅಂಬೊಳ್ಳಿ , ಮುರಕಟ್ಟಿ , ಹೊನ್ನಾಪುರ ,ನಿಗದಿ , ಬೆನಕಟ್ಟಿ , ಎತ್ತಿನಗುಡ್ಡ , ಗೋವನಕೊಪ್ಪ ಹೀಗೆ ಈ ಪಟ್ಟಿ ಇನ್ನು ಬೆಳೆಯುತ್ತಲೇ ಹೋಗುತ್ತದೆ. 

ಇವರು ಜನಿಸಿದ್ದು ಉಡುಪಿ ಜಿಲ್ಲೆಯಾದರೂ ನೆಲೆಸಿದ್ದು ಕಾರ್ಯ ನಿರ್ವಹಿಸಿದ್ದು ಹೆಚ್ಚಾಗಿ ಧಾರವಾಡ ಜಿಲ್ಲೆಯಲ್ಲಿ. ಜಿಲ್ಲೆಯ ಬಹುತೇಕ ಸರಕಾರಿ ಶಾಲೆಗಳಿಗೆ ಸೇವಾ ಸಂಸ್ಥೆಗೆ ಇವರ ದತ್ತಿ ನೆರವು ಸಹಾಯ ದೊರೆತಿದೆ. ಇವರು ಈ ಭಾಗದಲ್ಲಿ ಅಷ್ಟೇ ಅಲ್ಲಾ ನಾಡಿನಲ್ಲಿಯೇ ತಮ್ಮ ಸೇವಾ ಮನೋಭಾವನೆಯಿಂದ ಹೆಸರುವಾಸಿ. ಸಮಾಜಕ್ಕೆ ಇಷ್ಟು ಸಹಾಯ ನೀಡಿದರೂ.. ಪ್ರತಿಯಾಗಿ ಏನನ್ನು ನಿರೀಕ್ಷಿಸದೇ. ಈಗ ನಿವೃತ್ತಿ ಹೊಂದಿ ಹದಿನೈದು ವರ್ಷ ಆಗ್ತಾ ಬಂತು. ಈಗಲೂ ಪ್ರತಿ ತಿಂಗಳ ವೇತನ ಸರ್ಕಾರಿ ಶಾಲೆ ಮಕ್ಕಳಿಗೆ ಮೀಸಲು.ಇವರಿಂದ ಧನ ಸಹಾಯ ಪಡೆದ ಶಾಲೆಗಳು ನೂರಾರು, ಮಕ್ಕಳು ಸಾವಿರಾರು. ಈ ಮಹಿಳೆ ಧರ್ಮ ಮೀರಿ ಬೆಳೆದವರು. ನಿಮ್ಮ ಈ ಸಾಧನೆಗೆ ಸ್ಪೂರ್ತಿ ಯಾರೆಂದು ಈ ಸಾಧಕಿಯನ್ನು ಮಾತಿಗೆಳೆದರೆ ನಾನು ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿರುವೆ ನನ್ನ ಕಷ್ಟ ನನ್ನ ನಾಡಿನ ಮಕ್ಕಳಿಗೆ ಬರಬಾರದು. ಮಕ್ಕಳು ಶಿಕ್ಷಣವಂತರಾದರೆ ಸ್ವಾವಲಂಬಿ ಬದುಕನ್ನು ನಿರ್ವಹಿಸುವುದರ ಜೊತೆಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳುವರು. ಮಕ್ಕಳೇ ನನ್ನ ಆಸ್ತಿ. ಸರಕಾರಿ ಶಾಲೆಗಳು ಸೇವಾ ಸಂಸ್ಥೆಗಳೇ ನನ್ನ ಉಸಿರು ಎಂದು ಈ ಅಕ್ಷರ ಶಬರಿ ಮನತುಂಬಿ ಹೇಳುವರು.ತನಗೋಸ್ಕರ ಏನನ್ನು ಆಸ್ತಿ ಮಾಡಿಕೊಳ್ಳದ ಇವರು ಅನೇಕ ಮಕ್ಕಳ ಬದುಕಿಗೆ ಆಸರೆಯಾಗಿ ನಿಸ್ವಾರ್ಥ ಬದುಕು ನಡೆಸುತ್ತಿದ್ದಾರೆ.ಇವರಿಗೆ ಪಬ್ಲಿಕ್ ,ಸುವರ್ಣ ವಾಹಿನಿ ಸಾಧಕ ಮಹಿಳೆ ಪ್ರಶಸ್ತಿ , ಅಪ್ನಾದೇಶ ಬಳಗ ಉತ್ತಮ ಶಿಕ್ಷಕಿ , ಗ್ರಾಮೀಣ ರತ್ನ ರಾಜ್ಯ ಪುರಸ್ಕಾರ ದೊರೆತಿವೆ. ಇವರು ಯಾವತ್ತು ಪ್ರಶಸ್ತಿ ಸನ್ಮಾನ ಬಯಸದ ವಿಶಾಲ ಹೃದಯಿ. ಸಾಧನೆಗೆ ಹೊಸ ವ್ಯಾಖ್ಯಾನ ಬರೆದವರು ಇವರು. ಬಡ ಮಕ್ಕಳ ನಗುವಲ್ಲಿ ತೃಪ್ತಿ ಕಂಡವರು. ಈ ಮಹಿಳೆ ಸಾಧನೆ ನಮಗೆಲ್ಲಾ ಸದಾ ಮಾದರಿ. ಈ ಅಕ್ಷರ ಶಬರಿ ವಿದ್ಯಾಕಾಶಿಯ ಸರಸ್ವತಿ. ಬದುಕನ್ನು ಸಾರ್ಥಕ ಪಡೆಸಿಕೊಂಡ ಸಾಧಕಿ ಇವರಿಗೆ ನಮ್ಮ ನಮನಗಳು. ಇವರ ಕುರಿತು ಇತ್ತೀಚೆಗೆ ಡೆಕ್ಕನ್‌ ಹೆರಾಲ್ಡ್‌ ಇಂಗ್ಲಿಷ್ ಪತ್ರಿಕೆಯಲ್ಲಿ ಬಂದ ವರದಿಯನ್ನು, ಓದಿ ಪ್ರೇರಿತರಾಗಿ, ಬೆಂಗಳೂರಿನ ರೋಹನ್ ಕೇರ್ ಪೌಂಡೇಶನ ಸಂಸ್ಥೆಯವರು ೨೦೨೨ ರ ಜೂನ್ ೪ ನಾಲ್ಕರಂದು ಈ ಮಹಾತಾಯಿಯನ್ನು ನೋಡಲು, ಧಾರವಾಡ ನಗರಕ್ಕೆ ಆಗಮಿಸಿ ಒಂದು ಪ್ರೌಢಶಾಲೆ ಹತ್ತು ಪ್ರಾಥಮಿಕ ಶಾಲೆಗಳಿಗೆ ತಲಾ ಹತ್ತು ಸಾವಿರದಂತೆ ಸರ್ಕಾರಿ ಶಾಲೆಗಳಿಗೆ ದತ್ತಿಯನ್ನು ಇವರ ಅಮೃತ ಹಸ್ತದಿಂದ ನೀಡಿದರು, 




ಲೇಖಕರು - ಎಲ್ ಐ ಲಕ್ಕಮ್ಮನವರ, ಅದ್ಯಕ್ಷರು ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆ ಧಾರವಾಡ

ಮೊಬೈಲ್ -    9880454233

1 ಕಾಮೆಂಟ್‌ಗಳು

ನವೀನ ಹಳೆಯದು

نموذج الاتصال